ADVERTISEMENT

ಗ್ರಾಹಕರ ನಂಬಿಕೆಯೇ ಬ್ಯಾಂಕ್‌ನ ಶ್ರೇಯ: ಕಿಮ್ಮನೆ ಜಯರಾಮ್

ರಾಮಣ್ಣ ಶ್ರೇಷ್ಠಿ ಪಾರ್ಕ್‌; ಕರ್ಣಾಟಕ ಬ್ಯಾಂಕಿನ 963ನೇ ಶಾಖೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 16:04 IST
Last Updated 26 ಜೂನ್ 2025, 16:04 IST
ಶಿವಮೊಗ್ಗದ ರಾಮಣ್ಣ ಶ್ರೇಷ್ಟಿ ಪಾರ್ಕ್‌ನಲ್ಲಿ ಕರ್ಣಾಟಕ ಬ್ಯಾಂಕಿನ 963ನೇ ಶಾಖೆಯನ್ನು ಉದ್ಯಮಿ ಕಿಮ್ಮನೆ ಜಯರಾಮ್ ಉದ್ಘಾಟಿಸಿದರು
ಶಿವಮೊಗ್ಗದ ರಾಮಣ್ಣ ಶ್ರೇಷ್ಟಿ ಪಾರ್ಕ್‌ನಲ್ಲಿ ಕರ್ಣಾಟಕ ಬ್ಯಾಂಕಿನ 963ನೇ ಶಾಖೆಯನ್ನು ಉದ್ಯಮಿ ಕಿಮ್ಮನೆ ಜಯರಾಮ್ ಉದ್ಘಾಟಿಸಿದರು   

ಶಿವಮೊಗ್ಗ: ಇಡೀ ದೇಶದಲ್ಲಿಯೇ ಪ್ರಾಕೃತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಪರಂಪರೆಯನ್ನು ಮಾತ್ರ ಶಿವಮೊಗ್ಗ ಜಿಲ್ಲೆ ಹೊಂದಿಲ್ಲ. ಇಲ್ಲಿ ಅಭಿವೃದ್ಧಿಗೂ ವಿಫುಲ ಅವಕಾಶವಿದೆ ಎಂದು ಉದ್ಯಮಿ ಕಿಮ್ಮನೆ ಜಯರಾಮ್ ಹೇಳಿದರು.

ಇಲ್ಲಿನ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ಕರ್ಣಾಟಕ ಬ್ಯಾಂಕಿನ 963ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ಣಾಟಕ ಬ್ಯಾಂಕ್ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಸಾಧಿಸುತ್ತಿದೆ. ಇದಕ್ಕೆ  ಬ್ಯಾಂಕಿನ ಸಿಬ್ಬಂದಿ ವರ್ಗ, ಅಧಿಕಾರಿ ವರ್ಗ ಮತ್ತು ಆಡಳಿತ ಮಂಡಳಿಯೇ ನೇರ ಕಾರಣ. ಅವರು ಗ್ರಾಹಕರ ಜೊತೆ ಅತ್ಯಂತ ನಿಕಟವಾದ ಸಂಪರ್ಕ, ಸಂವಹನ ಹೊಂದಿದೆ ಎಂದು ಶ್ಲಾಘಿಸಿದರು.

ADVERTISEMENT

ಹಿರಿಯ ಗ್ರಾಹಕ ಡಾ.ಪಿ. ನಾರಾಯಣ್ ಮಾತನಾಡಿ, ಕರ್ಣಾಟಕ ಬ್ಯಾಂಕ್ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಬ್ಯಾಂಕ್ ವ್ಯವಸ್ಥೆಯಲ್ಲಿನ ಮಾನವೀಯ ಸಂಬಂಧವೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಿದರು.

ಬ್ಯಾಂಕಿನ ಜನರಲ್ ಮ್ಯಾನೇಜರ್ ಎಸ್.ರವಿಚಂದ್ರನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ₹1.80 ಲಕ್ಷ ಕೋಟಿ ವಹಿವಾಟು ದಾಟಿ ಮುಂದಡಿ ಇಡುತ್ತಿದೆ. ಇದು ಶಿವಮೊಗ್ಗ ವಿಭಾಗದಲ್ಲಿ 85ನೇ ಶಾಖೆಯಾಗಿದೆ ಎಂದರು.

ಶಿವಮೊಗ್ಗ ವಿಭಾಗೀಯ ಎಜಿಎಂ ಎಚ್.ಎ. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಲಸ್ಟರ್ ಹೆಡ್ ಜಿ.ಎಸ್. ಗಣೇಶ್ ಕುಮಾರ್ ನಿರೂಪಿಸಿದರು. ಶಾಖಾ ವ್ಯವಸ್ಥಾಪಕ ಎಸ್. ನಾಗೇಂದ್ರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.