ಶಿವಮೊಗ್ಗ: ವಸತಿ ಯೋಜನೆಯಡಿಯಲ್ಲಿ ಮುಸ್ಲಿಮರಿಗೆ ಶೇ 15ರಷ್ಟು ಮೀಸಲಾತಿ ನೀಡಲು ಸಚಿವ ಸಂಪುಟ ತೀರ್ಮಾನಿಸಿರುವುದನ್ನು ವಿರೋಧಿಸಿ, ರಾಷ್ಟ್ರಭಕ್ತ ಬಳಗದಿಂದ ಜೂನ್ 25ರಂದು ಬೆಳಿಗ್ಗೆ 10ಕ್ಕೆ ಇಲ್ಲಿನ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ರಾಷ್ಟ್ರಭಕ್ತ ಬಳಗದ ಮುಖಂಡ ಕೆ.ಈ. ಕಾಂತೇಶ್ ಹೇಳಿದರು.
ರಾಜ್ಯ ಸರ್ಕಾರ ಮುಸ್ಲಿಮರನ್ನು ಓಲೈಸಿಕೊಂಡು ತುಷ್ಟೀಕರಣದ ರಾಜಕೀಯ ಮಾಡಿ, ಮತಬ್ಯಾಂಕ್ ಗಟ್ಟಿಗೊಳಿಸಲು ಈಗ ವಸತಿ ಜಿಹಾದ್ ಮಾಡಲು ಹೊರಟಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ರಾಯಭಾರಿಯನ್ನಾಗಿಸಿದ ಸರ್ಕಾರ ಈಗ ಅಣ್ಣನ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಮಾತನ್ನು ಈಗ ತಿರುಚಿ ಸರ್ವವೂ ಸಾಬರಪಾಲು ಎಂದು ನಿರೂಪಿಸಲು ಹೊರಟಿ’ ಎಂದು ಆರೋಪಿಸಿದರು.
ರಾಜ್ಯದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ₹ 1,000 ಕೋಟಿ ಮೀಸಲಿಡಲಾಗಿದೆ. ಆದರೂ ಈಗ ಬಡವರಿಗಾಗಿ ಮೀಸಲಿರುವ ಮನೆಗಳನ್ನು ಕಿತ್ತು ಅಲ್ಪಸಂಖ್ಯಾತರಿಗೆ ನೀಡಲು ಹೊರಟಿರುವುದು ಖಂಡನೀಯ. ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ರಾಷ್ಟ್ರಭಕ್ತ ಬಳಗದ ಕೆ.ಎಸ್. ಈಶ್ವರಪ್ಪರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಾಗಿದೆ ಎಂದರು.
ಪ್ರಮುಖರಾದ ಎಂ. ಶಂಕರ್, ಇ. ವಿಶ್ವಾಸ್, ಶಿವಾಜಿ, ಜಾದವ್, ಚನ್ನಬಸಪ್ಪ, ಕುಬೇರಪ್ಪ, ಗೋವಿಂದಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.