ಪ್ರಜಾವಾಣಿ ವಾರ್ತೆ
ಶಿವಮೊಗ್ಗ: ‘ಕಾಂತರಾಜ್ ಆಯೋಗದ ವರದಿಯಲ್ಲಿ ವನ್ನಿಯಕುಲ ಕ್ಷತ್ರಿಯ ಸಮಾಜದ ಜನಸಂಖ್ಯೆಯನ್ನು ಅತಿ ಕಡಿಮೆ ತೋರಿಸಿದೆ. ಸರ್ಕಾರ ಮತ್ತೊಮ್ಮೆ ಜನಗಣತಿ ನಡೆಸಿ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು’ ಎಂದು ವನ್ನಿಕುಲಯ ಕ್ಷತ್ರಿಯ ಸಂಘದ ರಾಜ್ಯ ಘಟಕ ಅಧ್ಯಕ್ಷ ಆರ್. ಶ್ರೀನಿವಾಸ್ ಆಗ್ರಹಿಸಿದರು.
‘ಕಾಂತರಾಜ್ ಆಯೋಗದ ವರದಿಯಲ್ಲಿ ವನ್ನಿಯಕುಲವನ್ನು ತಿಗಳ ಜಾತಿಯ ಜತೆ ಸೇರಿಸಿ ಅಂಕಿ ಅಂಶ ನೀಡಿದ್ದಾರೆ. ಇದರಿಂದ ನ್ಯಾಯಯುತವಾಗಿ ನಮಗೆ ಸಿಗಬೇಕಿರುವ ಸೌಲಭ್ಯಗಳು ಸಿಗದಂತೆ ಆಗಿವೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
‘ಜಯಪ್ರಕಾಶ್ ಹೆಗ್ಡೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಅವರಿಗೆ ದಾಖಲೆ ಸಮೇತ ಮಾಹಿತಿ ನೀಡಿ, ವರದಿ ಸಲ್ಲಿಸಲಾಗಿತ್ತು. ತಿಗಳರಿಂದ ನಮ್ಮನ್ನು ಬೇರ್ಪಡಿಸಿ ಎಂದು ಅವರಿಗೆ ಮನವಿ ಮಾಡಲಾಗಿತ್ತು. ಆದರೂ ಅವರು ಗೊಂದಲಗಳನ್ನು ಸೃಷ್ಟಿಸಿ, ಜಾತಿಗಣತಿ ಪಟ್ಟಿಯಲ್ಲಿ ತಿಗಳರನ್ನು ವಹ್ನಿ ಕುಲಕ್ಷತ್ರಿಯ ಎಂದು ಹೊಸದಾಗಿ ಬಿಂಬಿಸಿದ್ದಾರೆ’ ಎಂದು ಆರೋಪಿಸಿದರು.
‘ವನ್ನಿಯಕುಲವನ್ನು ಬ್ರಿಟಿಷರ ಕಾಲದಲ್ಲಿಯೇ ಗುರುತಿಸಲಾಗಿತ್ತು. ಆದರೂ ಕಾಂತರಾಜ್ ಆಯೋಗ ನಮ್ಮನ್ನು ತಿಗಳರ ಜಾತಿಗೆ ಸೇರಿಸಿದೆ. ವನ್ನಿಯ ಕುಲದ 150 ವರ್ಷಗಳ ಇತಿಹಾಸವನ್ನು ಕಾಂತರಾಜ್ ಆಯೋಗದ ಮುಂದೆ ಇಡಲಾಗಿತ್ತು. ಅವರೂ ಇದನ್ನು ಸರಿಪಡಿಸಲಿಲ್ಲ. ಈಗ ತಿಗಳರು ತಮ್ಮನ್ನು ವಹ್ನಿಕುಲ ಎಂದೇ ಮಾಡಿಕೊಂಡಿದ್ದಾರೆ. ರಾಜಕೀಯದಲ್ಲಿ ಪ್ರಬಲವಾಗಿರುವ ತಿಗಳ ನಾಯಕರು ಇದಕ್ಕೆ ಬೆಂಬಲ ನೀಡಿದ್ದಾರೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಆರೋಪಿಸಿದರು.
‘ವನ್ನಿಯ, ವನ್ನಿಯರ್, ವನ್ನಿಯ ಗೌಂಡರ್, ಗೌಂಡರ್, ಖಂಡರ್, ಪಡೆಯಾಚ್ಚಿ, ಅಗ್ನಿಕುಲ ಕ್ಷತ್ರಿಯ, ಶಂಭುಕುಲ ಕ್ಷತ್ರಿಯ ಮತ್ತು ಪಳ್ಳಿ ಜಾತಿಗಳನ್ನು ತಿಗಳರ ಅಡಿಯಲ್ಲಿ ತರಲಾಗಿದೆ. ರಾಜ್ಯದಲ್ಲಿ ೨೫ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ತಮ್ಮ ಜನಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗಿದೆ’ ಎಂದು ದೂರಿದರು.
‘ವನ್ನಿಯ ಕುಲದ ವೀರರುದ್ರ ವನ್ನಿಯ ಮಹಾರಾಜರ ಪುರಾಣದ ಇತಿಹಾಸವನ್ನು ಕದ್ದು ಅಗ್ನಿಬನ್ನಿರಾಯನಿಗೆ ಸೇರಿಸಿದ್ದಾರೆ. ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಿ, ಅಗ್ನಿಬನ್ನಿರಾಯ ಜಯಂತ್ಯುತ್ಸವ ಆಚರಣೆಗೆ ಸರ್ಕಾರದ ಆದೇಶವನ್ನೂ ಪಡೆದಿದ್ದಾರೆ. ಈ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಹೋರಾಟ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
‘ಈಚೆಗೆ ತಿಗಳ ಅಭಿವೃದ್ಧಿ ನಿಗಮ ಮಾಡಲಾಗಿದೆ. ಇದರಲ್ಲಿ ಸೇರಲು ನಾವು ಸಿದ್ಧರಿಲ್ಲ. ನಮ್ಮನ್ನು ತಿಗಳ ಸಮುದಾಯದಿಂದ ಪ್ರತ್ಯೇಕಿಸಿ, ಅಭಿವೃದ್ಧಿ ನಿಗಮ ಮಾಡಬೇಕು. ನಮಗೆ ಸಿಗಬೇಕಿರುವ ಎಲ್ಲ ಸೌಲಭ್ಯಗಳು ತಿಗಳ ಸಮುದಾಯದ ಪಾಲಾಗುತ್ತಿದ್ದು, ಸಿಎಂ ಈ ಬಗ್ಗೆ ಗಮನ ಹರಿಸಿ, ನಮಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ಆಗ್ರಹಿಸಿದರು.
ಪ್ರಮುಖರಾದ ಶಂಕರ್, ದೇವರಾಜ ಸ್ವಾಮಿ, ಪ್ರಸಾದ್, ತಂಗವೇಲು, ಕೃಷ್ಣರಾಜ್, ಹರಿನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.