ADVERTISEMENT

ಪರಿಸರಸ್ನೇಹಿ ಕೈಗಾರಿಕೆಗಳ ಅನುಷ್ಠಾನಕ್ಕೆ ಬೇಕಿದೆ ಆದ್ಯತೆ

ಕೈಗಾರಿಕಾ ತರಬೇತಿ ಶಿಬಿರದಲ್ಲಿ ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:43 IST
Last Updated 1 ನವೆಂಬರ್ 2025, 5:43 IST
ಸಾಗರದಲ್ಲಿ ಶುಕ್ರವಾರ ನಡೆದ ಕೈಗಾರಿಕಾ ತರಬೇತಿ ಶಿಬಿರವನ್ನು ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ಉದ್ಘಾಟಿಸಿದರು
ಸಾಗರದಲ್ಲಿ ಶುಕ್ರವಾರ ನಡೆದ ಕೈಗಾರಿಕಾ ತರಬೇತಿ ಶಿಬಿರವನ್ನು ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ಉದ್ಘಾಟಿಸಿದರು   

ಸಾಗರ: ಆರ್ಥಿಕ ಸ್ವಾವಲಂಬನೆ, ಉದ್ಯೋಗ ಸೃಷ್ಟಿಯ ಜೊತೆಗೆ ಪರಿಸರವನ್ನು ಕಾಪಾಡುವ ಪರಿಸರಸ್ನೇಹಿ ಕೈಗಾರಿಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ಹೇಳಿದರು.

ಇಲ್ಲಿನ ಶಂಕರ ಮಠದ ಭಾರತೀತೀರ್ಥ ಸಭಾಭವನದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಮೊಗ್ಗ ಜಿಲ್ಲಾ ಇಂಡಸ್ಟ್ರೀಸ್ ಅಸೋಸಿಯೇಷನ್ ಶುಕ್ರವಾರ ಏರ್ಪಡಿಸಿದ್ದ ಕೈಗಾರಿಕಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೈಗಾರಿಕೆಗಳಿಂದ ವಾಯುಮಾಲಿನ್ಯದ ಪ್ರಮಾಣ ಹೆಚ್ಚುತ್ತಿದೆ ಎಂಬ ದೂರು ವ್ಯಾಪಕವಾಗಿದೆ. ಕೈಗಾರಿಕೆಗಳು ತಲೆ ಎತ್ತುವುದು ಅನಿವಾರ್ಯ. ಅವುಗಳ ಹುಟ್ಟು ಮತ್ತು ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ. ಆದರೆ ಪರಿಸರಕ್ಕೆ ಪೂರಕವಾಗಿ ಕೈಗಾರಿಕೆಗಳು ಇರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ ಎಂದರು.

ADVERTISEMENT

ಈಗಾಗಲೇ ಕೈಗಾರಿಕೆಗಳಲ್ಲಿ ತೊಡಗಿಕೊಂಡವರಿಗೆ ಹಾಗೂ ನೂತನವಾಗಿ ಕೈಗೊಳ್ಳಲು ಮುಂದಾಗುವವರಿಗೆ ಕೈಗಾರಿಕೆ ಕುರಿತು ಸೂಕ್ತ ಸಲಹೆ, ಮಾರ್ಗದರ್ಶನ, ತರಬೇತಿ ನೀಡುವುದು ಅತ್ಯಗತ್ಯ. ಕೈಗಾರಿಕೆ ಆರಂಭಿಸಲು ಇರುವ ಪ್ರಕ್ರಿಯೆ, ನಿಯಮಾವಳಿಗಳು ಸರಳಗೊಳ್ಳುವ ಅಗತ್ಯವಿದೆ. ಬ್ಯಾಂಕ್ ಗಳು ಯುವ ಉದ್ಯಮಿಗಳಿಗೆ ಸಾಲ ಸೌಲಭ್ಯ ನೀಡುವ ವಿಷಯದಲ್ಲಿ ಉದಾರತೆ ತೋರಬೇಕು ಎಂದು ಕಿವಿಮಾತು ಹೇಳಿದರು.

ಹೆಚ್ಚಿನ ಕೈಗಾರಿಕೆಗಳು ನಗರ ಕೇಂದ್ರಿತವಾಗಿವೆ. ಈ ಕಾರಣಕ್ಕೆ ನಗರಕ್ಕೆ ವಲಸೆ ಹೋಗುವವರ ಸಂಖ್ಯೆ ಕೂಡ ಹೆಚ್ಚುತ್ತಿರುವುದು ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ. ಹೀಗಾಗಿ ಕೈಗಾರಿಕೆಗಳನ್ನು ಜಿಲ್ಲಾ, ತಾಲ್ಲೂಕು ಕೇಂದ್ರಗಳ ಜೊತೆಗೆ ಗ್ರಾಮೀಣ ಭಾಗದಲ್ಲೂ ಆರಂಭಿಸುವತ್ತ ಚಿಂತನೆ ನಡೆಸಬೇಕಿದೆ ಎಂದರು.

ಮಲೆನಾಡು ಭಾಗದಲ್ಲಿ ಕೈಗಾರಿಕೆಗಳನ್ನು ಕೈಗೊಳ್ಳಲು ಉತ್ಸಾಹವಿರುವ ಹಲವರಿದ್ದಾರೆ. ಕೈಗಾರಿಕಾ ಇಲಾಖೆ ಅವರಿಗೆ ಅಗತ್ಯವಿರುವ ಪ್ರೋತ್ಸಾಹ ನೀಡಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರ್ ಹೇಳಿದರು.

ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಗಣೇಶ್ ಆರ್. ಪ್ರಮುಖರಾದ ಎಸ್.ಆರ್. ದತ್ತಾತ್ರಿ, ಶಿವಾನಂದ ಆಚಾರ್, ಬಿ.ಆರ್.ಉಮೇಶ್, ರಜನೀಕಾಂತ್, ರಮೇಶ್ ಬಾಬು, ವಿಶ್ವೇಶ್ವರಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.