
ಸಾಗರ: ನಗರವ್ಯಾಪ್ತಿಯಲ್ಲಿ ವಿವಿಧೆಡೆ ಕಸ ಎಸೆಯುವುದನ್ನು ಪತ್ತೆ ಹಚ್ಚಲು ಅಳವಡಿಸಿರುವ ಸಿ.ಸಿ.ಟಿವಿ ಕ್ಯಾಮೆರಾಗಳ ಅಸಮರ್ಪಕ ನಿರ್ವಹಣೆಗೆ ಮಂಗಳವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸದಸ್ಯರು ಪಕ್ಷಾತೀತವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕ್ಯಾಮೆರಾಗಳ ನಿರ್ವಹಣೆಗೆ ವಾರ್ಷಿಕ ಅಂದಾಜು ₹7 ಲಕ್ಷ ಖರ್ಚು ಮಾಡಲಾಗುತ್ತಿದೆ. ಸಿ.ಸಿ.ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿದ್ದು, ಕಸ ಎಸೆದರೆ ದಂಡ ವಿಧಿಸಲಾಗುವುದು ಎಂದು ನಗರಸಭೆ ವತಿಯಿಂದ ಅಳವಡಿಸಿರುವ ಫಲಕಗಳ ಎದುರೆ ರಾಶಿ ರಾಶಿ ಕಸ ಎಸೆಯಲಾಗುತ್ತಿದೆ. ಹೀಗಾದರೆ ಕ್ಯಾಮೆರಾ ಅಳವಡಿಸಿರುವ ಉದ್ದೇಶವಾದರೂ ಏನು?’ ಎಂದು ಬಿಜೆಪಿ ಸದಸ್ಯ ಕೆ.ಆರ್. ಗಣೇಶ್ ಪ್ರಸಾದ್ ಪ್ರಶ್ನಿಸಿದರು.
‘ನಮ್ಮ ವಾರ್ಡ್‌ನಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಇದೆ ಎಂಬ ಫಲಕದ ಕೆಳಗೆ ಕಸ ಎಸೆಯಲಾಗುತ್ತಿದ್ದು, ಅದನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿದ ನಂತರವೂ ಮತ್ತೆ ಕಸ ಎಸೆಯಲಾಗುತ್ತಿದೆ. ಕ್ಯಾಮೆರಾ ಇದೆ ಎಂಬುದು ನಗೆಪಾಟಿಲಿನ ವಿಷಯವಾಗಿದೆ’ ಎಂದು ಕಾಂಗ್ರೆಸ್ ಸದಸ್ಯೆ ಮಧುಮಾಲತಿ ದೂರಿದರು.
ಸದಸ್ಯರಾದ ವಿ.ಮಹೇಶ್, ಟಿ.ಡಿ.ಮೇಘರಾಜ್, ಶಂಕರ್ ಅಳ್ವೆಕೋಡಿ, ಸರೋಜಮ್ಮ, ಕುಸುಮಾ ಸುಬ್ಬಣ್ಣ ಅವರೂ ಇದೇ ವಿಷಯದಲ್ಲಿ ಸಭೆಯ ಗಮನ ಸೆಳೆದರು.
‘ರಸ್ತೆಯ ಬದಿಗಳಲ್ಲಿ ಕಸ ಎಸೆಯುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಕೆಲವೊಂದು ಪ್ರಕರಣಗಳಲ್ಲಿ ಕಸ ಎಸೆಯಲು ಬಳಸಲಾದ ವಾಹನಗಳನ್ನು ಜಪ್ತು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ವಿಷಯವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ತಿಳಿಸಿದರು.
ನಗರಸಭೆ ಕಸ ಸಂಗ್ರಹಣಾ ವಾಹನ ರಿಪೇರಿಗೆ ಅತೀ ಹೆಚ್ಚು ಹಣ ವಿನಿಯೋಗಿಸಲಾಗುತ್ತಿದೆ. ಟೆಂಡರ್ ಕರೆಯದೆ 15 ನೇ ಹಣಕಾಸು ಯೋಜನೆಗೆ ಸಂಬಂಧಿಸಿದ ₹7 ಲಕ್ಷ ಮೊತ್ತವನ್ನು ಖರ್ಚು ಮಾಡಿರುವುದು ಎಷ್ಟು ಸರಿ’ ಎಂದು ಸದಸ್ಯ ರವಿ ಲಿಂಗನಮಕ್ಕಿ ಆಕ್ಷೇಪಿಸಿದರು.
‘ಈಗಿನ ನಗರಸಭೆಯ ಸದಸ್ಯರ ಅವಧಿ ಅ.29ಕ್ಕೆ ಮುಗಿಯಲಿದೆ. ನೂತನ ಸದಸ್ಯರ ಆಯ್ಕೆಯಾಗಿ 18 ತಿಂಗಳ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗಿದ್ದು, ಸದಸ್ಯರ ಅಧಿಕಾರದ ಅವಧಿ ಕುಂಠಿತವಾದಂತಾಗಿದೆ. ನಾಳೆಯಿಂದ ನಗರಸಭೆಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗುವುದೇ? ಎಂದು ಬಿಜೆಪಿ ಸದಸ್ಯ ಟಿ.ಡಿ.ಮೇಘರಾಜ್ ಪ್ರಶ್ನಿಸಿದರು.
‘ಸದಸ್ಯರ ಅಧಿಕಾರಾವಧಿ ಕುಂಠಿತವಾಗಿರುವುದನ್ನು ಕೆಲವು ನಗರಸಭೆ ಸದಸ್ಯರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳಲಾಗುವುದು’ ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ತಿಳಿಸಿದರು.
ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸವಿತಾ ವಾಸು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.