ADVERTISEMENT

ನೂತನ ರಂಗಮಂದಿರ ನಿರ್ಮಾಣಕ್ಕೆ ₹ 4.80 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 5:15 IST
Last Updated 7 ಡಿಸೆಂಬರ್ 2025, 5:15 IST
ಸಾಗರದಲ್ಲಿ ಅಭಿನಯ ಸಾಗರ ಸಂಸ್ಥೆ ಮೂರು ದಿನಗಳು ಆಯೋಜಿಸಿರುವ ನಾಟಕೋತ್ಸವವನ್ನು ಶುಕ್ರವಾರ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು
ಸಾಗರದಲ್ಲಿ ಅಭಿನಯ ಸಾಗರ ಸಂಸ್ಥೆ ಮೂರು ದಿನಗಳು ಆಯೋಜಿಸಿರುವ ನಾಟಕೋತ್ಸವವನ್ನು ಶುಕ್ರವಾರ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು   

ಸಾಗರ: ನಗರವ್ಯಾಪ್ತಿಯಲ್ಲಿ ₹ 11 ಕೋಟಿ ವೆಚ್ಚದಲ್ಲಿ ನೂತನ ರಂಗಮಂದಿರ ನಿರ್ಮಾಣಗೊಳ್ಳಲಿದ್ದು, ಮೊದಲ ಹಂತದಲ್ಲಿ ₹ 4.80 ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಅಭಿನಯ ಸಾಗರ ಸಂಸ್ಥೆ ಮೂರು ದಿನಗಳು ಆಯೋಜಿಸಿರುವ ನಾಟಕೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ನಾಡಿನ ಹಿರಿಯ ರಂಗಕರ್ಮಿಗಳ ಸಲಹೆ ಪಡೆದು ಸುಸಜ್ಜಿತವಾಗಿ ರಂಗಮಂದಿರ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರದಲ್ಲಿ ಸಾಗರ ತಾಲ್ಲೂಕು ನಾಡಿನಲ್ಲಿ ಹೆಸರುವಾಸಿಯಾಗಿದೆ. ಈ ಭಾಗದಲ್ಲಿ ನಾಟಕ, ಸಂಗೀತ, ಸಾಹಿತ್ಯದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಈ ಎಲ್ಲಾ ಚಟುವಟಿಕೆಗಳಿಗೆ ನೂತನ ರಂಗಮಂದಿರ ಉತ್ತಮ ವೇದಿಕೆ ಕಲ್ಪಿಸಲಿದೆ ಎಂದು ಹೇಳಿದರು.

ಬದಲಾದ ಸನ್ನಿವೇಶದಲ್ಲಿ ಸದಭಿರುಚಿಯ ನಾಟಕಗಳನ್ನು ನೋಡುವ, ಪ್ರೋತ್ಸಾಹಿಸುವ ಮನೋಭಾವ ಕಡಿಮೆಯಾಗುತ್ತಿದೆ. ಪ್ರೇಕ್ಷಕರ ಪ್ರೋತ್ಸಾಹವಿದ್ದಲ್ಲಿ ಮಾತ್ರ ರಂಗಭೂಮಿಯಂತಹ ಕಲೆ ಉಳಿಯಲು ಸಾಧ್ಯ. ರಂಗ ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು ಸರ್ಕಾರ ಹೆಚ್ಚಿಸಬೇಕಿದೆ ಎಂದರು.

ಮಡಿವಂತಿಕೆಯನ್ನು ಹೊಂದಿರುವ ಮನಸ್ಸುಗಳಿಗೆ ಒಂದು ಒಳ್ಳೆಯ ನಾಟಕ ಹಾಗೂ ಸತ್ವಯುತ ಬರಹವುಳ್ಳ ಪುಸ್ತಕ ದಿವ್ಯ ಔಷಧಿಯಾಗಿದೆ ಎಂದು ರಂಗ ಕಲಾವಿದ ಸಂತೋಷ್ ಸದ್ಗುರು ಹೇಳಿದರು.

ಅಭಿನಯ ಸಾಗರ ಸಂಸ್ಥೆಯ ನಾರಾಯಣ ಮೂರ್ತಿ ಕಾನುಗೋಡು, ಕೌಶಿಕ್ ಕಾನುಗೋಡು, ಸಂದೀಪ್ ಶೆಟ್ಟಿ, ಪ್ರತಾಪ್, ನೂತನ್ ಹಂದಿಗೋಡು, ಸಂಜೀವ್ ಇದ್ದರು.

ಸಿದ್ದಾಪುರದ ಹಿತ್ತಲಕೈನ ಒಡ್ಡೋಲಗ ರಂಗ ಪರ್ಯಟನೆ ತಂಡದಿಂದ ಮಂಜುನಾಥ ಎಲ್. ಬಡಿಗೇರ ನಿರ್ದೇಶನದಲ್ಲಿ ‘ಶುನಶ್ಯೇಪ’ ನಾಟಕ ಪ್ರದರ್ಶನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.