
ಶಿವಮೊಗ್ಗ: ‘ಸನಾತನ ಹಾಗೂ ಸಂವಿಧಾನ ಈ ಕಾಲಘಟ್ಟದ ಸಂಘರ್ಷದ ಎರಡು ಕೇಂದ್ರ ಬಿಂದುಗಳು. ಈ ಹಾದಿಯಲ್ಲಿ ದೇಶದ ಯುವಜನತೆ ವಿವೇಕದ ದಾರಿಯಲ್ಲಿ ಸಾಗಲು, ಸನಾತನದ ಸಂಕೋಲೆಯಿಂದ ಬಿಡಿಸಿಕೊಳ್ಳಲು ಅಂಬೇಡ್ಕರ್ ಅವರ ಚಿಂತನೆಗಳು ದೊಂದಿಯಾಗಿವೆ’ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಇಲ್ಲಿನ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಅಂಬೇಡ್ಕರ್ ಚಿಂತನೆಗಳು ಮತ್ತು ಯುವಜನತೆ’ ಎಂಬ ವಿಷಯದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಸಾಮಾಜಿಕ ಚಿಂತನಾ ಕ್ರಮದಲ್ಲಿ ಸನಾತನ ಮತ್ತು ಸಂವಿಧಾನದ ನಡುವೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಂಘರ್ಷ ಮುಂದುವರೆಯುತ್ತಿದೆ. ಇದಕ್ಕೆ ಕಾರಣವನ್ನು ಅಂಬೇಡ್ಕರ್ ಬಹು ಹಿಂದೆಯೇ ಯೋಚಿಸಿದ್ದರು. ಹೀಗಾಗಿ ಅವರ ಚಿಂತನೆಗಳನ್ನು ಗ್ರಹಿಸಬೇಕಾದ ಅನಿವಾರ್ಯತೆ ಎಂದಿಗಿಂತ ಈಗ ಹೆಚ್ಚು ಇದೆ. ಅವರು ತಮ್ಮ ಚಿಂತನೆಗಳಲ್ಲಿ ಏನನ್ನು ಕಟ್ಟಿಕೊಟ್ಟರೋ ಅದರ ಆಧಾರದಲ್ಲಿ ಭಾರತೀಯತೆಯನ್ನು ರೂಪಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಜಾತಿ ವಿನಾಶವೇ ಅಂಬೇಡ್ಕರ್ ಅವರ ಚಿಂತನೆಯ ಕೇಂದ್ರಬಿಂದು ಎನ್ನುತ್ತಾರೆ. ಹಾಗೆ ನೋಡಿದರೆ ಅವರ ಚಿಂತನೆಯ ಮುಖ್ಯ ಕೇಂದ್ರ ಬಿಂದು ಮನುಷ್ಯ. ಅವರು ಇಡೀ ಸಂವಿಧಾನದಲ್ಲಿ ವ್ಯಕ್ತಿಗೆ ನೀಡಿರುವಷ್ಟು ಪ್ರಾಮುಖ್ಯತೆ ಬೇರೆ ಯಾವುದಕ್ಕೂ ನೀಡಿಲ್ಲ. ವ್ಯಕ್ತಿಗೆ ಆಯ್ಕೆಯ ಸ್ವಾತಂತ್ರ್ಯ ನೀಡಿದ್ದಾರೆ. ಮನುಷ್ಯ ಕೇಂದ್ರಿತ ಚಿಂತನೆ ಹೊಂದಿದ್ದ ಕಾರಣಕ್ಕೆ ಮತಾಂತರದ ಹಕ್ಕು ನೀಡಿದ್ದರು. ಅದರ ಅನುಸಾರ ವೃತ್ತಿ, ವಿಚಾರ, ರಾಜಕೀಯ, ಧರ್ಮ, ಸಂಸ್ಕೃತಿ ಎಲ್ಲವನ್ನೂ ಸರ್ಕಾರ ಗೌರವಿಸಬೇಕು. ಅಡ್ಡಿಪಡಿಸುವಂತಿಲ್ಲ. ವ್ಯಕ್ತಿಯೇ ಘಟಕ. ದೇಶದಲ್ಲಿರುವ ಪ್ರತಿಯೊಬ್ಬರೂ ಭಾರತೀಯ ಸಮಾಜವಾಗಿ ಬದಲಾಗಬೇಕು ಎಂಬುದನ್ನು ಪ್ರತಿಪಾದಿಸಿದ್ದಾರೆ’ ಎಂದರು.
ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಎ.ಎಲ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಎನ್.ರಾಜೇಶ್ವರಿ, ಕಾಲೇಜಿನ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ಸಂಚಾಲಕ ಎಂ. ರಂಗಸ್ವಾಮಿ, ಐಕ್ಯುಎಸಿ ಸಂಚಾಲಕ ಜಿ. ಕೃಷ್ಣಮೂರ್ತಿ ಉಪಸ್ಥಿತರಿದ್ದರು.
‘ಒಳಮೀಸಲಾತಿ ನೆಪದಲ್ಲಿ ಕಂದರ ಸಲ್ಲದು’
‘ಮೀಸಲಾತಿಯನ್ನೇ ಬಹಳಷ್ಟು ಅವಲಂಬಿಸಿ ಅದೊಂದೇ ದಲಿತರ ವಿಮೋಚನೆಗೆ ದಾರಿ ಎಂದು ಪರಿಭಾವಿಸಿ ಅದರ ಸುತ್ತಲೇ ದೃಷ್ಟಿ ಕೇಂದ್ರೀಕರಿಸುತ್ತಿದ್ದೇವೆ. ಒಳಮೀಸಲಾತಿ ವಿಚಾರದಲ್ಲಿ ಪರಸ್ಪರರು ಉಪಜಾತಿ ಜಾತಿ ಪಂಗಡಗಳ ಹೆಸರಲ್ಲಿ ಜಗಳವಾಡಿ ದಲಿತ ಚಳವಳಿಯ ಕಾಲು ಕುಸಿಯುವಂತೆ ಮಾಡುತ್ತಿದ್ದೇವೆ. ಇದು ದೂರದೃಷ್ಟಿ ರಹಿತ ಚಿಂತನೆ’ ಎಂದು ಬಂಜಗೆರೆ ಜಯಪ್ರಕಾಶ್ ಪ್ರತಿಪಾದಿಸಿದರು. ಮೀಸಲಾತಿ ಹೊರತಾಗಿ ಯಾವ ವಿಧಾನದಲ್ಲಿ ಆರ್ಥಿಕ ಸಮಾನತೆ ಸಾಧಿಸಬಹುದು. ಆ ಬಗ್ಗೆ ಸರ್ಕಾರ ರಾಜಕೀಯ ಪಕ್ಷಗಳು ಯಾವ ಕಾರ್ಯಕ್ರಮ ರೂಪಿಸಬಹುದು ಎಂದು ಯೋಜಿಸಿ ಅವುಗಳ ಅನುಷ್ಠಾನಕ್ಕೆ ಒತ್ತಡ ಹೇರಲು ದಲಿತ ಅಲೆಮಾರಿ ಆದಿವಾಸಿ ಹಾಗೂ ಮಹಿಳಾ ಸಮುದಾಯ ಧ್ವನಿ ಎತ್ತಬೇಕಿದೆ. ಅದರೆ ಇಂದು ಯುವ ಜನತೆ ಆ ಬಗ್ಗೆ ಆಲೋಚನಾ ಶೂನ್ಯವಾಗಿದ್ದಾರೆ. ಸಂಬಳ ಪಡೆಯುವ ಉದ್ಯೋಗ ಪಡೆಯುವ ಆಲೋಚನೆ ಬಿಟ್ಟು ಬೇರೆನೂ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.