
ಸಾಗರ: ‘ಜನರನ್ನು ಕಚೇರಿಗೆ ಅಲೆದಾಡಿಸಿ ಅವರ ಕೆಲಸ ಮಾಡಿಕೊಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳೇ ಜನರ ಒಂದು ದಿನದ ದುಡಿಮೆ ಹಣವನ್ನು ಪಾವತಿಸಬೇಕಾಗುತ್ತದೆ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಸಿದ್ದಾರೆ.
ತಾಲ್ಲೂಕಿನ ಕಲ್ಮನೆ ಗ್ರಾಮದಲ್ಲಿ ಕಂದಾಯ ಇಲಾಖೆ, ಕಲ್ಮನೆ ಗ್ರಾಮ ಪಂಚಾಯಿತಿ ಬುಧವಾರ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯನ್ನು ಉದ್ಘಾಟಿಸಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
‘ವಿವಿಧ ಇಲಾಖೆಗಳಲ್ಲಿನ ಕೆಲವು ಅಧಿಕಾರಿಗಳು, ನೌಕರರು ತಮ್ಮ ಕಚೇರಿಗೆ ಕೆಲಸ ಮಾಡಿಸಿಕೊಳ್ಳಲು ಬರುವ ಜನರನ್ನು ‘ಇಂದು ಬಾ, ನಾಳೆ ಬಾ’ ಎಂದು ಹೇಳುವುದನ್ನೇ ಅಭ್ಯಾಸ ಮಾಡಿಕೊಂಡಿರುವುದು ಕೆಟ್ಟ ಪ್ರವೃತ್ತಿಯಾಗಿದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಯಾವುದೇ ದೂರು ಕೇಳಿಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
‘ಇಂದಿನ ಜನ ಸಂಪರ್ಕ ಸಭೆಯಲ್ಲಿ 1,235 ಅರ್ಜಿಗಳು ಬಂದಿವೆ. ಖಾತೆ ಬದಲಾವಣೆ, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರು ಅರ್ಜಿ ನೀಡಿದ್ದಾರೆ. ಖಾತೆ ಬದಲಾವಣೆಯಂತಹ ವಿಷಯಗಳನ್ನು ಆದಷ್ಟು ಶೀಘ್ರ ಇತ್ಯರ್ಥಗೊಳಿಸಬೇಕು’ ಎಂದು ಸೂಚಿಸಿದರು.
‘ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಸಂಬಂಧ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸುವ ಮೂಲಕ ಹಕ್ಕುಪತ್ರ ನೀಡಲು ಇರುವ ತೊಡಕುಗಳನ್ನು ನಿವಾರಿಸಬೇಕು. ಹೊಸದಾಗಿ ಒತ್ತುವರಿ ಮಾಡಿದವರಿಗೆ ಹಕ್ಕುಪತ್ರ ಕೊಡುವ ಪ್ರಶ್ನೆಯೇ ಇಲ್ಲ. ಆದರೆ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಹಾಗೂ ಆ ಭೂಮಿಯನ್ನು ಹೊರತುಪಡಿಸಿ ಇತರ ಭೂಮಿ ಹೊಂದಿರದ ಫಲಾನುಭವಿಗಳಿಗೆ ನ್ಯಾಯ ಒದಗಿಸಲು ಅಧಿಕಾರಿಗಳು ಕಾಳಜಿ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.
ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ, ಬೆಳೆ ನಷ್ಟ ಅನುಭವಿಸಿದರಿಗೆ ಪರಿಹಾರ ವಿತರಿಸುವ ವಿಷಯದಲ್ಲಿ ವಿಳಂಬವಾಗಬಾರದು. ಇಂತಹ ಕೆಲಸಗಳನ್ನು ಮಾಡಲು ಸಾಧ್ಯವಾಗದಿದ್ದರೆ ಜನರು ನಮಗೆ ಶಾಪ ಹಾಕುತ್ತಾರೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಯಂತ್, ಉಪವಿಭಾಗಾಧಿಕಾರಿ ವೀರೇಶ್ ಕುಮಾರ್, ತಹಶೀಲ್ದಾರ್ ರಶ್ಮಿ ಜೆ.ಎಚ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮರನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.