
ಸಾಗರ: ತಾಲ್ಲೂಕಿನ ಕಿರತೋಡಿ-ಚಿಮಲೆ ಗ್ರಾಮದಲ್ಲಿ ಈಚೆಗೆ ಸಂಭವಿಸಿದ ಸತೀಶ್ ಅವರ ಅನುಮಾನಾಸ್ಪದ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿ ಗ್ರಾಮಸ್ಥರು ಡಿವೈಎಸ್‌ಪಿ ಗೋಪಾಲಕೃಷ್ಣ ನಾಯ್ಕ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸತೀಶ್ ಸಾವಿನ ಪ್ರಕರಣದ ಹಿಂದೆ ಹಲವು ದಟ್ಟ ಅನುಮಾನಗಳಿವೆ. ಅವರ ಶವ 4 ಅಡಿ ಎತ್ತರದಲ್ಲಿ ನೇತು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಧರಿಸಿದ್ದ ಅಂಗಿಯ ಮೇಲೆ ರಕ್ತದ ಕಲೆಗಳೂ ಪತ್ತೆಯಾಗಿವೆ. ಈ ಹಿನ್ನಲೆಯಲ್ಲಿ ವಿವಿಧ ಆಯಾಮಗಳಿಂದ ಪ್ರಕರಣದ ತನಿಖೆ ನಡೆಸಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಒತ್ತಾಯಿಸಿದರು.
ಸತೀಶ್ ಸಾವಿಗೆ ಸಂಬಂಧಿಸಿದಂತೆ ಯಾರ ಮೇಲೆ ಅನುಮಾನವಿದೆ ಎಂಬ ಬಗ್ಗೆ ಅವರ ಕುಟುಂಬದ ಸದಸ್ಯರು ಈಗಾಗಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಶೇಷ ತಂಡ ರಚಿಸಿ ತನಿಖೆ ನಡೆಸುವ ಕುರಿತು ಡಿವೈಎಸ್‌ಪಿ ಅವರು ಭರವಸೆ ನೀಡಿದ್ದು ಸತ್ಯಾಂಶ ಹೊರ ಬರುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಈ ಹಿಂದೆ ತಾಲ್ಲೂಕಿನ ಬ್ಯಾಕೋಡು ಗ್ರಾಮದಲ್ಲಿ ನಡೆದ ವೃದ್ಧ ದಂಪತಿ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಇನ್ನೂ ಪತ್ತೆ ಮಾಡಿಲ್ಲ. ಅಂಬಾರಗೋಡ್ಲು ಸಮೀಪ ಕಳೆದ ತಿಂಗಳು ಸಂಭವಿಸಿದ ಸಿದ್ದಯ್ಯ ಸ್ವಾಮಿ ಅವರ ಸಾವಿನ ಕುರಿತಾದ ಸತ್ಯಾಂಶವೂ ಹೊರ ಬರಬೇಕಿದೆ. ಪೊಲೀಸ್ ಇಲಾಖೆ ಈ ಎಲ್ಲಾ ಪ್ರಕರಣಗಳ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಶೇಖರಪ್ಪ, ಪ್ರಮುಖರಾದ ಸವಿತಾ ಸತೀಶ್, ರುಕ್ಮಿಣಿ, ಸೌಂದರ್ಯ, ಪುರುಷೋತ್ತಮ, ಲಲಿತಾ, ಗೌರಿ, ಪ್ರಶಾಂತ್, ಸೌಭಾಗ್ಯ ಇದ್ದರು.ಸ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.