ADVERTISEMENT

ಉಪನ್ಯಾಸಕನಿಗೆ ₹17 ಲಕ್ಷ ವಂಚನೆ

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 3:00 IST
Last Updated 28 ಅಕ್ಟೋಬರ್ 2025, 3:00 IST
ಸೈಬರ್‌ ಕ್ರೈಂ
ಸೈಬರ್‌ ಕ್ರೈಂ   

ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ, ಉತ್ತಮ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ ಶಾಂತಿನಗರದ ಉಪನ್ಯಾಸಕ ಬಿ.ಆರ್‌.ಶ್ರೀನಿವಾಸಪ್ರಭು ₹17.93 ಲಕ್ಷ ಕಳೆದುಕೊಂಡಿದ್ದಾರೆ.

ಶ್ರೀನಿವಾಸಪ್ರಭು ಅವರು ಫೇಸ್‌ಬುಕ್‌ನಲ್ಲಿ ‘Up-Stok 19 th Investment Plan’ ಜಾಹೀರಾತು ಕ್ಲಿಕ್‌ ಮಾಡಿದ್ದಾರೆ. ನಂತರ ಅವರ ನಂಬರ್‌ ‘Visionary Leaders Forum–223’ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸೇರಿಸಲಾಗಿದೆ. ಸದರಿ ಗ್ರೂಪ್‌ನಲ್ಲಿ ವನ್ಷಿಕಾ ಎಂಬುವರು ‘Upstoxpro’ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡು ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ.

ಮೊದಲಿಗೆ ₹15 ಸಾವಿರ ವರ್ಗಾಯಿಸಿದ್ದು, ಹೆಚ್ಚಿನ ಆದಾಯ ಗಳಿಸಲು ಮತ್ತಷ್ಟು ಹೂಡಿಕೆ ಮಾಡುವಂತೆ ಹೇಳಿದ್ದಾರೆ. ಆಗ ಮತ್ತೆ ₹2.40 ಲಕ್ಷ ಹೂಡಿಕೆ ಮಾಡಿದ್ದಾರೆ. ಶ್ರೀನಿವಾಸ ಆ್ಯಪ್‌ನಲ್ಲಿ ಪರಿಶೀಲಿಸಿದ್ದು, ಅವರಿಗೆ ₹10 ಲಕ್ಷ ಲಾಭ ಬಂದಿರುವುದಾಗಿ ತೋರಿಸಿದೆ. ಇದನ್ನು ನಂಬಿ ಮತ್ತೆ ₹4,80,500 ವರ್ಗಾವಣೆ ಮಾಡಿದ್ದು, ₹49 ಲಕ್ಷ ಲಾಭ ತೋರಿಸಿದೆ. ಸೈಬರ್‌ ವಂಚಕರು ‘ಹಣ ವಿತ್‌ ಡ್ರಾ ಮಾಡಿಕೊಳ್ಳಲು ಶೇ 20ರಷ್ಟು ತೆರಿಗೆ ಪಾವತಿಸಬೇಕು’ ಎಂದಿದ್ದಾರೆ.

ADVERTISEMENT

ಶ್ರೀನಿವಾಸ ಹಂತ ಹಂತವಾಗಿ ಒಟ್ಟು ₹17,93,040 ವರ್ಗಾವಣೆ ಮಾಡಿದ್ದಾರೆ. ಹಣ ಪಡೆದುಕೊಳ್ಳಲು ಹೋದಾಗ ‘ಭದ್ರತಾ ಠೇವಣಿ’ ಎಂದು ₹4.50 ಲಕ್ಷ ಕಟ್ಟುವಂತೆ ಹೇಳಿದ್ದಾರೆ. ಮೋಸ ಹೋಗಿರುವ ವಿಚಾರ ಅರಿವಿಗೆ ಬಂದ ನಂತರ ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.