
ತುಮಕೂರು: ಹೋಟೆಲ್, ಕಂಪನಿಗಳಿಗೆ ಸ್ಟಾರ್ ರೇಟಿಂಗ್ ಮತ್ತು ರಿವ್ಯೂ ನೀಡಿದರೆ ಶೇ 70 ರಷ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಶಿರಾ ನಗರದ ಸೊಪ್ಪಿನಹಟ್ಟಿಯ ಅನಂತ ಪದ್ಮಾನಾಭಾಚಾರ್ ಎಂಬುವರು ₹21.41 ಲಕ್ಷ ಕಳೆದುಕೊಂಡಿದ್ದಾರೆ.
ಸೈಬರ್ ಆರೋಪಿಗಳು ವಾಟ್ಸ್ ಆ್ಯಪ್ ಮುಖಾಂತರ ಪಾರ್ಟ್‌ಟೈಮ್ ಕೆಲಸದ ಆಮಿಷ ಒಡ್ಡಿದ್ದರು. https://t.me/priya0000002 ಲಿಂಕ್ ಕಳುಹಿಸಿದ್ದು, ಅದನ್ನು ಕ್ಲಿಕ್ ಮಾಡಿದ ನಂತರ ‘ಪ್ರಿಯಾ’ ಎಂಬ ಹೆಸರಿನ ಟೆಲಿಗ್ರಾಂ ಖಾತೆ ತೆರೆದುಕೊಂಡಿದೆ. ಅದರಲ್ಲಿ ನೀಡಿದ https://www.oriondigitalservice.com/login ವೆಬ್‌ಪೇಜ್ ಮೂಲಕ ಹೋಟೆಲ್, ಕಂಪನಿಗಳಿಗೆ ಸ್ಟಾರ್ ರೇಟಿಂಗ್ ಮತ್ತು ರಿವ್ಯೂ ನೀಡಿದ್ದರು. ಇದಕ್ಕಾಗಿ ಅವರಿಗೆ ಕಮಿಷನ್ ಎಂದು ₹800 ವರ್ಗಾಯಿಸಿದ್ದರು.
ಅನಂತ ರಿವ್ಯೂ ಟಾಸ್ಕ್ ಪಡೆಯಲು ₹10 ಸಾವಿರ ಹಣ ಹೂಡಿಕೆ ಮಾಡಿದ್ದರು. ನಂತರ ಲಾಭಾಂಶವೆಂದು ₹44,445 ಹಣ ಅವರ ಖಾತೆಗೆ ವರ್ಗಾವಣೆಯಾಗಿತ್ತು. ಇದೇ ರೀತಿಯಾಗಿ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿ, ಉತ್ತಮ ಲಾಭ ಪಡೆಯಬಹುದು ಎಂದು ತಿಳಿಸಿದ್ದರು. ಇದನ್ನು ನಂಬಿದ ಅನಂತ ವಿವಿಧ ಬ್ಯಾಂಕ್ ಖಾತೆ ಮತ್ತು ಯುಪಿಐ ಐ.ಡಿಗಳಿಗೆ ಹಂತ ಹಂತವಾಗಿ ₹21,86,809 ವರ್ಗಾವಣೆ ಮಾಡಿದ್ದರು.
ಇದರಲ್ಲಿ ₹44,245 ಮಾತ್ರ ವಾಪಸ್ ಬಂದಿದೆ. ಹೂಡಿಕೆ ಮಾಡಿದ ಹಣ ವಾಪಸ್ ಕೇಳಿದ್ದು, ಇನ್ನೂ ₹7 ಲಕ್ಷ ವರ್ಗಾಯಿಸಿದರೆ ಮಾತ್ರ ಹಣ ನೀಡಲಾಗುವುದು ಎಂದು ಸೈಬರ್ ವಂಚಕರು ತಿಳಿಸಿದ್ದಾರೆ. ಮೋಸ ಮಾಡಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
‘ಲೈಕ್’ ಕೊಟ್ಟು ₹9 ಲಕ್ಷ ಕಳೆದುಕೊಂಡರು
ಆನ್‌ಲೈನ್‌ನಲ್ಲಿ ವಿಡಿಯೊಗಳಿಗೆ ‘ಲೈಕ್’ ಕೊಡುವ ಕೆಲಸ ಮಾಡುತ್ತಾ ಉತ್ತಮ ಹಣ ಗಳಿಸಬಹುದು ಎಂದು ನಂಬಿಸಿ ಗುಬ್ಬಿ ತಾಲ್ಲೂಕಿನ ಮೂಗನಾಯಕನಕೋಟೆಯ ತ್ರಿವೇಣಿ ಎಂಬುವರಿಗೆ ₹9.16 ಲಕ್ಷ ವಂಚಿಸಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪಾರ್ಟ್ ಟೈಮ್ ಕೆಲಸದ ಜಾಹೀರಾತು ವೀಕ್ಷಿಸಿ ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ್ದರು. ನಂತರ ದೀಪಿಕಾ ಮಂಜರಿ ಎಂಬುವರ ಖಾತೆ ತೆರೆದುಕೊಂಡಿತ್ತು. ಒಂದು ವೆಬ್ ಪೇಜ್ ಕಳುಹಿಸಿ ವಿಡಿಯೊಗಳಿಗೆ ಲೈಕ್ ನೀಡಿದರೆ ಹಣ ನೀಡಲಾಗುವುದು ಎಂದು ತಿಳಿಸಿದ್ದರು. ಅದರಂತೆ ಮಾಡಿದಾಗ ಪ್ರಾರಂಭದಲ್ಲಿ ತ್ರಿವೇಣಿ ಖಾತೆಗೆ ₹150 ₹110 ಲಾಭಾಂಶ ನೀಡಿದ್ದರು. ಇದಾದ ಬಳಿಕ ಸೈಬರ್ ವಂಚಕರು ಟಾಸ್ಕ್‌ಗಳಿಗೆ ಹಣ ಹೂಡಿಕೆ ಬಗ್ಗೆ ತಿಳಿಸಿದ್ದರು. ಮೊದಲಿಗೆ ತ್ರಿವೇಣಿ ₹1 ಸಾವಿರ ವರ್ಗಾವಣೆ ಮಾಡಿದ್ದು ಲಾಭಾಂಶ ಎಂದು ₹300 ವಾಪಸ್ ಹಾಕಿದ್ದರು. ಇದನ್ನು ನಂಬಿ ವಿವಿಧ ಬ್ಯಾಂಕ್ ಖಾತೆ ಮತ್ತು ಯುಪಿಐ ಐ.ಡಿಗಳಿಗೆ ಹಂತ ಹಂತವಾಗಿ ಒಟ್ಟು ₹9.16 ಲಕ್ಷ ವರ್ಗಾವಣೆ ಮಾಡಿದ್ದರು. ಇದರಲ್ಲಿ ಅವರಿಗೆ ₹2060 ಮಾತ್ರ ವಾಪಸ್ ಬಂದಿದೆ. ‘ಇನ್ನೂ ₹5 ಲಕ್ಷ ವರ್ಗಾಯಿಸಿದರೆ ಪೂರ್ತಿ ಹಣ ವಾಪಸ್ ಕೊಡಲಾಗುವುದು ಎಂದು ಸೈಬರ್ ವಂಚಕರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ’ ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.