ADVERTISEMENT

ಹರಾಜು: ನಗರಸಭೆಗೆ ₹19.13 ಲಕ್ಷ ನಷ್ಟ?

ಕಳೆದ ವರ್ಷ ವಿವಿಧ ಹರಾಜು ಮೂಲಗಳಿಂದ ₹37.53 ಲಕ್ಷ ಆದಾಯ

​ಪ್ರಜಾವಾಣಿ ವಾರ್ತೆ
Published 17 ಮೇ 2025, 5:51 IST
Last Updated 17 ಮೇ 2025, 5:51 IST
ಶಿರಾ ನಗರಸಭೆ ಕಾರ್ಯಾಲಯ
ಶಿರಾ ನಗರಸಭೆ ಕಾರ್ಯಾಲಯ   

ಶಿರಾ: 2025-26ನೇ ಸಾಲಿನ ವಿವಿಧ ಹರಾಜುಗಳಿಂದ ನಗರಸಭೆಗೆ ₹19.13 ಲಕ್ಷ ನಷ್ಟವಾಗಿದೆ ಎಂಬ ಆರೋಪ ಕೇಳಿಬಂದಿದೆ.

ನಗರಸಭೆಗೆ 2024-25ನೇ ಸಾಲಿನಲ್ಲಿ ವಿವಿಧ ಹರಾಜು ಮೂಲಗಳಿಂದ ₹37.53 ಲಕ್ಷ ಆದಾಯ ಬಂದಿತ್ತು. ಈ ಬಾರಿ ಇನ್ನು ಹೆಚ್ಚಿನ ಆದಾಯ ನಿರೀಕ್ಷಿಸಲಾಗಿತ್ತು. ಆದರೆ ಗುತ್ತಿಗೆದಾರರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅಪವಿತ್ರ ಮೈತ್ರಿಯಿಂದ ಕಳೆದ ಸಾಲಿಗಿಂತ ಈ ಬಾರಿ ₹18.40 ಲಕ್ಷ  ಮಾತ್ರ ಬಂದಿದೆ. ಕಳೆದ ಬಾರಿಗಿಂತ ₹19.13 ಲಕ್ಷ ಕಡಿಮೆ ಆದಾಯ ಬಂದರೂ ತಲೆ‌ ಕೆಡಿಸಿಕೊಳ್ಳದ ನಗರಸಭೆ ಇವುಗಳಿಗೆ ಮಂಜೂರಾತಿ ನೀಡಿರುವುದಕ್ಕೆ ನಗರ ನಿವಾಸಿಗಳು ಆಕ್ಷೇಪವ್ಯಕ್ತಪಡಿಸಿದ್ದಾರೆ.

2024-25ನೇ ಸಾಲಿನ ಹರಾಜಿಗೆ ಹೋಲಿಸಿದರೆ ಹೂವು ಮತ್ತು ತರಕಾರಿ ಮಾರುಕಟ್ಟೆ ಸುಂಕ ವಸೂಲಾತಿಯೊಂದರಲ್ಲೇ ₹19.45 ಲಕ್ಷ ನಷ್ಟ ಉಂಟಾಗಿದೆ. ಕಳೆದ ಬಾರಿ ₹33.09 ಲಕ್ಷಕ್ಕೆ ಹರಾಜಾದರೆ, ಈ ಬಾರಿ ಕೇವಲ ₹13.60 ಲಕ್ಷಕ್ಕೆ ಹರಾಜಾಗಿದೆ. ಖಾಸಗಿ ಬಸ್‌ ನಿಲ್ದಾಣ ₹2.70 ಲಕ್ಷದಿಂದ ₹2 ಲಕ್ಷಕ್ಕೆ ಹರಾಜಾಗಿ ₹70 ಸಾವಿರ, ಎಳನೀರು ಮಾರಾಟ ₹35 ಸಾವಿರದಿಂದ ₹30 ಸಾವಿರಕ್ಕೆ‌ ಹರಾಜಾಗಿ ₹5 ಸಾವಿರ ನಷ್ಟ ಉಂಟಾಗಿದೆ.

ವಾರದ ಸಂತೆಯಿಂದ ಮಾತ್ರ ₹24 ಸಾವಿರದಿಂದ ₹2.50 ಲಕ್ಷಕ್ಕೆ ಹರಾಜಾಗುವ ಮೂಲಕ ₹2.26 ಲಕ್ಷ ಲಾಭ ತಂದು ಕೊಟ್ಟಿದೆ.

ನಗರಸಭೆಗೆ ನಷ್ಟವಾಗುತ್ತಿದ್ದರೂ ತಲೆ ಕಡಿಸಿಕೊಳ್ಳದೆ ವಿಶೇಷ ಸಭೆ ಕರೆದು ಪತ್ರಕರ್ತರನ್ನು ದೂರವಿಟ್ಟು ಸಭೆ ನಡೆಸಿದ್ದಾರೆ.‌ ನಗರದ ಹಿತಕಾಯಬೇಕಾದ ನಗರಸಭೆ ಸದಸ್ಯರು ತುಟಿ ಬಿಚ್ಚದೆ ಯಾವುದೇ ಚರ್ಚೆ ಇಲ್ಲದೆ ಅನುಮೋದನೆ ನೀಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ವ್ಯವಸ್ಥಿತ ಸಂಚು: ಹರಾಜು ಪ್ರಕ್ರಿಯೆ ನಡೆಸುತ್ತಿರುವ ಬಗ್ಗೆ ಸರಿಯಾಗಿ ಪ್ರಚಾರ ಮಾಡದ ನಗರಸಭೆ ಕೇವಲ ದಾಖಲೆಗಾಗಿ ನಗರಕ್ಕೆ ಬರದ ಪತ್ರಿಕೆಗಳಿಗೆ ಜಾಹೀರಾತು ನೀಡುತ್ತಿದೆ. ಹರಾಜಿನಲ್ಲಿ ಹೆಚ್ಚು ಜನ ಭಾಗವಹಿಸದಂತೆ ತಡೆಯಲು ₹5 ಲಕ್ಷವನ್ನು ಕಟ್ಟಿ ಹರಾಜಿನಲ್ಲಿ ಭಾಗವಹಿಸುವಂತೆ ಷರತ್ತು ಹಾಕಿದ್ದಾರೆ. ಗುತ್ತಿಗೆದಾರರು ತಮಗೆ ಬೇಕಾದ ಬೆರಳೆಣಿಕೆಯಷ್ಟು ಜನ ಹರಾಜಿನಲ್ಲಿ ಭಾಗವಹಿಸಿ, ಬೇಕಾದ ಮೊತ್ತಕ್ಕೆ ಹರಾಜು ನಿಲ್ಲಿಸಿಕೊಳ್ಳುತ್ತಿದ್ದಾರೆ. ಹೊಸಬರು ಯಾರು ಬರದಂತೆ ತಡೆಯುವ ಪ್ರಯತ್ನ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ ಎಂದು ಅನೇಕರು ಆರೋಪಿಸಿದ್ದಾರೆ.

ಶಾಸಕ ಮಾತಿಗೆ ಕಿಮ್ಮತ್ತಿಲ್ಲ

ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸದಸ್ಯರೊಬ್ಬರು ಧ್ವನಿ ಎತ್ತಿದಾಗ ಶಾಸಕ ಟಿ.ಬಿ.ಜಯಚಂದ್ರ ಅವರು ನಗರಸಭೆಗೆ ನಷ್ಟವಾಗುತ್ತಿದ್ದರೆ ಯಾವುದೇ ಕಾರಣಕ್ಕೂ ಅವರಿಗೆ ನೀಡಬೇಡಿ. ಮತ್ತೆ ಹರಾಜು ನಡೆಸಿ ಹೆಚ್ಚಿನ ಮೊತ್ತ ನೀಡಿದವರಿಗೆ ನೀಡಿ ಎಂದು ಸೂಚನೆ ನೀಡಿದರು. ಆದರೆ ಶಾಸಕರ ಮಾತಿಗೆ ಯಾವುದೇ ಕಿಮ್ಮತ್ತು ನೀಡದ ನಗರಸಭೆ ಆಡಳಿತ ಹರಾಜಿನಲ್ಲಿ ಭಾಗವಹಿಸಿದ್ದವರಿಗೆ ಸುಂಕ ವಸೂಲಿಗೆ ಅವಕಾಶ ನೀಡುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ. ಜಿಲ್ಲಾಧಿಕಾರಿ ಈ ಬಗ್ಗೆ ಗಮನ ಹರಿಸಿ ನಗರಸಭೆಗೆ ಆಗುತ್ತಿರುವ ನಷ್ಟ ತಪ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.