ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಶೆಟ್ಟಿಕೆರೆಯಲ್ಲಿ ಮೂರು ತಲೆಮಾರುಗಳಿಂದ ವಾಸವಾಗಿರುವ ನೂರಾರು ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ತಕ್ಷಣ ಹಕ್ಕುಪತ್ರ ವಿತರಿಸದಿದ್ದರೆ ನವೆಂಬರ್ 17ರಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸುವುದಾಗಿ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎಚ್.ಆರ್. ಬೋಜರಾಜು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೆಟ್ಟಿಕೆರೆಯಲ್ಲಿ 2 ಎಕರೆ 28 ಗುಂಟೆ ಜಾಗದಲ್ಲಿ ಮೂವತ್ತು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸವಾಗಿರುವ ಬಹುತೇಕ ಬಡವರಿಗೆ ಹಕ್ಕುಪತ್ರ ದೊರೆತಿಲ್ಲ. ಕೇವಲ ಮೂರ್ನಾಲ್ಕು ಕುಟುಂಬಗಳಿಗೆ ಮಾತ್ರ ನೀಡಲಾಗಿದೆ. ಆರು ತಿಂಗಳ ಹಿಂದೆಯೇ ಮುಖ್ಯಮಂತ್ರಿಗೆ ಪತ್ರ ಬರೆದು ಗಮನಕ್ಕೆ ತಂದಿದ್ದೇವೆ ಎಂದರು.
ಶಾಸಕ ಸಿ.ಬಿ. ಸುರೇಶ್‌ಬಾಬು ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸದರಿ ಜಾಗದಲ್ಲಿ ಗುಂಡುತೋಪು ಎಂದು ನಮೂದಾಗಿರುವುದನ್ನು ರದ್ದುಪಡಿಸಿ, ಸರ್ವೆ ನಡೆಸಿದ ಬಳಿಕ ಕಾರ್ಯನಿರ್ವಹಣಾಧಿಕಾರಿಗೆ ಹಸ್ತಾಂತರಿಸಿ ಹಕ್ಕುಪತ್ರ ವಿತರಿಸುವಂತೆ ನಿರ್ದೇಶಿಸಲಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅವರು ಆರೋಪಿಸಿದರು.
ಗೋಷ್ಠಿಯಲ್ಲಿ ರಾಜಶೇಖರ್, ಮುರಳಿ, ರಾಜಶೇಖರಯ್ಯ, ಆನಂದಪ್ಪ, ನಿಂಗಪ್ಪ, ಚಂದ್ರಯ್ಯ, ರಂಗಮ್ಮ, ರಮ್ಯಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.