ADVERTISEMENT

ಗುಬ್ಬಿ: ಹಂದಿಜೋಗಿ ವಸತಿ ಪ್ರದೇಶಕ್ಕೆ ಉಪ ಲೋಕಾಯುಕ್ತ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 14:22 IST
Last Updated 20 ಅಕ್ಟೋಬರ್ 2024, 14:22 IST
ಗುಬ್ಬಿಯ ಹಂದಿಜೋಗಿ ಸಮುದಾಯದ ಗುಡಿಸಲುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಉಪಲೋಕಾಯುಕ್ತ ಬಿ. ವೀರಪ್ಪ
ಗುಬ್ಬಿಯ ಹಂದಿಜೋಗಿ ಸಮುದಾಯದ ಗುಡಿಸಲುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಉಪಲೋಕಾಯುಕ್ತ ಬಿ. ವೀರಪ್ಪ   

ಗುಬ್ಬಿ: ಪಟ್ಟಣದ ಮಾರನಕಟ್ಟೆಯಲ್ಲಿರುವ ಹಂದಿಜೋಗಿ ಸಮುದಾಯದವರು ವಸತಿ ನಿವೇಶನ ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಉಪ ಲೋಕಾಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರಿಂದ ಭಾನುವಾರ ಉಪಲೋಕಾಯುಕ್ತ ಬಿ.ವೀರಪ್ಪ ಪಟ್ಟಣಕ್ಕೆ ಭೇಟಿ ನೀಡಿದ್ದರು.

ಲೋಕಾಯುಕ್ತ ತಂಡ ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಗುಡಿಸಲುಗಳನ್ನು ಪರಿಶೀಲಿಸಿದರು.

ಗುಡಿಸಲುಗಳು ತಗ್ಗಿನ ಪ್ರದೇಶದಲ್ಲಿರುವುದರಿಂದ ನೀರು ಒಳಗೆ ನುಗ್ಗದಂತೆ ಅಗತ್ಯ ಅಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ತಾಲ್ಲೂಕು ಆಡಳಿತ ತಕ್ಷಣಕ್ಕೆ ಮಾಡಿರುವ ತಾತ್ಕಾಲಿಕ ವ್ಯವಸ್ಥೆ ಹಾಗೂ ಶಾಶ್ವತ ಪರಿಹಾರವಾಗಿ ನಿವೇಶನ ಒದಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದರು.

ADVERTISEMENT

ನಂತರ ಮಾತನಾಡಿದ ಅವರು, ಈ ಪ್ರದೇಶ ತಗ್ಗಿನಲ್ಲಿರುವುದರಿಂದ ನೀರು ನಿಂತು ವಾಸಿಸಲು ಸಾಧ್ಯವಿಲ್ಲದಂತಾಗಿದೆ. ಶೀಘ್ರ ಎಲ್ಲರಿಗೂ ನಿವೇಶನ ಒದಗಿಸುವಂತೆ ತಾಲ್ಲೂಕು ಆಡಳಿತಕ್ಕೆ ಸೂಚಿಸಲಾಗಿದೆ. ಇಲ್ಲಿನ ನಿವಾಸಿಗಳು ತಾಲ್ಲೂಕು ಆಡಳಿತ ನೀಡಿರುವ ಜಾಗಕ್ಕೆ ತುರ್ತಾಗಿ ತೆರಳುವಂತೆ ಸೂಚಿಸಿದರು.

ತಾಲ್ಲೂಕು ಆಡಳಿತ ಈಗಾಗಲೇ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದು, ಶೀಘ್ರ ಹಕ್ಕುಪತ್ರ ವಿತರಿಸಲು ಸೂಚಿಸಲಾಗಿದೆ. ನಿವಾಸಿಗಳು ನಿಯಮಾನಸಾರ ತಾಲ್ಲೂಕು ಆಡಳಿತಕ್ಕೆ ಅಗತ್ಯ ದಾಖಲೆಗಳನ್ನು ನೀಡಿ ನಿವೇಶನ ಪಡೆದುಕೊಳ್ಳುವಂತೆ ತಿಳಿಸಿದರು.

ಸಮುದಾಯದ ಪೋಷಕರು ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ತೊಂದರೆ ಆಗದಂತೆ ಅವರನ್ನು ವಿದ್ಯಾರ್ಥಿ ನಿಲಯಗಳಿಗೆ ಸೇರಿಸಿ ಅವರ ವ್ಯಾಸಂಗ ಮುಂದುವರೆಸಲು ಸಹಕರಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಅಗತ್ಯವಿರುವ ಕ್ರಮ ಕೈಗೊಳ್ಳಲು ತಾಲ್ಲೂಕು ಆಡಳಿತಕ್ಕೆ ತಿಳಿಸಿದರು.

ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿರುವ ತಾತ್ಕಾಲಿಕ ವಸತಿ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅವರು ರೋಗಿಗಳ ಜೊತೆ ಚರ್ಚಿಸಿ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ವೈದ್ಯಾಧಿಕಾರಿಗೆ ಸೂಚಿಸಿದರು.

ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಚುಚ್ಚುಮದ್ದು ಹಾಗೂ ಮಾತ್ರೆಗಳ ಮಾಹಿತಿಯನ್ನು ವ್ಯವಸ್ಥಿತವಾಗಿ ನೋಂದಣಿ ಪುಸ್ತಕದಲ್ಲಿ ದಾಖಲಿಸದಿರುವ ಬಗ್ಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ನೂರುನ್ನೀಸ, ಲೋಕಾಯುಕ್ತ ನ್ಯಾಯಾಧೀಶ ವಿಜಯಾನಂದ, ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ಲಕ್ಷ್ಮೀನಾರಾಯಣ, ಉಮಾ ಶಂಕರ್, ಲೋಕಾಯುಕ್ತ ಇನ್ಸ್ಪೆಕ್ಟರ್ ಸುರೇಶ್, ಸಲೀಂ, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಆರತಿ, ಬಿಇಒ ಶಿವಪ್ರಕಾಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿಂದು ಮಾಧವ್, ಬಿಸಿಎಂ ಅಧಿಕಾರಿ ಪವಿತ್ರ, ಸಮಾಜ ಕಲ್ಯಾಣ ಇಲಾಖೆಯ ವೀಣಾ, ಕಂದಾಯ ಅಧಿಕಾರಿಗಳು ಹಾಜರಿದ್ದರು.

ಗುಬ್ಬಿಯ ಹಂದಿಜೋಗಿ ಸಮುದಾಯದ ಗುಡಿಸಲುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಉಪಲೋಕಾಯುಕ್ತ ಬಿ. ವೀರಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.