
ಕುಣಿಗಲ್: ಗ್ಯಾರಂಟಿ ಯೋಜನೆಗಳಿಂದ ಸರ್ಕಾರದಲ್ಲಿ ಹಣವಿಲ್ಲ ಎಂಬ ತಪ್ಪು ಕಲ್ಪನೆ ಮೂಡುತ್ತಿದ್ದು, ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತಿಳಿಸಿದರು.
ತಾಲ್ಲೂಕಿನ ವಿವಿಧ ಸ್ಥಳಗಳಿಗೆ ಶುಕ್ರವಾರ ಬೆಳಿಗ್ಗೆ ಶಾಸಕ ಡಾ.ರಂಗನಾಥ್ ಜತೆ ಭೇಟಿ ನೀಡಿ ಪರಿಶೀಲಿಸಿದ ನಂತರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಯೋಜನೆಗಳ ಅನುಷ್ಠಾನ ಮುಂದೂಡುವುದರಿಂದ ಆರ್ಥಿಕ ಸ್ಥಿತಿ, ಆಡಳಿತಾತ್ಮಕ ಗೊಂದಲ ಸೃಷ್ಟಿಯಾಗುತ್ತದೆ. ಸರ್ಕಾರ ರಾಜ್ಯದ ಅಭಿವೃದ್ಧಿ ಜತೆಗೆ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ ಎಂದರು.
ಜಿಲ್ಲೆಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಮಾಡುತ್ತಿದ್ದರೂ, ಅಧಿಕಾರಿವರ್ಗ ವ್ಯವಸ್ಥಿತವಾಗಿ ಕಾರ್ಯತಂತ್ರ ರೂಪಿಸದ ಕಾರಣ ಸಮಸ್ಯೆ ನಿರಂತರವಾಗಿದೆ. ಅಧಿಕಾರಿಗಳು ಸಾರ್ವಜನಿಕ ರಸ್ತೆ ಮತ್ತು ಗ್ರಾಮೀಣ ಸಂಪರ್ಕ ರಸ್ತೆಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಬೇಕು. ಗ್ರಾಮೀಣ ಪ್ರದೇಶದ ಮುಖಂಡರು ಮನೆ, ಜಮೀನುಗಳ ಸಂಪರ್ಕ ರಸ್ತೆಗೆ ನಂತರದ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕಿನಲ್ಲಿ 455 ಮುಜರಾಯಿ ಇಲಾಖೆ ದೇವಾಲಯಗಳಿದ್ದು, ವ್ಯವಸ್ಥಾಪನಾ ಸಮಿತಿಗಳು ರಚನೆಯಾಗದ ಕಾರಣ ಆರ್ಥಿಕ ಸ್ಥಿತಿಯಲ್ಲಿ ವ್ಯತ್ಯಯವಾಗುತ್ತಿದೆ. ತಹಶೀಲ್ದಾರ್ ಗಮನಹರಿಸಬೇಕು. ಎಡೆಯೂರು ಸಿದ್ದಲಿಂಗೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಬಗ್ಗೆ ಗಮನಹರಿಸಲು ತಿಳಿಸಿದರು.
ತಾಲ್ಲೂಕಿನಲ್ಲಿ ನಡೆಯುತ್ತಿರುವ ಜೆಜೆಎಂ ಕಾಮಗಾರಿ ಬಗ್ಗೆ ಸಚಿವರು ಮತ್ತು ಶಾಸಕ ಡಾ.ರಂಗನಾಥ್ ತೀವ್ರ ಅಸಮಾದಾನ ವ್ಯಕ್ತಪಡಿಸಿ, ಅಧಿಕಾರಿಗಳು ಗುತ್ತಿಗೆದಾರರ ಮರ್ಜಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ ಯೋಜನೆ ಕುಂಠಿತವಾಗಿದೆ. ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಜೆಜೆಎಂ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತದೆ. ರಸ್ತೆಗಳು ಹಾಳಾಗುತ್ತಿದೆ. ಭೂ ಮಾಪಕರ ಕೊರತೆ ಮತ್ತು ನಿರ್ಲಕ್ಷದಿಂದ ಕಂದಾಯ ಇಲಾಖೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿದೆ. ತಾಲ್ಲೂಕಿನಲ್ಲಿ ಕೆ–ಶಿಪ್‌ನಿಂದ ಅವೈಜ್ಞಾನಿಕ ಟೋಲ್ ಸಂಗ್ರಹ ಕೇಂದ್ರ ನಡೆಯುತ್ತಿದ್ದು, ಗಮನ ಹರಿಸಬೇಕು ಎಂದರು.
ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ಕಾಮಗಾರಿ ಪೂರ್ಣವಾಗುತ್ತಿದ್ದು, ಶಾಲೆಗಳ ಕೊಠಡಿ, ಅಂಗನವಾಡಿ ಕೇಂದ್ರ ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು ಕೆಲದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ತಿಳಿಸಿದರು.
ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ತಹಶೀಲ್ದಾರ್ ರಶ್ಮಿ, ಇಒ ವಸಂತ್ ಕುಮಾರ್, ಡಿವೈಎಸ್‌ಪಿ ಓಂಪ್ರಕಾಶ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಗೊಟ್ಟಿಕೆರೆ ಕೆರೆ ಪ್ರದೇಶಕ್ಕೆ ಭೇಟಿ
ಸಚಿವ ಜಿ.ಪರಮೇಶ್ವರ ಕೈಗಾರಿಕಾ ಪ್ರದೇಶಗಳ ತ್ಯಾಜ್ಯಗಳಿಂದ ಕುಲುಷಿತಗೊಂಡಿರುವ ಗೊಟ್ಟಿಕೆರೆ ಕೆರೆ ಪ್ರದೇಶಕ್ಕೆ ಭೇಟಿ ನೀಡಿದಾಗ ಶಾಸಕ ರಂಗನಾಥ್ ಅಂಚೇಪಾಳ್ಯ ಕೈಗಾರಿಕಾ ಪ್ರದೇಶದ ರಾಸಾಯನಿಕ ತ್ಯಾಜ್ಯದಿಂದ ಕೆರೆ ನೀರು ಮಲೀನವಾಗಿದೆ. ಕುಡಿಯಲು ವ್ಯವಸಾಯಾಕ್ಕೂ ಯೋಗ್ಯವಾಗಿಲ್ಲ. ಸುತ್ತಲಿನ ಗ್ರಾಮದಲ್ಲಿ ಕ್ಯಾನ್ಸರ್ ರೋಗಿಗಳು ಹೆಚ್ಚಾಗಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪಟ್ಟಣದಲ್ಲಿ ನಿರ್ಮಾಣ ಹಂತದ ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ₹2 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸುವ ಭರವಸೆ ನೀಡಿದರು. ತುಮಕೂರು ರಸ್ತೆ ನಿರ್ಮಾಣವಾಗಬೇಕಿರುವ ಕಾಂಗ್ರೆಸ್ ಕಚೇರಿ ಸ್ಥಳ ತಾಯಿ ಮಗು ಆಸ್ಪತ್ರೆ ಮಾರ್ಕೋನಹಳ್ಳಿ ಜಲಾಶಯ ಸಿದ್ದಲಿಂಗೇಶ್ವರಸ್ವಾಮಿ ದೇವಾಲಯ ದೊಡ್ಡಮಧೂರೈ ಕೆಪಿಎಸ್ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
- ಲಿಂಕ್ ಕೆನಾಲ್‌ಗೆ ₹400 ಕೋಟಿ
ಲಿಂಕ್ ಕೆನಾಲ್‌ಗೆ ಸರ್ಕಾರ ಅನುಮತಿ ನೀಡಿದೆ. ಈಗಾಗಲೇ 400 ಕೋಟಿ ನೀಡಿದೆ. ಮುಂದಿನ ದಿನಗಳಲ್ಲಿ ಕಾಮಗಾರಿ ಮುಂದುವರೆದು ಕುಣಿಗಲ್ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯುತ್ತದೆ ಎಂದು ಸಚಿವ ಡಾ.ಪರಮೇಶ್ವರ ತಿಳಿಸಿದರು. ಶಾಸಕ ಡಾ.ರಂಗನಾಥ್ ಲಿಂಕ್ ಕೆನಾಲ್ ಕಾಮಗಾರಿ ಪೂರ್ಣಗೊಳಿಸುವುದಾಗಿ ಸಚಿವರು ವಾಗ್ದಾನ ನೀಡಿದ್ದಾರೆ. ಪೂರ್ಣಗೊಳ್ಳುವುದು ಖಚಿತ ಎಂದಾಗ ಸಚಿವರು ‘ಅದು ಶಾಸಕರ ಹೇಳಿಕೆ ಮಾತ್ರ ನಂದಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.