
ತುಮಕೂರು: ಬಡಾವಣೆ ನಿರ್ಮಿಸಿ 25 ವರ್ಷ ಕಳೆದಿದೆ. ಇದುವರೆಗೆ ಚರಂಡಿ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಎಲ್ಲ ರಸ್ತೆಗೆ ಡಾಂಬರು ಹಾಕಿಲ್ಲ. ಅಭಿವೃದ್ಧಿ ಎಂದರೆ ಇದೇನಾ?...
ಹೀಗೆ ಪ್ರಶ್ನಿಸಿದ್ದು... ನಗರದ ಶಿವಶಕ್ತಿ ಬಡಾವಣೆ, ಟಿವಿಎಸ್ ಬಡಾವಣೆ, ಸಂಜಯನಗರ ನಿವಾಸಿಗಳು. ಮಹಾನಗರ ಪಾಲಿಕೆಯ 34ನೇ ವಾರ್ಡ್ ವ್ಯಾಪ್ತಿಗೆ ಈ ಪ್ರದೇಶಗಳು ಸೇರುತ್ತವೆ. ಇದರ ಜತೆಗೆ ಶಿವರಾಮಕಾರಂತ ನಗರ, ಎಸ್‌ಎಲ್‌ಎನ್ ನಗರ, ಸುಭಾಷ್ ನಗರ, ಬಸವೇಶ್ವರ ಬಡಾವಣೆ, ಇಂದಿರಾ ನಗರ, ಶ್ರೀನಗರ ಭಾಗಗಳು ವಾರ್ಡ್‌ಗೆ ಸೇರಿಕೊಳ್ಳುತ್ತವೆ. ಬಹುತೇಕ ಕಡೆಗಳಲ್ಲಿ ಚರಂಡಿಯದ್ದೇ ಸಮಸ್ಯೆ.
ಯಾವುದೇ ಬಡಾವಣೆಯಲ್ಲಿ ಚರಂಡಿ ಮೇಲೆ ಕಲ್ಲು ಚಪ್ಪಡಿ ಅಳವಡಿಸಿಲ್ಲ. ಅಲ್ಲಿನ ನಿವಾಸಿಗಳು ತಮ್ಮ ಮನೆಯ ಮುಂಭಾಗ ತಾವೇ ಕಲ್ಲುಗಳನ್ನು ಹಾಕಿಕೊಂಡಿದ್ದಾರೆ. ಚರಂಡಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ತೆರವುಗೊಳಿಸಿಲ್ಲ. ವಿದ್ಯುತ್ ದೀಪಗಳು ಬೆಳಗುತ್ತಿಲ್ಲ. ಹತ್ತರಲ್ಲಿ ಐದು ದೀಪಗಳು ಹಾಳಾಗಿವೆ. ಹೊಸ ದೀಪ ಅಳವಡಿಸಲು ಅಧಿಕಾರಿಗಳು ಮುಂದಾಗಿಲ್ಲ. ಮಹಾನಗರ ಪಾಲಿಕೆ ಸದಸ್ಯರ ಅಧಿಕಾರಾವಧಿ ಮುಗಿದ ಕಾರಣ, ಜನರಿಗೆ ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುವುದು ತೋಚದಂತಾಗಿದೆ.
ಸಂಜಯನಗರದಲ್ಲಿ ವಿದ್ಯುತ್ ತಂತಿ ಮೇಲೆ ಮರದ ರೆಂಬೆಗಳು ಹರಡಿವೆ. ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮುಂದೆ ಏನಾದರೂ ಅನಾಹುತ ಸಂಭವಿಸಿದರೆ ಅವರೇ ಹೊಣೆಯಾಗುತ್ತಾರೆ ಎಂದು ಇಲ್ಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಹೆಚ್ಚಿದ ಕಳವು: ವಾರ್ಡ್‌ನ ಬಹುತೇಕ ಪ್ರದೇಶಗಳು ನಗರದ ಹೊರವಲಯದಲ್ಲಿವೆ. ಹೀಗಾಗಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಟೂಡ ಲೇಔಟ್ ವೃತ್ತದ ಬಳಿ ನಿಲ್ಲಿಸಿದ್ದ ವಾಹನಗಳ ಬ್ಯಾಟರಿ, ಡೀಸೆಲ್ ಕಳ್ಳತನ ಮಾಡುವುದು ಜಾಸ್ತಿಯಾಗಿದೆ. ವಿದ್ಯುತ್ ದೀಪಗಳು ಸರಿಯಾಗಿ ಬೆಳಗುತ್ತಿಲ್ಲ. ಇದು ಕಳ್ಳರಿಗೆ ವರವಾಗಿ ಪರಿಣಮಿಸಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವೃತ್ತದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಬೇಕು ಎಂಬುವುದು ಇಲ್ಲಿನ ಜನರ ಆಗ್ರಹವಾಗಿದೆ.
ವಾರ್ಡ್‌ನಲ್ಲಿ 45 ಪಾರ್ಕ್‌ಗಳಿವೆ. ಅರ್ಧದಷ್ಟು ಪಾರ್ಕ್ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಅವು ನಿರ್ವಹಣೆ ಇಲ್ಲದೆ ಸೊರಗಿವೆ. ಆಸನಗಳ ವ್ಯವಸ್ಥೆ, ವಾಕಿಂಗ್ ಪಾಥ್ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ನಿರ್ವಹಣೆಗೆ ಸಿಬ್ಬಂದಿ ನಿಯೋಜಿಸಿಲ್ಲ. ಗಿಡಗಂಟಿಗಳು ಬೆಳೆದು ಪೊದೆಯಂತೆ ಕಾಣಿಸುತ್ತಿವೆ.
ಅಭಿವೃದ್ಧಿ ಆಗಿದ್ದೇನು?
* ಕುಡಿಯುವ ನೀರಿನ ಘಟಕ
* ಪಾರ್ಕ್ ಅಭಿವೃದ್ಧಿ
* ಲೇಔಟ್ ನಿರ್ಮಾಣ
ಸಮಸ್ಯೆ ಏನೇನು?
* ರಸ್ತೆಯಲ್ಲಿ ಗುಂಡಿಗಳು
* ಯುಜಿಡಿ, ಚರಂಡಿ ಸಮಸ್ಯೆ
* ಸಮರ್ಪಕವಾಗಿ ಪೂರೈಕೆಯಾಗದ ಕುಡಿಯುವ ನೀರು
* ವಿದ್ಯುತ್ ತಂತಿ ಮೇಲೆ ಮರದ ರೆಂಬೆ
ಚರಂಡಿ ನಿರ್ಮಿಸಿ ಚರಂಡಿ ಸಮರ್ಪಕವಾಗಿಲ್ಲ. ಮಳೆ ಬಂದರೆ ನೀರು ಹರಿಯಲು ವ್ಯವಸ್ಥೆ ಮಾಡಿಲ್ಲ. ವಿದ್ಯುತ್ ತಂತಿಗಳ ಮೇಲೆ ಮರದ ರೆಂಬೆಗಳು ಹರಡಿಕೊಂಡಿದ್ದು ಅದನ್ನು ತೆರವುಗೊಳಿಸಿಲ್ಲ. ಕಸ ಸಂಗ್ರಹ ವಾಹನಗಳು ಪ್ರತಿ ದಿನ ಇತ್ತ ಬರುವುದಿಲ್ಲ. ಖಾಲಿ ಜಾಗದಲ್ಲಿ ಕಸ ಹಾಕುವುದು ಜಾಸ್ತಿಯಾಗಿದೆ.– ಪುನೀತ್, ಶಿವಶಕ್ತಿ ಬಡಾವಣೆ
ಅಭಿವೃದ್ಧಿ ಹೇಗೆ? ಬಡಾವಣೆಯ ವಿವಿಧ ರಸ್ತೆಗಳಿಗೆ ಕನಿಷ್ಠ ಡಾಂಬರು ಹಾಕುವ ಕೆಲಸವಾಗಿಲ್ಲ. ಈ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿಸುತ್ತಿಲ್ಲ. ಎಂಜಿನಿಯರ್ ಹತ್ತಿರ ಕಾಮಗಾರಿ ಕುರಿತು ಕೇಳಿದರೆ ಹಣವಿಲ್ಲ ಎನ್ನುತ್ತಿದ್ದಾರೆ. ಹೀಗಾದರೆ ಬಡಾವಣೆಗಳ ಅಭಿವೃದ್ಧಿ ಆಗುವುದು ಹೇಗೆ?– ವಿರೂಪಾಕ್ಷಯ್ಯ, ಶಿವಶಕ್ತಿ ಬಡಾವಣೆ ಟಿವಿಎಸ್ ಬಡಾವಣೆ ಸಂಜಯನಗರ ನಾಗರಿಕರ ಹಿತರಕ್ಷಣಾ ಸಮಿತಿ
ಯುಜಿಡಿ ಸರಿಯಾಗಿಲ್ಲ ಹೆಸರಿಗೆ ಮಾತ್ರ ಟೂಡ ಲೇಔಟ್. ಒಂದು ರಸ್ತೆಯಲ್ಲೂ ಯುಜಿಡಿ ಸರಿಯಾಗಿಲ್ಲ. ರಸ್ತೆಗಳು ಅಧ್ವಾನ ದುರಸ್ತಿಪಡಿಸಿಲ್ಲ. ಓವರ್ ಹೆಡ್ ಟ್ಯಾಂಕ್ ಕಟ್ಟಿ ಹಾಗೆಯೆ ಬಿಟ್ಟಿದ್ದಾರೆ. ಅದನ್ನು ಸರಿಯಾಗಿ ಬಳಸುತ್ತಿಲ್ಲ. ಪ್ರತಿ ಮನೆಗೆ ನೀರಿನ ಸಂಪರ್ಕ ಇಲ್ಲ. ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.– ಮಹೇಶ್, ಟೂಡ ಲೇಔಟ್
ಸಮಗ್ರ ಅಭಿವೃದ್ಧಿ ಶುದ್ಧ ಕುಡಿಯುವ ನೀರಿನ ಘಟಕ ರಸ್ತೆ ಪಾರ್ಕ್ ಅಭಿವೃದ್ಧಿ ಪಡಿಸಲಾಗಿದೆ. ಶಾಸಕರ ಅನುದಾನ ಮಹಾನಗರ ಪಾಲಿಕೆ ನಗರಾಭಿವೃದ್ಧಿ ಪ್ರಾಧಿಕಾರದ ಹಣದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ವಾರ್ಡ್‌ನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ.– ನವೀನ ಅರುಣ್, ಮಾಜಿ ಸದಸ್ಯೆ ಮಹಾನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.