ADVERTISEMENT

ಮಣ್ಣಿನ ಆರೋಗ್ಯ ಕಾಪಾಡಲು ಸಲಹೆ

ವಿಶ್ವ ಮಣ್ಣು ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 6:05 IST
Last Updated 7 ಡಿಸೆಂಬರ್ 2025, 6:05 IST
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶುಕ್ರವಾರ ವಿಶ್ವ ಮಣ್ಣು ದಿನ ಆಚರಿಸಲಾಯಿತು. ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಎಚ್.ಪಿ.ಸಂದೇಶ್‌, ಆರ್.ನಟರಾಜ್, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ವಕೀಲರಾದ ಎ.ಪಿ.ರಂಗನಾಥ್‌, ಎಲ್‌.ರಮೇಶ್‌ ನಾಯಕ್‌ ಇತರರು ಹಾಜರಿದ್ದರು
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶುಕ್ರವಾರ ವಿಶ್ವ ಮಣ್ಣು ದಿನ ಆಚರಿಸಲಾಯಿತು. ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಎಚ್.ಪಿ.ಸಂದೇಶ್‌, ಆರ್.ನಟರಾಜ್, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ವಕೀಲರಾದ ಎ.ಪಿ.ರಂಗನಾಥ್‌, ಎಲ್‌.ರಮೇಶ್‌ ನಾಯಕ್‌ ಇತರರು ಹಾಜರಿದ್ದರು   

ತುಮಕೂರು: ಮಣ್ಣು, ಪರಿಸರದ ಆರೋಗ್ಯ ಕಾಪಾಡಿದರೆ ಸಕಲ ಜೀವಿಗಳೂ ಆರೋಗ್ಯದಿಂದ ಬದುಕಬಹುದು ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಚ್.ಪಿ.ಸಂದೇಶ್‌ ಹೇಳಿದರು.

ನಗರದ ಸಿದ್ಧಗಂಗಾ ಮಠದಲ್ಲಿ ಶುಕ್ರವಾರ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಇನಿಷಿಯೇಟೀವ್‌ ಫಾರ್‌ ಸಸ್ಟೈನಬಲ್‌ ಅಗ್ರಿಕಲ್ಚರ್‌ ಆ್ಯಂಡ್‌ ಎನ್‌ವಿರಾನ್‌ಮೆಂಟ್‌ ಚಾಂಪಿಯನ್‌ ಆಫ್‌ ಸಾಯಿಲ್‌–2025’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಸಕಲ ಜೀವಿಗಳ ಬದುಕಿಗೆ ಮಣ್ಣು ಅಗತ್ಯ. ಅನ್ನ ಅಷ್ಟೇ ಅಲ್ಲ, ಎಲ್ಲರು ಮೋಹಿಸುವ ಚಿನ್ನವೂ ಮಣ್ಣಿನಿಂದಲೇ ದೊರೆಯುತ್ತದೆ. ಜೀವರಾಶಿಗಳ ತಾಯಿಯಾಗಿರುವ ಭೂಮಿಯ ಮಣ್ಣು, ಅದರ ಫಲವತ್ತತೆ ರಕ್ಷಣೆ ಮಾಡುವುದು ಎಲ್ಲರ ಹೊಣೆ. ಭೂಮಿಗೆ ವಿಷಕಾರಿ ಗೊಬ್ಬರ ಹಾಕದೆ ಮೂಲ ಸತ್ವ ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಯೋಗ್ಯವಾದ ಮಣ್ಣ ಉಳಿಸಬೇಕು. ಈ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ಮಾಡಿದರು.

ADVERTISEMENT

ಹೈಕೋರ್ಟ್‌ ನ್ಯಾಯಮೂರ್ತಿ ಆರ್.ನಟರಾಜ್, ‘ರೈತ ಸಮೂಹ ಮಣ್ಣು ನಂಬಿ ಕಾಯಕ ಮಾಡುತ್ತಿದೆ. ಗಾಳಿ, ನೀರಿನಂತೆ ಮಣ್ಣನ್ನು ಕಾಪಾಡಬೇಕು. ಮಣ್ಣಿನ ತಾಯಿ ಗುಣ ಗುರುತಿಸಿ ಗೌರವಿಸಬೇಕು’ ಎಂದು ತಿಳಿಸಿದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ‘ಭೂಮಿ, ನೀರು, ಅಗ್ನಿ, ವಾಯು, ಆಕಾಶ ಜೀವಿಗಳ ಬದುಕಿಗೆ ಶಕ್ತಿಯಾಗಿವೆ. ಅವು ಇಲ್ಲದೇ ಜೀವ ಸಂಕುಲವಿಲ್ಲ. ಪಂಚಭೂತಗಳ ಆರೋಗ್ಯ ಕಾಪಾಡಿದರೆ ನಾವು ಆರೋಗ್ಯವಾಗಿರಲು ಸಾಧ್ಯ’ ಎಂದರು.

ಬಂಡಿಹಳ್ಳಿಯ ಬಿ.ಆರ್‌.ರವೀಂದ್ರ, ಜನಪನಹಳ್ಳಿಯ ಎಚ್.ನರಸಿಂಹರಾಜು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್‌, ವಕೀಲ ಎಲ್‌.ರಮೇಶ್‌ ನಾಯಕ್‌ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.