
ತುಮಕೂರು: ಕಳೆದ 5 ವರ್ಷಗಳಿಂದ ತೆವಳುತ್ತಾ ಸಾಗಿದ್ದ ಭೀಮಸಂದ್ರ ಕೆರೆಯಿಂದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಸಂಸ್ಕರಿಸಿದ ತ್ಯಾಜ್ಯ ನೀರು ಸರಬರಾಜು ಮಾಡುವ ಯೋಜನೆ ಕೊನೆಗೂ ಮುಕ್ತಾಯ ಕಂಡಿದೆ. ಉದ್ಘಾಟನೆಗೆ ಕಾಲವೂ ಕೂಡಿ ಬಂದಿದ್ದು, ನ. 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಇಡೀ ನಗರದ ತಾಜ್ಯ ನೀರು ಭೀಮಸಂದ್ರ ಕೆರೆಗೆ ಹರಿಯುತ್ತಿದೆ. ಒಂದು ದಿನಕ್ಕೆ ಸುಮಾರು 60 ಎಂಎಲ್‌ಡಿ ನೀರು ಕೆರೆಯಲ್ಲಿ ಸಂಗ್ರಹವಾಗುತ್ತಿದೆ. ಇದರಲ್ಲಿ ಪ್ರತಿ ದಿನ 30 ಎಂಎಲ್‌ಡಿ ನೀರು ಸಂಸ್ಕರಿಸಿ ಪೈಪ್ ಲೈನ್ ಮುಖಾಂತರ ಕೈಗಾರಿಕಾ ಪ್ರದೇಶಕ್ಕೆ ಹರಿಸಲಾಗುತ್ತದೆ. ಈ ಮಹತ್ವಾಕಾಂಕ್ಷಿ ಕಾಮಗಾರಿಗೆ 2020ರಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಎಲ್ಲ ಕೆಲಸ ಮುಗಿಯಲು ಬರೋಬ್ಬರಿ 5 ವರ್ಷ ಹಿಡಿದಿದೆ.
ಮಹಾನಗರ ಪಾಲಿಕೆ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ₹130 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಅಮೆರಿಕ, ಜರ್ಮನ್ ರಾಷ್ಟ್ರದಿಂದ ಯಂತ್ರಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಕಾಮಗಾರಿ ಗುತ್ತಿಗೆ ಪಡೆದ ಸಂಸ್ಥೆಯೇ ಮುಂದಿನ 10 ವರ್ಷಗಳ ಕಾಲ ಇದರ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದೆ.
ಕೆರೆಯಲ್ಲಿ ಸಂಗ್ರಹವಾದ ನಗರದ ತ್ಯಾಜ್ಯ ನೀರನ್ನು ಸಂಸ್ಕರಿಸಿ ಹರಿಸಲಾಗುತ್ತದೆ. ಕೈಗಾರಿಕಾ ಪ್ರದೇಶದಲ್ಲಿ ಶುದ್ಧೀಕರಣ ಘಟಕ ನಿರ್ಮಿಸಿದ್ದು, ಅಲ್ಲಿ ಶುದ್ಧೀಕರಿಸಿ ಬಳಕೆಗೆ ನೀಡಲಾಗುತ್ತದೆ. ಕುಡಿಯುವುದಕ್ಕೆ ಹೊರತುಪಡಿಸಿ ಉಳಿದ ಎಲ್ಲ ಕಾರ್ಯಗಳಿಗೆ ಈ ನೀರು ಉಪಯೋಗಕ್ಕೆ ಬರಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
21 ಕಿ.ಮೀ ಪೈಪ್ ಲೈನ್: ಕೈಗಾರಿಕಾ ಪ್ರದೇಶಕ್ಕೆ ನೀರು ಸರಬರಾಜು ಮಾಡಲು ಭೀಮಸಂದ್ರ ಕೆರೆಯಿಂದ ಪೈಪ್‌ಲೈನ್ ಮಾಡಲಾಗಿದೆ. ಸುಮಾರು 21 ಕಿ.ಮೀ ಪೈಪ್ ಅಳವಡಿಸಲಾಗಿದೆ. ಭೀಮಸಂದ್ರ, ಬುಗುಡನಹಳ್ಳಿ, ಬೆಳ್ಳಾವಿ, ಚೆನ್ನೇನಹಳ್ಳಿ, ಬೆಳ್ಳಾವಿ ಕ್ರಾಸ್ ಮಾರ್ಗವಾಗಿ ಕೈಗಾರಿಕಾ ಪ್ರದೇಶಕ್ಕೆ ನೀರು ಹರಿಯಲಿದೆ. ಕೆರೆಯ ಬಳಿ ಯಾವುದೇ ವ್ಯತ್ಯಯವಾಗದಂತೆ ಅಗತ್ಯ ಮೋಟರ್‌ಗಳ ವ್ಯವಸ್ಥೆ ಮಾಡಲಾಗಿದೆ.
ವಸಂತನರಸಾಪುರ ಕೈಗಾರಿಕಾ ಪ್ರದೇಶದ 4 ಸಾವಿರ ಎಕರೆ, ಚೆನ್ನೈ– ಬೆಂಗಳೂರು ಕೈಗಾರಿಕಾ ಕಾರಿಡಾರ್, ಶಿರಾ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ಈ ನೀರು ಸಿಗಲಿದೆ. ಗಾರ್ಡನ್ ನಿರ್ವಹಣೆ, ಸ್ವಚ್ಛತೆ ಸೇರಿದಂತೆ ಇತರೆ ಕೆಲಸಕ್ಕೆ ನೀರು ಬಳಸಬಹುದಾಗಿದೆ.
ಕುಡಿಯುವ ನೀರಿಗೆ ಪರದಾಟ
ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಪರದಾಟ ತಪ್ಪುತ್ತಿಲ್ಲ. ಇಲ್ಲಿನ ಕೈಗಾರಿಕೆಗಳಿಗೆ ಕುಪ್ಪೂರು ಕೆರೆಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಮಳೆ ಉತ್ತಮವಾಗಿ ಸುರಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ವರುಣ ಕೈಕೊಟ್ಟರೆ ವರ್ಷ ಪೂರ್ತಿ ಯಾವುದೇ ಕೆಲಸ ಸಮರ್ಪಕವಾಗಿ ಆಗುವುದಿಲ್ಲ. ಎತ್ತಿನಹೊಳೆ ಯೋಜನೆಯಡಿ ಕೈಗಾರಿಕಾ ಪ್ರದೇಶಕ್ಕೆ 0.5 ಎಂಎಲ್‌ಡಿ ನೀರು ಹಂಚಿಕೆಯಾಗಿದೆ. ಈ ನೀರು ಸಂಗ್ರಹಕ್ಕೆ ಪೂರಕವಾದ ಜಾಗವೇ ಇಲ್ಲ. ಸುತ್ತಮುತ್ತಲಿನ ಎಲ್ಲ ಕೆರೆಗಳು ಕಲುಷಿತಗೊಂಡಿದ್ದು ನಿರ್ವಹಣೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಅಗತ್ಯ ನೀರು ಸಿಕ್ಕರೂ ಸಂಗ್ರಹಕ್ಕೆ ಕೊರತೆಯಾಗಲಿದೆ. ‘ಕೆರೆ ಸ್ವಚ್ಛಗೊಳಿಸಿದರೆ ಈ ಭಾಗದ ಗ್ರಾಮಸ್ಥರು ಕೈಗಾರಿಕೆಗಳಿಗೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು’ ಎಂಬುವುದು ಕೈಗಾರಿಕೋದ್ಯಮಿಗಳ ಒತ್ತಾಯ. ‘ಈ ಹಿಂದೆ ಕುಡಿಯುವ ನೀರಿನ ಉದ್ದೇಶಕ್ಕೆ ಪೈಪ್‌ಲೈನ್ ಅಳವಡಿಸಲಾಗಿತ್ತು. ಅದರ ಮುಖಾಂತರವೇ ಬಳಕೆಗೂ ನೀರು ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಈಗ ಮತ್ತೊಂದು ಪೈಪ್‌ಲೈನ್ ಮಾಡಿದ್ದಾರೆ. ಈ ಯೋಜನೆಯಿಂದ ದುಂದು ವೆಚ್ಚವಾಗುತ್ತಿದೆ’ ಎಂದು ಕೈಗಾರಿಕೆಗಳ ಮಾಲೀಕರು ಆರೋಪಿಸಿದ್ದಾರೆ.
ಎಕರೆಗೆ ₹4.50 ಲಕ್ಷ
ನೀರಿಗಾಗಿ ಕೈಗಾರಿಕೆಗಳ ಮಾಲೀಕರು ಕೆಐಎಡಿಬಿಗೆ ಪ್ರತಿ ಎಕರೆಗೆ ₹4.50 ಲಕ್ಷ ಪಾವತಿಸಿದ್ದಾರೆ. ‘ಈ ಹಿಂದೆ ಕುಡಿಯುವ ನೀರು ಯೋಜನೆ ಕಾರ್ಯರೂಪಕ್ಕೆ ತರುವಾಗ ಎಕರೆಗೆ ₹2 ಲಕ್ಷ ಪಡೆದಿದ್ದರು. ಈಗ ಈ ಯೋಜನೆಗಾಗಿ ₹2.50 ಲಕ್ಷ ನೀಡಲಾಗಿದೆ. ಕೋಟ್ಯಂತರ ರೂಪಾಯಿ ಹೂಡಿಕೆ ಮಾಡುವ ಹೂಡಿಕೆದಾರರಿಗೆ ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುತ್ತಿಲ್ಲ. ನೀರು ಸರಬರಾಜು ಯೋಜನೆ ಮುಂದಿನ ದಿನಗಳಲ್ಲಿ ಕೈಗಾರಿಕೆ ಪ್ರದೇಶದ ಅಭಿವೃದ್ಧಿಗೆ ನೆರವಾಗಬಹುದು’ ಎಂದು ವಸಂತನರಸಾಪುರ ಕೈಗಾರಿಕಾ ಪ್ರದೇಶದ ಅಧ್ಯಕ್ಷ ಸಿ.ವಿ.ಹರೀಶ್ ಮಾಹಿತಿ ಹಂಚಿಕೊಂಡರು.
ಹೆಚ್ಚಿನ ಬಳಕೆ ಅಸಾಧ್ಯ
ಗಾರ್ಡನ್ ಯಂತ್ರಗಳ ಸ್ವಚ್ಛತೆ ಬಿಟ್ಟರೆ ಬೇರೆ ಕೆಲಸಗಳಿಗೆ ಕೆರೆ ನೀರು ಉಪಯೋಗಿಸಲು ಆಗುವುದಿಲ್ಲ. ನೀರಿನ ಗುಣಮಟ್ಟದ ಬಗ್ಗೆಯೂ ಖಚಿತಪಡಿಸಿಲ್ಲ. ಕಲುಷಿತ ನೀರು ಪೂರೈಕೆಯಾದರೆ ಬಳಕೆ ಅಸಾಧ್ಯ. ಯೋಜನೆ ಪ್ರಯೋಜನದ ಬಗ್ಗೆ ಈಗಾಗಲೇ ಎಲ್ಲವನ್ನೂ ಹೇಳಲು ಆಗಲ್ಲ. ಕೆಲವು ದಿನಗಳು ಕಳೆದ ನಂತರ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ. ಸಿ.ವಿ.ಹರೀಶ್ ಅಧ್ಯಕ್ಷ ವಸಂತನರಸಾಪುರ ಕೈಗಾರಿಕಾ ಪ್ರದೇಶ ** ಕೊಳವೆ ಬಾವಿ ಕೊರೆಸಿ ಕೈಗಾರಿಕಾ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆಸಲು ಅನುಮತಿ ನೀಡುತ್ತಿಲ್ಲ. ಇದಕ್ಕೆ ಅವಕಾಶ ಕಲ್ಪಿಸಿದರೆ ನೀರಿನ ಬವಣೆ ನೀಗಲಿದೆ. ಈಗ ಭೀಮಸಂದ್ರ ಕೆರೆಯಿಂದ ನೀರು ಪೂರೈಸಲಾಗುತ್ತಿದೆ. ಇದರಿಂದ ಹೆಚ್ಚಿನ ಅನುಕೂಲ ಆಗುವುದಿಲ್ಲ. ಗಾರ್ಡನ್ ನಿರ್ವಹಣೆಗೆ ಮಾತ್ರ ನೀರು ಸಿಗುತ್ತದೆ. ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ. ಮಹ್ಮದ್ ವಾಜಿದ್ ಅಧ್ಯಕ್ಷ ಕೈಗಾರಿಕಾ ತ್ಯಾಜ್ಯ ನಿರ್ವಹಣೆ ಫೌಂಡೇಷನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.