
ಕುಂದಾಪುರ: ‘ಶೌರ್ಯ, ಸತ್ಯ, ನಿಷ್ಠೆಗೆ ಹೆಸರಾದ ಕೊಂಕಣ ಖಾರ್ವಿ ಸಮುದಾಯದ ಜನರು ಕುಲಕಸುಬಿನೊಂದಿಗೆ ಸಮಾಜಮುಖಿಯಾಗಿ ಗುರುತಿಸಿಕೊಂಡವರು’ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಹೇಳಿದರು.
ಇಲ್ಲಿನ ಖಾರ್ವಿಕೇರಿಯಲ್ಲಿ ಶನಿವಾರ ಸ್ಥಳೀಯ ಕೆ.ಕೆ.ಫ್ರೆಂಡ್ಸ್ ಆಶ್ರಯದಲ್ಲಿ ನಡೆದ ಅಖಿಲ ಕರ್ನಾಟಕ ಕೊಂಕಣ ಖಾರ್ವಿ ಸಮಾಜದ ಆಹ್ವಾನಿತ ತಂಡಗಳ ಪ್ರೊ ಕಬಡ್ಡಿ ಟೂರ್ನಿ 2025 ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆ, ಸಾಹಸ, ಶೌರ್ಯ, ಸಮಾಜಕಾರ್ಯಗಳ ಜೊತೆ ಸಮುದಾಯದ ಬೆಳವಣಿಗೆಗೆ ಶಿಕ್ಷಣ ಅವಶ್ಯ. ಆಧುನಿಕ ಪ್ರಪಂಚಕ್ಕೆ ತಕ್ಕಂತೆ ನಾವೂ ವಿಶಾಲರಾಗಬೇಕು. ಕೊಂಕಣಿ ಖಾರ್ವಿ ಸಮುದಾಯದ ಮಕ್ಕಳು ಯಾವ ರೀತಿಯ ಶಿಕ್ಷಣಾಭ್ಯಾಸ ಅಪೇಕ್ಷೆ ಮಾಡಿದರೂ, ಆಳ್ವಾಸ್ ಶಿಕ್ಷಣ ಸಂಸ್ಥೆ ಸ್ಪಂದನ ನೀಡಲು ಸಿದ್ಧವಿದೆ. ಎಸ್ಎಸ್ಎಲ್‌ಸಿ ಬಳಿಕ ಸಮುದಾಯದ ಹಿರಿಯರ ಮಾರ್ಗದರ್ಶನದಲ್ಲಿ ಮಕ್ಕಳ ಆಸಕ್ತಿಗೆ ಅನುಗುಣವಾದ ಶಿಕ್ಷಣ ಆಯ್ಕೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ‘ವ್ಯಾಯಾಮ, ದುಡಿಮೆ, ಕ್ರೀಡೆಯಲ್ಲಿ ಗುರುತಿಸಿಕೊಂಡಿರುವ ಕೊಂಕಣಿ ಖಾರ್ವಿ ಸಮುದಾಯ ದೇಶಿ ಕ್ರೀಡೆ ಕಬಡ್ಡಿಗೆ ಪ್ರಥಮ ಆದ್ಯತೆ ನೀಡಿರುವುದು ಅಭಿನಂದನೀಯ. ಶಾಲಾ ದಿನಗಳಿಂದಲೇ ಖಾರ್ವಿ ಬಂಧುಗಳೊಂದಿಗೆ ಒಡನಾಟ ಹೊಂದಿರುವ ನನಗೆ ಅವರ ಸ್ನೇಹಮಯ ವಿಶ್ವಾಸದ ಗುಣ ಇಷ್ಟ’ ಎಂದರು.
ಮೊಳಹಳ್ಳಿ ಜಯರತ್ನ ಚಾರಿಟಬಲ್ ಟ್ರಸ್ಟ್ ಪ್ರವರ್ತಕ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಧೈರ್ಯವಂತರಾಗಿರುವ ಖಾರ್ವಿ ಸಮುದಾಯದವರು ಮುಗ್ಧರು. ಯಾರಿಗೆ ಸಮಸ್ಯೆಯಾದರೂ ತಕ್ಷಣ ಸ್ಪಂದಿಸುವ ಮನೋಭಾವದವರು. ಐದು ದಶಕಗಳಿಂದ ದೀಪಾವಳಿ ಸಂಭ್ರಮಾಚರಣೆಯನ್ನು ಕ್ರೀಡಾ ಹಬ್ಬವಾಗಿ ಆಚರಿಸುತ್ತಿರುವುದು ಮಾದರಿ ಎಂದರು.
ಡಾ.ಎಂ. ಮೋಹನ್ ಆಳ್ವ, ಭಟ್ಕಳದ ವಿದ್ಯಾಭಾರತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ರೂಪಾ ರಮೇಶ್ ಖಾರ್ವಿ ಭಟ್ಕಳ ಅವರನ್ನು ಗೌರವಿಸಲಾಯಿತು. ದಿ.ಜಯಾನಂದ ಖಾರ್ವಿ, ದಿ.ಅಶೋಕ ಸಾರಂಗ, ದಿ.ಸುಂದರಿ ಶಂಕರ್ ಖಾರ್ವಿ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಖಾರ್ವಿಕೇರಿ ಮಹಾಂಕಾಳಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಅಜಂತಾ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಉಪ್ಪಿನಕುದ್ರು ರಾಜೇಶ್ ಕಾರಂತ್, ಪೊಲೀಸ್ ನಿರೀಕ್ಷಕ ಜಯರಾಮ್ ಗೌಡ, ಟಾರ್ಪಡೋಸ್ ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿ, ಡೈನಾಮಿಕ್ ಇಂಫ್ರಾಟೆಕ್‌ನ ಎಂ.ಡಿ ಅಂಬಿಕಾ ಧೀರಜ್, ಉದ್ಯಮಿ ಎಸ್.ಆರ್. ಉದಯ್ ಕುಮಾರ ಶೇಟ್, ಕೆ.ಕೆ.ಫ್ರೆಂಡ್ಸ್ ಅಧ್ಯಕ್ಷ ಸಂದೀಪ್ ಖಾರ್ವಿ ಎಸ್.ಎಸ್ ಭಾಗವಹಿಸಿದ್ದರು.
ಮುಕುಂದ ಖಾರ್ವಿ ಪ್ರಾರ್ಥಿಸಿದರು. ಕೆ.ಕೆ.ಫ್ರೆಂಡ್ಸ್ ಕೋಶಾಧಿಕಾರಿ ವಿಜಯ್ ನಾಯ್ಕ್ ವರದಿ ಮಂಡಿಸಿದರು. ರಾಜೇಶ್ ಖಾರ್ವಿ ಕೆ.ಕೆ.ಎಫ್ ಸನ್ಮಾನಪತ್ರ ವಾಚಿಸಿದರು. ಕೆ.ಕೆ.ಫ್ರೆಂಡ್ಸ್ ಕಾರ್ಯದರ್ಶಿ ಗಣೇಶ್ ನಾಯ್ಕ್ ವರದಿ ಮಂಡಿಸಿದರು. ರಾಜೇಶ್ ಕುಂದಾಪುರ ನಿರೂಪಿಸಿದರು. ಸುರಿಯುತ್ತಿರುವ ಮಳೆ ನಡುವೆಯೇ ಕ್ರೀಡಾಕೂಟದ ವಿಜೇತರಿಗೆ ನೀಡುವ ಟ್ರೋಫಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು. ಚೆಂಡೆ ವಾದನ, ವಯೋಲಿನ್ ವಾದನ, ರಾಷ್ಟ್ರಗೀತೆ, ಸಿಡಿಮದ್ದುಗಳು, ಆಕರ್ಷಕ ಲೈಟ್ಸ್‌ನೊಂದಿಗೆ ಟೂರ್ನಿ ಉದ್ಘಾಟನೆ ನಡೆಯಿತು.
ಕ್ರೀಡಾಂಗಣದ ಉದ್ಘಾಟನೆ ಬಳಿಕ ಕ್ರಿಕೆಟ್ ಆಟಗಾರರಾದ ಮನೋಜ್ ನಾಯರ್, ರಂಜಿತ್ ಕುಮಾರ್ ಶೆಟ್ಟಿ, ಕಬಡ್ಡಿ ಆಟಗಾರರಾದ ಪ್ರಕಾಶ್ ಆರ್. ಖಾರ್ವಿ, ಗಂಗಾಧರ ಖಾರ್ವಿ ಮಂಗಳೂರು, ಪ್ರಕಾಶ್ ಖಾರ್ವಿ ಮದ್ದುಗುಡ್ಡೆ ಅವರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.