
ಕುಂದಾಪುರ: ‘ಪ್ರಸ್ತುತ ಕಾಲಘಟ್ಟದಲ್ಲಿ ಕ್ರೀಡಾಕೂಟ ಹಾಗೂ ಕಾರ್ಯಕ್ರಮಗಳನ್ನು ಸಂಘಟನೆ ಮಾಡುವುದೇ ಸಾಹಸವಾಗಿದೆ. ಈ ನಿಟ್ಟಿನಲ್ಲಿ ಹೆಮ್ಮಾಡಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟ ಅತ್ಯಂತ ಪ್ರಶಂಸೆಗೆ ಪಾತ್ರವಾಗಿದೆ’ ಎಂದು ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಅಭಿಪ್ರಾಯಪಟ್ಟರು.
ಉಡುಪಿ ಜಿ.ಪಂ., ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ವಲಯ ಹಾಗೂ ಕಿರಿಮಂಜೇಶ್ವರದ ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಹೆಮ್ಮಾಡಿಯ ಜನತಾ ಪ.ಪೂ. ಕಾಲೇಜಿನ ಕ್ರೀಡಾಂಗಣದಲ್ಲಿ, ಗುರುವಾರ ನಡೆದ ಉಡುಪಿ ಜಿಲ್ಲಾ ಮಟ್ಟದ 14 ಹಾಗೂ 17ರ ವಯೋಮಾನದ ವಿದ್ಯಾರ್ಥಿಗಳ ಕ್ರೀಡಾಕೂಟದ ಸಮಾರೋಪದ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನನ್ನ ವೃತ್ತಿ ಜೀವನದಲ್ಲಿ ಹೆಚ್ಚು ಮೆರುಗು ನೀಡಿ, ಮನಸ್ಸು ಸೆಳೆದ ಕ್ರೀಡಾಕೂಟ ಇದಾಗಿದೆ. ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆತಿಥ್ಯದಲ್ಲಿ ನಡೆದ ಈ ಕ್ರೀಡಾಕೂಟ ಸಂಘಟನೆಗೆ ಹೊಸ ಮೈಲಿಗಲ್ಲಾಗಿದೆ. ಸರ್ಕಾರದಿಂದ ಸಿಗುವ ಅನುದಾನದ ಜೊತೆಗೆ ಹತ್ತು ಪಟ್ಟು ಹೆಚ್ಚು ಹಣವನ್ನು ವಿನಿಯೋಗ ಮಾಡಿ, ಯಶಸ್ವಿಯಾಗಿ ಕ್ರೀಡಾಕೂಟ ಸಂಘಟಿಸಿದ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ಮೊಗವೀರ, ಸಹೋದ್ಯೋಗಿಗಳು ಹಾಗೂ ಜನತಾ ತಂಡ ಅಭಿನಂದನಾರ್ಹರು. ಸ್ವಯಂಸೇವಕ ವಿದ್ಯಾರ್ಥಿಗಳು ಶಿಸ್ತು ಹಾಗೂ ಬದ್ಧತೆಯಿಂದ ಜವಾಬ್ದಾರಿ ನಿರ್ವಹಣೆ ಮಾಡಿದ್ದರಿಂದ ವ್ಯವಸ್ಥೆಯಲ್ಲಿ ಎಲ್ಲಿಯೂ ಲೋಪವಾಗಿಲ್ಲ’ ಎಂದರು.
ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ್ ಕುಮಾರ್ ಹಟ್ಟಿಯಂಗಡಿ ಮಾತನಾಡಿ, ‘ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ದೊಡ್ಡ ಕಾರ್ಯಕ್ರಮ ಮಾಡಬೇಕಾದರೆ ಎದೆಗಾರಿಕೆಬೇಕು. ಕಾರ್ಯಕ್ರಮ ಎಂದಾಗ ಅನೇಕ ಲೋಪದೋಷಗಳು ಎದುರಾಗುತ್ತದೆ. ಇವೆಲ್ಲವನ್ನೂ ಮೆಟ್ಟಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವ ಮೂಲಕ, ಜನತಾ ಸಂಸ್ಥೆಗಳ ಗೌರವ ಹೆಚ್ಚಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ಮೊಗವೀರ, ‘ಇಲಾಖೆಯ ಸಹಕಾರದೊಂದಿಗೆ ಕ್ರೀಡಾಕೂಟ ಯಶಸ್ಸಾಗಿದೆ. ಜಿಲ್ಲಾ ಮಟ್ಟದ ಕ್ರೀಡಾಕೂಟ ನಮ್ಮ ಹೆಗಲಿಗೆ ಇಟ್ಟಾಗ ಯಶಸ್ವಿಯಾಗಿ ಗುರಿ ತಲುಪುವ ಭರವಸೆ ಇಟ್ಟುಕೊಂಡಿದ್ದೇವು. ಇಂದು ಭರವಸೆ ಗುರಿ ಮುಟ್ಟಿದ ಸಂತೃಪ್ತಿ ಇದೆ. ಇದಕ್ಕೆ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಸಾಮೂಹಿಕ ಪ್ರಯತ್ನ, ಜಿಲ್ಲಾ ದೈಹಿಕ ಶಿಕ್ಷಕರ ಸಹಕಾರ ಕಾರಣ. ಈ ಕ್ರೀಡಾಕೂಟದ ಯಶಸ್ಸಿನಿಂದ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಟವನ್ನು ಆಯೋಜನೆ ಮಾಡುವಷ್ಟು ಶಕ್ತಿ ಬಂದಂತಾಗಿದೆ’ ಎಂದರು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಕುಲಾಲ ಸಮಾಜ ಸುಧಾರಕ ಸಂಘದ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ ಕುಲಾಲ್, ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ, ಯುವಜನ ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ವಿಜಯ್ ಕುಮಾರ್ ಶೆಟ್ಟಿ, ಕಿಶನ್ ರಾಜ್ ಶೆಟ್ಟಿ ಬೆಳ್ವೆ, ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಮಂಜುನಾಥ ಶೆಟ್ಟಿ, ಸತೀಶ್ ಬಾಡಾ, ವಿಜಯ ಕುಮಾರ್, ಚಂದ್ರಕಾಂತ್, ರವೀಂದ್ರ ನಾಯ್ಕ್, ನಿತ್ಯಾನಂದ ಶೆಟ್ಟಿ, ಸತ್ಯನಾರಾಯಣ, ಉಪಪ್ರಾಂಶುಪಾಲ ರಮೇಶ್ ಪೂಜಾರಿ ಇದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಕುಮಾರ್ ಶೆಟ್ಟಿ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕ ಉದಯ್ ನಾಯ್ಕ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.