
ಪಡುಬಿದ್ರಿ: ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ತೆಂಕ ಎರ್ಮಾಳು ಗ್ರಾಮ ಪಂಚಾಯಿತಿ ಎದುರು ಶನಿವಾರ ತೆಂಕ ಎರ್ಮಾಳು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪಂಚಾಯಿತಿ ಎದುರು ಜಮಾಯಿಸಿದ ಗ್ರಾಮಸ್ಥರು, ಈ ವೇಳೆ ಸ್ಥಳಕ್ಕೆ ಬಂದ ಕಾಪು ತಾಲ್ಲೂಕು ಪಂಚಾಯಿತಿ ಇಒ ಜೇಮ್ಸ್ ಡಿಸಿಲ್ವಾ ಅವರಿಗೆ ಮನವಿ ಸಲ್ಲಿಸಿದರು.
ತೆಂಕ ಗ್ರಾಮ ಪಂಚಾಯಿತಿನಲ್ಲಿ ಪ್ರತೀ ತಿಂಗಳು ಸಾಮಾನ್ಯ ಸಭೆ ನಡೆಯುತ್ತಿಲ್ಲ. ಸುಮಾರು ಒಂದು ವರ್ಷ ಕಳೆದರೂ ಗ್ರಾಮಸಭೆ ನಡೆದಿಲ್ಲ. ಈ ಬಗ್ಗೆ ಗ್ರಾಮಸಭೆ ನಡೆಸಲು ಗ್ರಾಮಸ್ಥರು ಮನವಿ ನೀಡಿದರೂ ಸ್ಪಂದನೆ ನೀಡುತಿಲ್ಲ. ಈ ಬಾರಿ ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಗ್ರಾಮಸಭೆ ಮತ್ತು ಮಕ್ಕಳ ಗ್ರಾಮಸಭೆಯೂ ನಡೆದಿಲ್ಲ ಎಂದು ಆರೋಪಿಸಿದರು.
ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಜಲಜೀವನ್ ಯೋಜನೆಯಡಿ ಸಂಪರ್ಕ ಕಲ್ಪಿಸಿದ್ದರೂ ನೀರು ಬರುತ್ತಿಲ್ಲ. ಅನಧಿಕೃತ ನಲ್ಲಿ ಜೋಡಣೆ, ಖಾಸಗಿಯವರು ನೀರಿನ ಪೈಪ್ ಹಾಳು ಮಾಡಿರುವ ಬಗ್ಗೆ ಪಂಚಾಯಿತಿಗೆ ತಿಳಿಸಿದರೂ ಕ್ರಮ ಕೈಗೊಳ್ಳದೇ ಇರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ. ತೆಂಕ ಗ್ರಾಮದಲ್ಲಿ ಸರ್ಕಾರಿ ಭೂಮಿ, ತೋಡು, ದಾರಿ, ಕೆರೆಗಳ ಅತಿಕ್ರಮಣವಾಗುತ್ತಿದೆ. ಈ ಬಗ್ಗೆ ಕಂದಾಯ ಇಲಾಖೆಯಿಂದ ಸರ್ಕಾರಿ ಭೂಮಿಯ ಪಟ್ಟಿಯನ್ನು ಪಡೆದು ಗ್ರಾಮದ ಸರ್ಕಾರಿ ಸ್ವತ್ತುಗಳನ್ನು ಉಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಯುಪಿಸಿಎಲ್ ಕಂಪೆನಿಯ ರಾಸಾಯನಿಕ ಮಿಶ್ರಿತ ಉಪ್ಪು ನೀರಿನಿಂದ ಗ್ರಾಮದ ಹಲವು ಬಾವಿಗಳ ನೀರು ಕಲುಷಿತಗೊಂಡಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ತೆಂಕ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.
ಮಾಜಿ ಸದಸ್ಯ ಶಿವಪ್ರಸಾದ್ ಶೆಟ್ಟಿ, ಸಂತೋಷ್ ಕುಮಾರ್, ಮಾಜಿ ಉಪಾಧ್ಯಕ್ಷ ರತ್ನಾಕರ ಕೋಟ್ಯಾನ್, ಮಾಜಿ ತಾ.ಪಂ. ಸದಸ್ಯ ಕೇಶವ ಮೊಯಿಲಿ, ಜಯರಾಜ್ ಎರ್ಮಾಳು, ವಿನಯ ಶೆಟ್ಟಿ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.