
ಉಡುಪಿ: ‘ಧ್ಯಾನಸ್ಥ ಸ್ಥಿತಿಯಲ್ಲಿ ಚಿಂತನೆ ಮಾಡುವುದು ಅಧ್ಯಾತ್ಮವಾಗಿದೆ. ಆದರೆ ಇಂದು ಅಧ್ಯಾತ್ಮ ಕೂಡ ವ್ಯಾಪಾರದ ಸರಕಾಗಿದೆ. ಯಾವುದು ಜನರನ್ನು ಹೆಚ್ಚು ತಲುಪುತ್ತದೋ ಅದನ್ನು ವಾಣಿಜ್ಯ ಸರಕಾಗಿ ಬಳಸಲಾಗುತ್ತಿದೆ’ ಎಂದು ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಉಡುಪಿಯ ಕನಕದಾಸ ಅಧ್ಯಯನ ಸಂಶೋಧನ ಪೀಠ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಎಂಜಿಎಂ ಕಾಲೇಜು ಆವರಣದ ಟಿ. ಮೋಹನ್‌ದಾಸ್ ಪೈ ಅಮೃತ ಸೌಧ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರಾವಳಿ ಭಜನಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಇಂದು ತಂತ್ರಜ್ಞಾನ ಆಧಾರಿತ ಸಂವಹನ ವಿಧಾನಗಳಿವೆ. ಅದರಲ್ಲಿ ಯಂತ್ರಗಳು ಮುಖ್ಯವಾಗುತ್ತವೆ, ಮುನುಷ್ಯರು ಗೌಣವಾಗುತ್ತಾರೆ. ಭಜನೆ ಬೇಕಿದ್ದರೂ ಕೃತಕ ಬುದ್ಧಿಮತ್ತೆಯಲ್ಲಿ (ಎಐ) ಸಿಗುತ್ತದೆ. ಮುಂದಿನ 15 ವರ್ಷಗಳಲ್ಲಿ ಎಐ ನಮ್ಮನ್ನು ಆಳಲಿದೆ’ ಎಂದರು.
‘ನಿಜಜೀವನದಲ್ಲಿ ಅನುಸರಿಸಬೇಕಾದ ಜೀವನ ಸಂಗತಿಗಳೇ ತತ್ವ ಪದಗಳಲ್ಲಿ ಅಡಕವಾಗಿವೆ. ಧರ್ಮ ಸಾಮರಸ್ಯ, ಲಿಂಗ, ಜಾತಿ ತಾರತಮ್ಯಕ್ಕೆ ವಿರೋಧ, ಆಧುನಿಕತೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ಮೊದಲಾದವುಗಳು ವಿಡಂಬನೆಯ ರೂಪದಲ್ಲಿ ಅವುಗಳಲ್ಲಿ ಮೂಡಿಬಂದಿವೆ’ ಎಂದು ಹೇಳಿದರು.
‘ಒಂದು ಕಾಲದಲ್ಲಿ ಭಜನೆ ಮನೆ ಮನೆಗಳಲ್ಲಿ ನಡೆಯುತ್ತಿತ್ತು. ಸಾಹಿತ್ಯ–ಸಂಗೀತದ ಅವಿನಾಭಾವದ ಸೇರುವಿಕೆ ಭಜನೆಯಲ್ಲಿದೆ. ಇಂದು ಡಿ.ಜೆ., ಎ.ಐ. ಸವಾಲುಗಳ ನಡುವೆ ಭಜನೆಯು ಜನರಿಗೆ ತಲುಪಬೇಕಿದೆ. ತತ್ವಪದವನ್ನು ಭಜನೆಯ ಮೂಲಕ ಅಳವಡಿಸಿ, ಪ್ರಚುರಪಡಿಸಬೇಕಿದೆ’ ಎಂದು ಪ್ರತಿಪಾದಿಸಿದರು.
ಮಾಹೆಯ ಸಹ ಕುಲಪತಿ ನಾರಾಯಣ ಸಭಾಹಿತ್ ಮಾತನಾಡಿ, ‘ಬದಲಾವಣೆ ನಿರಂತರವಾದುದು. ಕಳೆದ 100 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಭಜನೆಯಲ್ಲಿ ಕೂಡ ಬದಲಾವಣೆಗಳಾಗಿವೆ. ಮಹಾನಗರಗಳಲ್ಲಿ ಭಜನೆ ಬೇರೆಯೇ ರೂಪ ಪಡೆದುಕೊಳ್ಳುತ್ತಿರುವುದು ದುರಂತ’ ಎಂದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ವನಿತಾ ಮಯ್ಯ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ದೇವಿದಾಸ್ ಎಸ್. ನಾಯ್ಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾರ್ಯಕ್ರಮ ಸಂಯೋಜಕ ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು.
ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು. ಕಾತ್ಯಾಯಿನಿ ಕುಂಜಿಬೆಟ್ಟು ವಂದಿಸಿದರು. ರಾಮಾಂಜಿ ಮತ್ತು ಸ್ವಪ್ನ ರಾಜ್ ನಾಡಗೀತೆ ಹಾಡಿದರು.
‘ಬದುಕಿನ ನಿಜರೂಪ ಅನಾವರಣ’
ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಮಾತನಾಡಿ ‘ ವಸಹಾತುಶಾಹಿ ಸಂದರ್ಭದಲ್ಲಿ ಸಾಮಾಜಿಕ ಸಂಘರ್ಷಗಳು ಸಮಸ್ಯೆಗಳು ಸಾಕಷ್ಟು ಎದುರಾಗಿದ್ದವು. ಅಂತಹ ಸಂದರ್ಭದಲ್ಲಿ ತತ್ವಪದಕಾರರು ಬದುಕಿಗೆ ಮುಖಾಮುಖಿಯಾದರು’ ಎಂದು ಹೇಳಿದರು. ‘ಬದುಕಿನ ನಿಜರೂಪಗಳನ್ನು ಒಳಗೊಂಡ ತತ್ವ ಪದಗಳು ತನ್ನ ಗೇಯಪ್ರಧಾನವಾದ ಸಂಗೀತದಿಂದ ಜನರನ್ನು ತಲುಪಿದವು. ಆದರೆ 70 ದಶಕದವರೆಗೂ ಈ ಪ್ರಕಾರವನ್ನು ಯಾರೂ ಗಂಭೀರವಾಗಿ ಪರಿಗಣಿಸದಿರುವುದು ವಿಪರ್ಯಾಸ’ ಎಂದರು. ‘ನಾವು ಈಗಾಗಲೇ ತತ್ವಪದಗಳ 50 ಸಂಪುಟಗಳನ್ನು ಹೊರ ತಂದಿದ್ದೇವೆ. ಬಿಟ್ಟುಹೋಗಿರುವ ತತ್ವ ಪದಗಳನ್ನೂ ಸಂಗ್ರಹಿಸಿ ಮತ್ತೆ ಪ್ರಕಟಿಸಲಿದ್ದೇವೆ. ಪಾರಿಭಾಷಿಕ ಪದಕೋಶ ಎಂಬ ಬೃಹತ್ ಸಂಪುಟವನ್ನೂ ಹೊರ ತರುತ್ತಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.