ADVERTISEMENT

ಉಡುಪಿ | ಧರೆ ಕುಸಿದರೆ ತಡೆಯುವವರಾರು?

ಗುಡ್ಡಗಳ ಅಗೆತಕ್ಕೆ ಬೇಕಿದೆ ಕಡಿವಾಣ: ಮುಂಜಾಗ್ರತೆ ವಹಿಸದಿದ್ದರೆ ಕಾದಿದೆ ಅಪಾಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 7:33 IST
Last Updated 16 ಜೂನ್ 2025, 7:33 IST
ಮಣಿಪಾಲದ ಸಿಂಡಿಕೇಟ್‌ ಸರ್ಕಲ್‌ನಿಂದ ಲಕ್ಷ್ಮೀಂದ್ರ ನಗರದ ಕಡೆಗೆ ಹೋಗುವ ರಸ್ತೆಯ ಮೇಲ್ಭಾಗದ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿರುವುದು     
ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ   
ಮಣಿಪಾಲದ ಸಿಂಡಿಕೇಟ್‌ ಸರ್ಕಲ್‌ನಿಂದ ಲಕ್ಷ್ಮೀಂದ್ರ ನಗರದ ಕಡೆಗೆ ಹೋಗುವ ರಸ್ತೆಯ ಮೇಲ್ಭಾಗದ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿರುವುದು      ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ      

ಉಡುಪಿ: ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪ ಹೆಚ್ಚಾದಂತೆ ಪ್ರಾಕೃತಿಕ ವಿಕೋಪಗಳೂ ಹೆಚ್ಚುತ್ತಿವೆ. ಇಂತಹ ಪ್ರಾಕೃತಿಕ ವಿಕೋಪಗಳಲ್ಲಿ ಭೂ ಕುಸಿತ ಹೆಚ್ಚಾಗುತ್ತಿದ್ದು, ಎಚ್ಚರಿಕೆಯ ಗಂಟೆ ಬಾರಿಸುತ್ತಲೇ ಇದೆ.

ಕೇರಳ ಮೊದಲಾದ ರಾಜ್ಯಗಳಲ್ಲಿ ಭೀಕರ ಭೂಕುಸಿತ ಸಂಭವಿಸಿರುವ ಉದಾಹರಣೆಗಳು ಕಣ್ಣ ಮುಂದಿದೆ. ಜಿಲ್ಲೆಯಲ್ಲೂ ವಿವಿಧೆಡೆ ಅಭಿವೃದ್ಧಿ ಹೆಸರಿನಲ್ಲಿ ಗುಡ್ಡ ಅಗೆತ ಅವ್ಯಾಹತವಾಗಿ ಮುಂದುವರಿದಿದೆ.

ಮನೆ, ರಸ್ತೆ ನಿರ್ಮಾಣದ ಹೆಸರಿನಲ್ಲಿ ಬುಲ್ಡೋಜರ್ ಬಳಸಿ ಗುಡ್ಡಗಳನ್ನು ಬಗೆಯುವ ದೃಶ್ಯಗಳು ನಗರ ವ್ಯಾಪ್ತಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಎಂಬಂತಾಗಿದೆ.

ADVERTISEMENT

ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ವೇಳೆಯೂ ಗುಡ್ಡಗಳನ್ನು ಅವೈಜ್ಞಾನಿಕವಾಗಿ ಅಗೆಯುತ್ತಿರುವುದು ಭೂಕುಸಿತಕ್ಕೆ ಕಾರಣವಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಭೂಕುಸಿತ ಸಂಭವಿಸದಿದ್ದರೂ ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಪ್ರದೇಶಗಳಲ್ಲಿ ಆಗಾಗ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗುತ್ತಿದೆ.

ಕಾರ್ಕಳ, ಬೈಂದೂರು, ಕುಂದಾಪುರ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಮಣ್ಣು ಕುಸಿಯುತ್ತಲೇ ಇರುತ್ತದೆ. ಅಲ್ಲದೆ, ಜಿಲ್ಲೆಯಲ್ಲಿರುವ ಮಾಳ, ಬಾಳೇಬರೆ, ಆಗುಂಬೆ ಘಾಟಿಗಳಲ್ಲೂ ಜೋರು ಮಳೆಯ ಸಂದರ್ಭದಲ್ಲಿ ಕಲ್ಲು, ಮಣ್ಣು  ಕುಸಿದು ರಸ್ತೆಗೆ ಬಿದ್ದು, ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಈ ಬಾರಿ ಈಗಾಗಲೇ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಮಣಿಪಾಲದ ಕುಂಡೇಲು ಕಾಡು ಪ್ರದೇಶದಲ್ಲಿ ಹಲವು ವರ್ಷಗಳ ಹಿಂದೆ ಮಣ್ಣು ಕುಸಿದಿತ್ತು. ಈ ಬಾರಿ ಮೊದಲ ಮಳೆಗೆ ಮಣಿಪಾಲದ ಸಿಂಡಿಕೇಟ್‌ ಸರ್ಕಲ್‌ನಿಂದ ಲಕ್ಷ್ಮೀಂದ್ರ ನಗರದ ಕಡೆಗಿನ ಇಳಿಜಾರು ರಸ್ತೆಯ ಬದಿಯಲ್ಲಿ ಮಳೆ ನೀರು ರಭಸದಿಂದ ಕೊಚ್ಚಿಕೊಂಡು ಹರಿದು ಕಲ್ಲು, ಮಣ್ಣು ರಸ್ತೆಯಲ್ಲಿ ಸಂಗ್ರಹವಾಗಿತ್ತು.

ಚರಂಡಿ ಒತ್ತುವರಿಯಿಂದಾಗಿ ಮಳೆ ನೀರು ಹರಿದು ಹೋಗಲು ಸಾಧ್ಯವಾಗದೆ ಈ ಅವಾಂತರ ಸೃಷ್ಟಿಯಾಗಿತ್ತು.

ನಗರದ ಹೊರವಲಯದ ಪರ್ಕಳ, ಹಿರಿಯಡ್ಕ ಮೊದಲಾದ ಕಡೆಗಳಲ್ಲೂ ಗುಡ್ಡಗಳಿಂದ ಮಣ್ಣು ತೆಗೆಯಲಾಗುತ್ತಿದೆ. ಈ ರೀತಿ ಅವೈಜ್ಞಾನಿಕವಾಗಿ ಮಣ್ಣು ತೆಗೆಯುವುದರಿಂದ ಭೂಕುಸಿತದ ಭೀತಿ ಎದುರಾಗುವುದರ ಜತೆಗೆ ಪ್ರಾಣಿ ಪಕ್ಷಿಗಳ ಆವಸ ಸ್ಥಾನಗಳಿಗೂ ಧಕ್ಕೆಯಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ರಸ್ತೆಗಳಿಗೆ ತುಂಬಿಸಲು ಮಣ್ಣಿನ ಅಗತ್ಯ ಇರುತ್ತದೆ. ಆ ಕಾರಣಕ್ಕೂ ಜಿಲ್ಲೆಯಲ್ಲಿ ಗುಡ್ಡ ಅಗೆತ ಹೆಚ್ಚಾಗುತ್ತಿದೆ ಎಂದು ಜನರು ಆರೋಪಿಸುತ್ತಾರೆ.

ಪೂರಕ ಮಾಹಿತಿ: ವಾಸುದೇವ ಭಟ್‌, ವಿಶ್ವನಾಥ ಆಚಾರ್ಯ

ಜಿಲ್ಲೆಯಲ್ಲಿ ಭೂಕುಸಿತ ಸಾಧ್ಯತೆ ಇರುವ ಗ್ರಾ.ಪಂ.ಗಳ ಪಟ್ಟಿ
ತಾಲ್ಲೂಕು; ಗ್ರಾಮ ಪಂಚಾಯಿತಿ; ಚದರ ಕಿ.ಮೀ.
ಬೈಂದೂರು; ಬೈಂದೂರು;61.4
ಬೈಂದೂರು;ಗೋಳಿಹೊಳೆ; 79.1
ಬೈಂದೂರು; ಜಡ್ಕಲ್‌; 111.7
ಬೈಂದೂರು;ಕೊಲ್ಲೂರು; 100.6
ಬೈಂದೂರು;ಯಡ್ತರೆ;36.9
ಹೆಬ್ರಿ;ಚಾರ;18.5
ಹೆಬ್ರಿ;ನಾಡ್ಪಾಲು;136.1
ಕಾರ್ಕಳ;ಕೆರ್ವಾಶೆ;46.9
ಕಾರ್ಕಳ;ಮಾಳ;51.7
ಕುಂದಾಪುರ;ಹಳ್ಳಿಹೊಳೆ;44.5
ಕುಂದಾಪುರ;ಹೊಸಂಗಡಿ;39.3
ಕುಂದಾಪುರ;ಇಡೂರು ಕುಂಞಾಡಿ;40.4
ಕುಂದಾಪುರ;ಸಿದ್ಧಾಪುರ;30.2

ಆಧಾರ: ಜಿಎಸ್‌ಐ ಬೆಂಗಳೂರು

ಉದಯ ಶಂಕರ್‌
ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿ ಮಳೆ ನೀರಿಗೆ  ರಸ್ತೆಬದಿಯ ಮಣ್ಣು ಕೊಚ್ಚಿಹೋಗಿರುವುದು      
ಬೈಂದೂರು ವ್ಯಾಪ್ತಿಯ ಸೋಮೇಶ್ವರ ಗುಡ್ಡ ಕುಸಿಯದಂತೆ ಕಾಮಗಾರಿ ನಡೆಸಿರುವುದು
ಬೈಂದೂರು ವತ್ತಿನೆಣೆ ಗುಡ್ಡದಲ್ಲಿ ನಿರ್ಮಿಸಿರುವ ಸ್ಲೋಪ್ ಪ್ರೋಟೆಕ್ಷನ್ ವಾಲ್ ಅಲ್ಲಲ್ಲಿ ಬಿರುಕು ಬಿಟ್ಟಿರುವುದು
ಕಾರ್ಕಳದ ಮಾಳ ಘಾಟಿ ಪ್ರದೇಶದಲ್ಲಿ ಗುಡ್ಡ ಜರಿತ
ಕಾರ್ಕಳದ ಸಾಣೂರಿನಲ್ಲಿ ಅರ್ಧದಷ್ಟು ತಡೆಗೋಡೆ ನಿರ್ಮಾಣವಾಗಿದೆ

‘ತಡೆಗೆ ದಂಡಾಸ್ತ್ರ ಪ್ರಯೋಗ’ ಸರ್ಕಾರಿ ಜಾಗಗಳಿಂದ ಯಾರೂ ಮಣ್ಣು ತೆಗೆಯುವಂತಿಲ್ಲ. ಆದರೆ ಕೆಲವು ಖಾಸಗಿ ವ್ಯಕ್ತಿಗಳು ತಮ್ಮ ಜಾಗದಲ್ಲಿ ಮಣ್ಣು ಅಗೆದರೆ ನಮ್ಮ ಗಮನಕ್ಕೆ ಬರುವುದಿಲ್ಲ. ಯಾರಾದರೂ ದೂರು ನೀಡಿದರಷ್ಟೇ ಗೊತ್ತಾಗುತ್ತದೆ. ಅನಧಿಕೃತವಾಗಿ ಮಣ್ಣು ತೆಗೆಯುವವರಿಗೆ ಜಿಲ್ಲಾಡಳಿತವು ದೊಡ್ಡ ಮೊತ್ತದ ದಂಡ ವಿಧಿಸುತ್ತಿದೆ. ದಂಡವಾಗಿ ಸಣ್ಣ ಮೊತ್ತ ವಿಧಿಸಿದರೆ ಕೆಲವರು ಮತ್ತೆ ಮಣ್ಣು ಅಗೆಯುತ್ತಾರೆ ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ತಿಳಿಸಿದರು. ಕಳೆದ ಬಾರಿ ಗುಡ್ಡ ಕುಸಿದ ಜಾಗಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಬೈಂದೂರಿನ ಸೋಮೇಶ್ವರ ಗುಡ್ಡದ ಮೇಲೆ ಕಟ್ಟಡ ನಿರ್ಮಾಣ ಮಾಡಿದ್ದ ವ್ಯಕ್ತಿಯಿಂದಲೇ ಗುಡ್ಡಜರಿದ ಜಾಗದಲ್ಲಿ ಗೋಡೆ ಕಟ್ಟಿಸಿದ್ದೇವೆ ಎಂದೂ ಹೇಳಿದರು.

- ‘ನೀರು ಹರಿದು ಹೋಗಲು ದಾರಿ ಬಿಡಿ’ ರಸ್ತೆ ನಿರ್ಮಿಸುವಾಗ ಹೆಚ್ಚಿನ ಪ್ರಾಮುಖ್ಯತೆ ನೀಡಿ ಚರಂಡಿ ನಿರ್ಮಿಸಬೇಕು. ಆದರೆ ನಮ್ಮಲ್ಲಿ ಆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ನೀರು ಕಟ್ಟಿ ನಿಂತು ಭೂಮಿಯೊಳಗೆ ಹೋದರೆ ಅದು ಇನ್ನೊಂದು ಜಾಗದಲ್ಲಿ ಮಣ್ಣಿನೊಂದಿಗೆ ಹೊರಗೆ ಬರುತ್ತದೆ. ಆಗ ಭೂ ಕುಸಿತ ಸಂಭವಿಸುತ್ತದೆ. ಆದ್ದರಿಂದ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಅಗತ್ಯ ಎಂದು ಭೂಗರ್ಭ ಶಾಸ್ತ್ರಜ್ಞ ಉದಯ ಶಂಕರ್‌ ಹೇಳಿದರು. ಬುಲ್ಡೋಜರ್‌ಗಳನ್ನು ಬಳಸಿ ಅವೈಜ್ಞಾನಿಕವಾಗಿ ಅಗೆಯುವುದರಿಂದ ಮಳೆ ಬರುವಾಗ ಭೂಮಿಯೊಳಗೆ ಸಾಕಷ್ಟು ನೀರು ಇಂಗುತ್ತದೆ. ಇದು ಗುಡ್ಡಗಳ ಮಣ್ಣು ಸಡಿಲವಾಗಲು ಕಾರಣವಾಗಿ ಭೂ ಕುಸಿತ ಸಂಭವಿಸುತ್ತದೆ ಎಂದೂ ಅವರು ಹೇಳಿದರು.

ಅಲ್ಲಲ್ಲಿ ಗುಡ್ಡ ಜರಿತದ ತಾಣಗಳು ಕಾರ್ಕಳ: ತಾಲ್ಲೂಕಿನ ವಿವಿಧೆಡೆ ಅಲ್ಲಲ್ಲಿ ಗುಡ್ಡ ಕುಸಿಯುತ್ತಿದ್ದು ಮಳೆಗಾಲದಲ್ಲೇ ಹೆಚ್ಚಿನ ಕಡೆ ಇಂಥ ಅವಘಡ ನಡೆಯುತ್ತಿದೆ. ಸಾಣೂರು ಗ್ರಾಮದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169‌ರಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಹೈ ಟೆನ್ಶನ್ ಟವರ್ ಅಡಿ ಭಾಗದ ಗುಡ್ಡದಲ್ಲಿ ಮಣ್ಣು ಕುಸಿಯುತ್ತಿತ್ತು. ಆ ಭಾಗದಲ್ಲಿ ಸಾರ್ವಜನಿಕರ ಆಗ್ರಹದ ಕಾರಣ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಅಲ್ಲಿ ಕಳೆದೆರಡು ಮಳೆಗಾಲದಲ್ಲಿ ತೀರ ಅಪಾಯಕಾರಿ ಸ್ಥಿತಿ ನಿರ್ಮಾಣಗೊಂಡಿತ್ತು. ಕಳೆದ ಮಳೆಗಾಲದಲ್ಲಿ ಹೈಟೆನ್ಷನ್ ಟವರ್ ಅಡಿಯ ಗುಡ್ಡದ ಮಣ್ಣು ಕುಸಿದು ಟವರ್ ಕುಸಿಯುವ ‌ಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲಾಡಳಿತ ಸ್ಥಳೀಯ ಶಾಸಕ ಸೇರಿ ಅಪಾಯಕಾರಿ ಸ್ಥಳಕ್ಕೆ ಭೇಟಿ ನೀಡಿ ತಡೆಗೋಡೆ ನಿರ್ಮಾಣಕ್ಕೆ ಅಂದಾಜು ಪಟ್ಟಿಯನ್ನು ಸಲ್ಲಿಸಿ ಅನುಮೋದನೆ ಪಡೆಯುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ನಿರ್ದೇಶನ ನೀಡಿದ್ದರು. ತಡೆಗೋಡೆಯನ್ನು ಗುಡ್ಡದ ಅರ್ಧ ಭಾಗದಲ್ಲಿ ಮಾತ್ರ ನಿರ್ಮಾಣ ಮಾಡಲಾಗಿದ್ದು ಜನರಲ್ಲಿ ಆತಂಕ ಮುಂದುವರಿದಿದೆ. ಮಳೆಯ ರಭಸಕ್ಕೆ ಗುಡ್ಡದ ಬುಡ ಸಡಿಲಗೊಳ್ಳುತ್ತಿದ್ದು ಮಣ್ಣು ಸರ್ವಿಸ್ ರಸ್ತೆಗೆ ಬೀಳುತ್ತಿದೆ. ಮಳೆಯ ಆರ್ಭಟ ಮುಂದುವರಿದರೆ ಗುಡ್ಡ ಕುಸಿದು ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿದ್ದಾರೆ. ತಾಲ್ಲೂಕಿನ ಮಾಳ ಗ್ರಾಮದ ಮಾಳ ಮಲ್ಲಾರು ಚೆಕ್ ಪೋಸ್ಟ್‌ನಿಂದ ಶೃಂಗೇರಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಆಗಾಗ ಗುಡ್ಡ ಕುಸಿಯುತ್ತಿದೆ. ಈಚೆಗೆ ಮಳೆ ಆರಂಭವಾದಾಗ ಈ ಪ್ರದೇಶದಲ್ಲಿ ಐದು ಕಡೆ ಮಣ್ಣು ಕುಸಿದು ರಸ್ತೆಗೆ ಬಿದ್ದಿತ್ತು. ‌ಗುಡ್ಡದ ಬದಿಯಲ್ಲಿದ್ದ ಮರವೂ ರಸ್ತೆಗೆ ಬಿದ್ದು ವಾಹನ ಸಂಚಾರ ವ್ಯತ್ಯಯವಾಗಿತ್ತು.

ರಸ್ತೆ ನಿರ್ಮಾಣದಿಂದ ಗುಡ್ಡ ಕುಸಿತ ಬೈಂದೂರು: ಕಳೆದ ವರ್ಷ ಮಳೆಗೆ ಬೈಂದೂರಿನ ಸೋಮೇಶ್ವರ ಗುಡ್ಡ ಕುಸಿದಿತ್ತು. ಪಡುವರಿ ಗ್ರಾಮದ ಸೋಮೇಶ್ವರ ಗುಡ್ಡದಲ್ಲಿ ಖಾಸಗಿ ಕಟ್ಟಡಕ್ಕೆ ರಸ್ತೆ ನಿರ್ಮಿಸಿದ್ದರಿಂದ ಗುಡ್ಡ ಕುಸಿಯುವ ಭೀತಿ ಎದುರಾಗಿತ್ತು. ಅದು ಕುಸಿದಿದ್ದರೆ ರಸ್ತೆಯ ಇನ್ನೊಂದು ಪಾರ್ಶ್ವದ ಗುಡ್ಡವೂ ಕುಸಿದು ಸೋಮೇಶ್ವರ ದೇವಾಲಯದ ಆವರಣ ಕೆರೆ ಹಾಗೂ ಸುತ್ತಮುತ್ತ ಅಪಾಯ ಉಂಟಾಗುತ್ತಿತ್ತು. ಬೈಂದೂರು ಪಡುವರಿ ದೊಂಬೆ ಕರಾವಳಿ ಶಿರೂರು ರಸ್ತೆಯಲ್ಲಿ ನೂರಾರು ವಾಹನ ಸಂಚರಿಸುತ್ತವೆ. ಈ ಕಾಮಗಾರಿಯ ಕುರಿತು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪಟ್ಟಣ ಪಂಚಾಯಿತಿ ಗಮನಹರಿಸಿರಲಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿತ್ತು. ಬಳಿಕ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಜಿಲ್ಲಾಧಿಕಾರಿ ಮುನ್ನಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿ ಟಾರ್ಪಾಲಿನ್ ಅಳವಡಿಸುವ ಮೂಲಕ ನೀರು ಇಂಗದಂತೆ ಕ್ರಮಕೈಗೊಳ್ಳಲು ತಿಳಿಸಿದ್ದರು. ಗುಡ್ಡ ಕುಸಿತಕ್ಕೆ ಕಾರಣವಾದ ವರದಿ ಪಡೆದು ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಶಾಶ್ವತ ಪರಿಹಾರದ ಕಂಡುಕೊಳ್ಳುವಂತೆ ರೆಸಾರ್ಟ್ ಮಾಲೀಕರಿಗೆ ತಿಳಿಸಿದ್ದರು. ಈಗ ಗುಡ್ಡ ಕುಸಿಯದಂತೆ ಕಾಮಗಾರಿ ನಡೆಸಲಾಗುತ್ತಿದೆ.  ಈ ವರ್ಷ ಇದೇ ಗುಡ್ಡದ ಇನ್ನೊಂದು ಪಾರ್ಶ್ವದಲ್ಲಿ ಕುಸಿತ ಉಂಟಾಗಿದ್ದು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಬೈಂದೂರಿನ ವತ್ತಿನೆಣೆ ಗುಡ್ಡವನ್ನು ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಕೊರೆಯಲಾಗಿತ್ತು. ಅಲ್ಲಿನ ಭೌಗೋಳಿಕ ಅಂಶಗಳನ್ನು ಅಧ್ಯಯನ ಮಾಡದೆ ಗುಡ್ಡ ಕೊರೆದಿದ್ದರಿಂದ ಗುಡ್ಡ ಕುಸಿದಿತ್ತು. ಬಳಿಕ ಗುಡ್ಡ ಕುಸಿಯದಂತೆ ಕಾಂಕ್ರೀಟ್ ಹೊದಿಕೆಯ ಸ್ಲೋಪ್ ಪ್ರೊಟೆಕ್ಷನ್ ವಾಲ್ ನಿರ್ಮಿಸಲಾಗಿತ್ತು. ಆದರೂ ಹಿಂದಿನ ಎರಡು ಮಳೆಗಾಲದಲ್ಲಿ ಈ ಸ್ಲೋಪ್ ಪ್ರೊಟೆಕ್ಷನ್ ವಾಲ್ ಬಿರುಕು ಬಿಟ್ಟಿದ್ದು ಪ್ರತಿ ವರ್ಷವೂ ಗುಡ್ಡ ಕುಸಿಯುವ ಭೀತಿ ಎದುರಾಗುತ್ತಿದೆ. ಸದ್ಯ ರಸ್ತೆ ನಿರ್ಮಾಣ ಮಾಡಿರುವ ಆರ್.ಬಿ.ಐ. ಸಂಸ್ಥೆಯ ಕಾರ್ಯಪಡೆಯು ಗಸ್ತು ತಿರುಗುತ್ತಿದ್ದು ಅಲ್ಲಲ್ಲಿ ಗುಡ್ಡ ಕುಸಿಯುವ ಸೂಚನಾ ಫಲಕವನ್ನು ಹಾಕಿ ಸಾರ್ವಜನಿಕರನ್ನು ಎಚ್ಚರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.