
ಬ್ರಹ್ಮಾವರ: ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾ ಕೇಂದ್ರದ ಅಭಿವೃದ್ಧಿ ಚಟುವಟಿಕೆಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ ₹1 ಲಕ್ಷ ಅನುದಾನದ ಮಂಜೂರಾತಿ ಪತ್ರವನ್ನು ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ನೀಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ್ ಮಾತನಾಡಿ, ವೀರೇಂದ್ರ ಹೆಗ್ಗಡೆ ಅವರು ಸಮಾಜಮುಖಿ ಅಭಿವೃದ್ಧಿ ಕಾರ್ಯಕ್ರಮಗಳು, ಪ್ರತಿ ಹಳ್ಳಿಗಳಲ್ಲಿ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದ್ದಾರೆ. ರಾಜ್ಯದೆಲ್ಲೆಡೆ ಜನಜಾಗೃತಿ ವೇದಿಕೆ ರಚನೆ ಮಾಡಿ ಮದ್ಯವರ್ಜನ ಶಿಬಿರಗಳನ್ನ ನಡೆಸುವ ಮೂಲಕ ದುಶ್ಚಟ ನಿರ್ಮೂಲನೆ ಮಾಡುತ್ತಿದ್ದಾರೆ. ಸಾಹಿತ್ಯ, ಕಲೆಗೂ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಯಕ್ಷಗಾನ ಕಲಾಕೇಂದ್ರದ ಅಭಿವೃದ್ಧಿಗೆ ಸಹಾಯಧನ ಮಂಜೂರಾತಿ ಮಾಡಿದ್ದಕ್ಕೆ ಕೃತಜ್ಞತೆ ತಿಳಿಸಿದರು.
ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಮಾತನಾಡಿ, ಹೆಗ್ಗಡೆ ಅವರು ಯಕ್ಷಗಾನ ಕಲಾ ಕೇಂದ್ರಕ್ಕೆ ಮೊದಲಿನಿಂದಲೂ ಪ್ರೋತ್ಸಾಹ, ಸಹಕಾರ ನೀಡುತ್ತಿರುವುದು ಖುಷಿಯ ವಿಚಾರ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಅವಿಭಜಿತ ಉಡುಪಿ ತಾಲ್ಲೂಕಿನ ನಿಕಟಪೂರ್ವ ಅಧ್ಯಕ್ಷ ಅಚ್ಚುತ ಪೂಜಾರಿ, ತಾಲ್ಲೂಕು ಯೋಜನಾಧಿಕಾರಿ ರಮೇಶ ಪಿ.ಕೆ, ಕೃಷಿ ಮೇಲ್ವಿಚಾರಕ ರಾಘವೇಂದ್ರ, ಗುಂಡ್ಮಿ, ಒಕ್ಕೂಟದ ಅಧ್ಯಕ್ಷ ಜಗದೀಶ, ಅಧ್ಯಕ್ಷ ಶೇಖರ ಪೂಜಾರಿ, ಸೇವಾ ಪ್ರತಿನಿಧಿ ಶಶಿಕಲಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.