
ಮುಂಡಗೋಡ: ಸಮಯಕ್ಕೆ ಸರಿಯಾಗಿ ಬಸ್‌ಗಳು ಬರುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು, ತಾಲ್ಲೂಕಿನ ಪಾಳಾ ಕ್ರಾಸ್‌ನಲ್ಲಿ, ಮಂಗಳವಾರ ಸಾರಿಗೆ ಬಸ್‌ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಶಿರಸಿ ಮಾರ್ಗವಾಗಿ ಸಂಚರಿಸುವ ಬಸ್‌ಗಳ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, ಬೆಳಿಗ್ಗೆ ಶಾಲಾ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ನಿತ್ಯದ ಕೆಲಸಗಳಿಗೆ ಹೋಗುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತಾಲ್ಲೂಕಿನ ಪಾಳಾ ಸಹಿತ ಸುತ್ತಲಿನ ಗ್ರಾಮಗಳಾದ ಕೋಡಂಬಿ, ಭದ್ರಾಪುರ, ಕಲಕೊಪ್ಪ, ಹಳ್ಳದಮನೆ, ರಾಮಾಪುರ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಿರಸಿ ಹಾಗೂ ಮುಂಡಗೋಡ ಪಟ್ಟಣದ ಶಾಲಾ, ಕಾಲೇಜಿಗೆ ಹೋಗಲು ಸಾರಿಗೆ ಬಸ್‌ಗಳನ್ನು ಅವಲಂಬಿಸಿದ್ದಾರೆ. ಪ್ರಯಾಣಿಕರಿಂದ ತುಂಬಿಕೊಂಡು ಬರುವ ಬಸ್‌ಗಳಿಂದ, ಈ ಭಾಗದ ವಿದ್ಯಾರ್ಥಿಗಳಿಗೆ ಬಸ್ ಹತ್ತಲೂ ಜಾಗ ಇಲ್ಲದಂತಾಗುತ್ತದೆ. ಕೆಲವೊಮ್ಮೆ ಜಾಗ ಸಿಕ್ಕರೂ, ಬಸ್‌ಗಳು ತಡವಾಗಿ ತಲುಪುತ್ತಿವೆ. ಇದರಿಂದ ನಿತ್ಯದ ಪಾಠಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಕೆಲವೊಮ್ಮೆ ಬಸ್‌ನಲ್ಲಿ ಜಾಗವಿಲ್ಲ ಎಂದು ನಿರ್ವಾಹಕ ಹೇಳಿ, ಮುಂದೆ ಹೋಗುತ್ತಿರುವ ಘಟನೆಗಳು ನಿತ್ಯವೂ ನಡೆಯುತ್ತಿವೆ. ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಕೊಡಿಸುವಲ್ಲಿ ಸಾರಿಗೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ದೂರಿದರು.
ʼಸಾರಿಗೆ ಬಸ್ ತಡವಾಗಿ ಬಂದಿದ್ದಲ್ಲದೇ, ಪ್ರಯಾಣಿಕರಿಂದ ತುಂಬಿದೆ. ಬಸ್‌ನಲ್ಲಿ ಜಾಗವಿಲ್ಲ ಎಂದು ನಿರ್ವಾಹಕ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಆ ಬಸ್‌ನ್ನು ತಡೆದು ಪ್ರತಿಭಟಿಸಿದರು.
ಇದೇ ಮಾರ್ಗದಲ್ಲಿ ಬರುತ್ತಿದ್ದ ಇನ್ನಿತರ ಸಾರಿಗೆ ಬಸ್‌ಗಳಿಗೂ ಪ್ರತಿಭಟನೆಯ ಬಿಸಿ ತಟ್ಟಿತು. ಕೆಲ ಸಮಯ ಪ್ರತಿಭಟನೆ ಮುಂದುವರೆದಿದ್ದರಿಂದ ವಾಹನಗಳು ಸಾಲುಗಟ್ಟಿ ರಸ್ತೆಯಲ್ಲಿ ನಿಂತು, ಪ್ರಯಾಣಿಕರು ಪರದಾಡಿದರು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರ ಮನವೊಲಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರುʼ ಎಂದು ಸ್ಥಳೀಯ ನಿವಾಸಿ ಶಿವಕುಮಾರ ಹೇಳಿದರು.
ʼಕೆಲವೊಮ್ಮೆ ದೂರಕ್ಕೆ ಹೋಗಿ ನಿಲ್ಲಿಸಿ, ಪ್ರಯಾಣಿಕರನ್ನು ಇಳಿಸಿದ ತಕ್ಷಣವೇ ಬಸ್ ಮುಂದೆ ಸಾಗುತ್ತದೆ. ಇದರಿಂದ, ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹೊಂಡಗಳಿಂದ ತುಂಬಿರುವ ರಸ್ತೆಯಿಂದಲೂ, ಕಾಲೇಜಿಗೆ ತಡವಾಗಿ ಹೋಗುವಂತಾಗಿದೆ. ಕಳೆದ ಹಲವು ತಿಂಗಳಿಂದ ಬಸ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದೇವೆʼ ಎಂದು ವಿದ್ಯಾರ್ಥಿನಿ ಶ್ವೇತಾ ಹೊಸಮನಿ ಹೇಳಿದರು.
‘ಪಟ್ಟಣದಲ್ಲಿ ನೂತನವಾಗಿ ಕಾರ್ಯಾರಂಭ ಮಾಡಿರುವ ಬಸ್ ಘಟಕದಿಂದ ಶಿರಸಿ-ಹುಬ್ಬಳ್ಳಿ ಮಾರ್ಗದಲ್ಲಿ ಬಸ್‌ಗಳನ್ನು ಬಿಡಬೇಕು. ಬೆಳಿಗ್ಗೆ ಹಾಗೂ ಸಂಜೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ, ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಬಸವರಾಜ ಹಳ್ಳಮ್ಮನವರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.