
ದಾಂಡೇಲಿ: ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧಿಗೆ ಕಾರವಾರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ₹ 1 ಲಕ್ಷ ದಂಡ ಪಾವತಿಸುವಂತೆ ಮತ್ತು ಸಂತ್ರಸ್ತ ಬಾಲಕನಿಗೆ ₹ 3 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.
ಇಲ್ಲಿನ ನಿರ್ಮಲಾ ನಗರದ ನಿವಾಸಿ ಹರೀಶ ಭುಜಂಗ ಮೋರೆ (28) ಶಿಕ್ಷೆಗೆ ಒಳಗಾದ ಅಪರಾಧಿ.
ಮೇ ತಿಂಗಳಿನಲ್ಲಿ ಬಾಲಕನನ್ನು ಕಾಳಿ ನದಿ ಹತ್ತಿರ ಕರೆದುಕೊಂಡು ಹೋಗಿದ್ದ ಆತ, ಈ ಕೃತ್ಯ ಎಸಗಿದ್ದ. ಮೇ 12ರಂದು ನಗರ ಪೊಲೀಸರು ‘ಪೋಕ್ಸೊ’ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಪಿ.ಎಸ್.ಐ ಕಿರಣ ಪಾಟೀಲ ವಿಚಾರಣೆ ಕೈಗೊಂಡಿದ್ದರು. ಮುಂದಿನ ತನಿಖೆಯು ಪ್ರಭಾರ ಸಿ.ಪಿ.ಐ ದಯಾನಂದ ಶೇಗುಣಸಿ ಅವರ ಮಾರ್ಗದರ್ಶನದಲ್ಲಿ, ಸಹಾಯಕ ತನಿಖಾಧಿಕಾರಿ ಮಂಜುನಾಥ ಶೆಟ್ಟಿ ಹಾಗೂ ಸಿಬ್ಬಂದಿ ತನಿಖೆ ನಡೆದಿತ್ತು. ಪ್ರಕರಣ ದಾಖಲಾಗಿ ಕೇವಲ 19 ದಿನಗಳಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಕಾರವಾರದ ವಿಶೇಷ ಸರ್ಕಾರಿ ಅಭಿಯೋಜಕಿ ಶುಭಾ ಆರ್. ಗಾಂವಕರ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ನಗರ ಪೊಲೀಸ್ ಠಾಣೆಯ ಎ.ಎಸ್.ಐ. ನೀಲಕಂಠ ಆಚಾರಿ ನ್ಯಾಯಾಲಯಕ್ಕೆ ಸಾಕ್ಷ್ಯ ಹಾಜರು ಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.