ADVERTISEMENT

ಕಾರವಾರದ ಕ್ರಿಮ್ಸ್‌ನಲ್ಲಿ ಶುಲ್ಕ ನಿಗದಿ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 6:55 IST
Last Updated 19 ಜುಲೈ 2025, 6:55 IST
ಕ್ರಿಮ್ಸ್‌ನಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಜನಶಕ್ತಿ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.
ಕ್ರಿಮ್ಸ್‌ನಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಜನಶಕ್ತಿ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.   

ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) ವಿವಿಧ ಆರೋಗ್ಯ ಸೇವೆಗಳಿಗೆ ಶುಲ್ಕ ನಿಗದಿಪಡಿಸಿರುವುದಕ್ಕೆ ಜನಶಕ್ತಿ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.

ಸ್ವಾಯತ್ತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಹಣಕಾಸು ಸಮಿತಿ ನಿರ್ಣಯ ಆಧರಿಸಿ ಕ್ರಿಮ್ಸ್‌ನಲ್ಲಿ ಎಕ್ಸ್–ರೇ, ರಕ್ತ ಪರೀಕ್ಷೆ, ಪ್ರಮಾಣ ಪತ್ರ ವಿತರಣೆ ಸೇರಿದಂತೆ ಹಲವು ಸೇವೆಗಳಿಗೆ ಶುಲ್ಕ ನಿಗದಿಪಡಿಸಲಾಗಿದೆ.

‘ಬಡವರಿಗೆ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಉಚಿತವಾಗಿ ಎಲ್ಲಾ ವೈದ್ಯಕೀಯ ಸವಲತ್ತುಗಳನ್ನು ನೀಡಬೇಕು. ಜಿಲ್ಲೆಯ ಏಕೈಕ ವೈದ್ಯಕೀಯ ಕಾಲೇಜಿನ ಅಧೀನದ ಆಸ್ಪತ್ರೆಗೆ ಬರುವವರು ಬಡ ಮತ್ತು ಮಧ್ಯಮ ವರ್ಗಗಳ ಜನರೇ ಹೆಚ್ಚಿದ್ದಾರೆ. ಆರೋಗ್ಯ ಸೌಕರ್ಯ ಒದಗಿಸಲು ಶುಲ್ಕ ನಿಗದಿಪಡಿಸಿದರೆ ಅವರಿಗೆ ಭರಿಸಲು ಸಮಸ್ಯೆ ಉಂಟಾಗಬಹುದು’ ಎಂದು ಜನಶಕ್ತಿ ವೇದಿಕೆ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರಿಗೆ ದೂರಿದ್ದಾರೆ.

ADVERTISEMENT

‘ಎಂಆರ್‌ಐ ಸ್ಕ್ಯಾನಿಂಗ್‌ಗೆ ಉಡುಪಿ ಜಿಲ್ಲಾಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಇದ್ದು, ಕೂಡಲೇ ಕ್ರಿಮ್ಸ್‌ಗೆ ಎಂಆರ್‌ಐ ಯಂತ್ರವನ್ನು ನೀಡಬೇಕು. ತಜ್ಞರ ಕೊರತೆಯಿಂದ ಹೆಚ್ಚಿನ ತಪಾಸಣೆಗೆ ಮಂಗಳೂರು, ಮಣಿಪಾಲ, ಹುಬ್ಬಳ್ಳಿ, ಗೋವಾ ರಾಜ್ಯ ಮುಂತಾದ ಕಡೆ ಹೋಗಬೇಕಾಗಿರುವುದರಿಂದ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತವಾಗಿ ಅಂಬ್ಯುಲೆನ್ಸ್ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಸದಸ್ಯರಾದ ರಾಮಾ ನಾಯ್ಕ, ಬಾಬು ಶೇಖ್, ಚಂದ್ರಕಾಂತ ನಾಯ್ಕ, ಖೈರುನ್ನೀಸಾ ಶೇಖ್, ಸೂರಜ್ ಕುರುಮಕರ್, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.