
ಹಳಿಯಾಳ: ಹಾಲಕ್ಕಿ ಕುಣಬಿ ಜನಾಂಗವನ್ನು ಅನುಸೂಚಿತ ಪಂಗಡ ಎಸ್‌ಟಿ ವರ್ಗದಲ್ಲಿ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಪ್ರಸ್ತಾವ ಸಲ್ಲಿಸಲು ಮುಖ್ಯಮಂತ್ರಿ ಅವರಿಗೆ ವಿನಂತಿಸಲಾಗಿದೆ ಎಂದು ಶಾಸಕ ಆರ್.ವಿ ದೇಶಪಾಂಡೆ ಹೇಳಿದರು.
ಶುಕ್ರವಾರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಕ್ಕಿ ಕುಣಬಿ ಜನಾಂಗವು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಸಮುದಾಯವಾಗಿದೆ. ರಾಜ್ಯ ಸರ್ಕಾರ 2010ರಲ್ಲಿ ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿತ್ತು. ಕೆಲ ಪ್ರಸ್ತಾವದಲ್ಲಿ ತಾಂತ್ರಿಕ ದೋಷಗಳು ಇರುವುದರಿಂದ ನಾಲ್ಕು ವರ್ಷ ಕುಲಶಾಸ್ತ್ರೀಯ ಅಧ್ಯಯನ ನಡೆಸಿ 2017ರಲ್ಲಿ ಪುನಃ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು. ಇದೀಗ ಕೇಂದ್ರ ಸರ್ಕಾರದ ರಿಜಿಸ್ಟರ್ ಜನರಲ್ ಆಫ್ ಇಂಡಿಯಾ ಸಂಸ್ಥೆಯ ವರದಿಯನ್ನು ಪರಿಶೀಲನೆಗೆ ತೆಗೆದುಕೊಂಡು ನಿರ್ದಿಷ್ಟ ಅಭಿಪ್ರಾಯಗಳೊಂದಿಗೆ ರಾಜ್ಯ ಸರ್ಕಾರಕ್ಕೆ ಪುನಃ ಕಳುಹಿಸಿದೆ. ಈಗ ಮತ್ತೆ ಪರಿಷ್ಕರಿಸಿ ಕೇಂದ್ರ ಸರ್ಕಾರಕ್ಕೆ ಹಾಲಕ್ಕಿ ಒಕ್ಕಲಿಗರು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶಿಫಾರಸು ಮಾಡುವ ಅಗತ್ಯವಿದ್ದು ಈ ಬಗ್ಗೆ ಮುಖ್ಯಮಂತ್ರಿಯವರಿಗೂ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರಿಗೂ ಸಹ ಆಗ್ರಹಿಸುತ್ತೇನೆ ಎಂದರು.
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿಶೇಷ ಪ್ರಕರಣಗಳಾದ ವಿದ್ಯುತ್ ಅವಘಡದಿಂದ ಸಾವಿಗೀಡಾದ ಸಾನ್ವಿ ಬಸವರಾಜ ಗೌಳಿ ಮುಂಡವಾಡ ಬಲೂನ್ ಕುತ್ತಿಗೆಗೆ ಸಿಲುಕಿ ಸಾವಿಗೀಡಾದ ನಾರಾಯಣ ಮಾದೇವ ಬೆಳಗಾಂವಕರ ಅವರಿಗೆ ತಲಾ ₹ 2ಲಕ್ಷ ಪರಿಹಾರ, ಕೊಟ್ಟಿಗೆ ಸುಟ್ಟು ಎತ್ತು ಸಾವಿಗೀಡಾದ ಬಸಪ್ಪ ಚಪ್ಪರದಾರ ಬೆಳವಟಗಿ ಕುಟುಂಬಕ್ಕೆ ₹ 20 ಸಾವಿರ ಪರಿಹಾರ, ಹಳಿಯಾಳ ದಾಂಡೇಲಿ ಹ್ಯಾವ್ ಏ ಫೌಂಡೇಷನ್ ಮೂಲಕ ತಲಾ ₹ 10 ಸಾವಿರ 4 ಜನರಿಗೆ ಆರ್ಥಿಕ ಸಹಾಯ ಮಾಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.