
ಕಾರವಾರ: ಭಾರತೀಯ ನೌಕಾದಳದಲ್ಲಿ ಎರಡನೇ ದರ್ಜೆಯ ಹುದ್ದೆಗಳ ಭರ್ತಿಗೆ ಅನುಕೂಲವಾಗುವಂತೆ ಕಾರವಾರದ ಕದಂಬ ನೌಕಾನೆಲೆಯಲ್ಲಿ ನೇಮಕಾತಿ ಕೇಂದ್ರವನ್ನು ನೌಕಾದಳ ಆರಂಭಿಸಿದೆ.
ನೌಕಾದಳದ ಕಾಯಂ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಈವರೆಗೆ ಮುಂಬೈ, ವಿಶಾಖಪಟ್ಟಣಂ ನೌಕಾನೆಲೆಯಲ್ಲಿನ ನೇಮಕಾತಿ ಕೇಂದ್ರಗಳಲ್ಲಿ ನಡೆಯುತ್ತಿತ್ತು. ಹೊರರಾಜ್ಯದ ನೇಮಕಾತಿ ಕೇಂದ್ರಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುವ ಕಾರಣಕ್ಕೆ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯ ಉಂಟಾಗುತ್ತಿದೆ ಎಂಬ ಆರೋಪ ನಿರಂತರವಾಗಿತ್ತು.
‘ನೌಕಾನೆಲೆ ಯೋಜನೆಗೆ ಭೂಮಿ ನೀಡಿ, ನಿರಾಶ್ರಿತರಾದ ಕುಟುಂಬಗಳಿಗೆ ಒಪ್ಪಂದದಂತೆ ಉದ್ಯೋಗ ನೀಡುತ್ತಿಲ್ಲ. ಹೊರಗುತ್ತಿಗೆ ಕಾರ್ಮಿಕರಾಗಿ ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತಿದೆ. ನೌಕಾದಳದ ಕಾಯಂ ಹುದ್ದೆಗಳಿಗೆ ಹೊರರಾಜ್ಯದವರ ನೇಮಕ ಹೆಚ್ಚುತ್ತಿದೆ’ ಎಂಬುದು ಯೋಜನೆಗೆ ನಿರಾಶ್ರಿತರಾದವರ ಆರೋಪವಾಗಿತ್ತು.
ಸ್ಥಳೀಯರ ಹಲವು ವರ್ಷದ ಬೇಡಿಕೆ ಪರಿಗಣಿಸಿ, ಸದ್ಯ ನೌಕಾನೆಲೆಯಲ್ಲಿ ನೇಮಕಾತಿ ಕೇಂದ್ರ ಆರಂಭಿಸಲಾಗಿದೆ. ಸದ್ಯ ಈ ನೇಮಕಾತಿ ಕೇಂದ್ರದಲ್ಲಿ ನ.15ರ ವರೆಗೆ ಅಗ್ನಿವೀರರ ಆಯ್ಕೆಗೆ ಲಿಖಿತ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯುತ್ತಿದೆ. ದೇಶದ ವಿವಿಧ ಭಾಗಗಳಿಂದ ನೂರಾರು ಅಭ್ಯರ್ಥಿಗಳು ಪಾಲ್ಗೊಂಡಿದ್ದಾರೆ.
‘ಕದಂಬ ನೌಕಾನೆಲೆಯಲ್ಲಿ ದೇಶದ 10ನೇ ನೇಮಕಾತಿ ಕೇಂದ್ರ ಆರಂಭಿಸಲಾಗಿದ್ದು, ಇದು ಕರ್ನಾಟಕ, ಗೋವಾ ಮತ್ತು ದಕ್ಷಿಣ ಮಹಾರಾಷ್ಟ್ರ ಭಾಗದ ಯುವಜನರಿಗೆ ಅನುಕೂಲವಾಗಲಿದೆ. ಇದೇ ಕೇಂದ್ರದಲ್ಲಿ ನೌಕಾದಳದ ಎರಡನೇ ದರ್ಜೆಯ ಹುದ್ದೆಗಳ ಭರ್ತಿಗೆ ನೇಮಕಾತಿ ಪರೀಕ್ಷೆ, ತರಬೇತಿ ನಡೆಯಲಿದೆ. ಸದ್ಯ ಇಲ್ಲಿ ನಡೆಯುತ್ತಿರುವ ಅಗ್ನಿವೀರ ನೇಮಕಾತಿ ರ‍್ಯಾಲಿ ಪ್ರಕ್ರಿಯೆಯನ್ನು ನೌಕಾಪಡೆಯ ಕೇಂದ್ರ ಕಚೇರಿ ಮತ್ತು ಮುಂಬೈ ನೌಕಾನೆಲೆಯ ಹಿರಿಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ’ ಎಂದು ನೌಕಾದಳವು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ತಿಳಿಸಿದೆ.
ಕೆಲ ತಿಂಗಳ ಹಿಂದೆ ಕಾರವಾರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನೌಕಾನೆಲೆ ನಿರಾಶ್ರಿತರೊಂದಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಭೆ ನಡೆಸಿದ್ದ ವೇಳೆ ನಿರಾಶ್ರಿತ ಪ್ರಮುಖರು ಸ್ಥಳೀಯವಾಗಿ ನೇಮಕಾತಿ ಕೇಂದ್ರ ಆರಂಭಕ್ಕೆ ಒತ್ತಾಯಿಸಿದ್ದರು. ಜನರ ಬೇಡಿಕೆ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಒತ್ತಡ ಹೇರಿದ್ದ ಸಂಸದ ಕಾಗೇರಿ ಕಾರವಾರದಲ್ಲಿ ನೌಕಾದಳದ ನೇಮಕಾತಿ ಕೇಂದ್ರ ಆರಂಭಿಸಲು ಒತ್ತಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.