
ಪ್ರಜಾವಾಣಿ ವಾರ್ತೆ
ಶಿರಸಿ: ಪಾರಂಪರಿಕ ಬೆಟ್ಟ, ಕಾನು, ದೇವರ ಕಾಡು, ಗೋಮಾಳ ಜೀವವೈವಿಧ್ಯದ ಉಳಿವಿನ ಜತೆ ಮಲೆನಾಡಿನ ರೈತರ ಸಾಮೂಹಿಕ ನೈಸರ್ಗಿಕ ಸಂಪತ್ತಿನ ಸುಸ್ಥಿರ ಅಭಿವೃದ್ಧಿ ಹಿನ್ನೆಲೆಯಲ್ಲಿ ಜೂನ್ 2ರಂದು ತಾಲ್ಲೂಕಿನ ಯಡಳ್ಳಿಯಲ್ಲಿ ವೃಕ್ಷಾರೋಪಣ ಬೆಟ್ಟ ಅಭಿಯಾನ ಸಂಘಟಿಸಲಾಗಿದೆ’ ಎಂದು ವೃಕ್ಷಲಕ್ಷ ಆಂದೋಲನದ ಸಂಚಾಲಕ ಅನಂತ ಅಶೀಸರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಆಯೋಜಿಸಿ ಮಾಹಿತಿ ನೀಡಿದ ಅವರು, ‘ಕಳೆದ 2 ವರ್ಷಗಳಲ್ಲಿ ‘ಬ’ ಖರಾಬ ವಿಭಾಗದಲ್ಲಿ ಬೆಟ್ಟವನ್ನು ಸೇರಿಸಿರುವ ಪ್ರಕರಣಕ್ಕೆ ಪ್ರತಿಭಟನೆ ಆದರೂ ಸಮಸ್ಯೆ ಪರಿಹಾರ ಆಗಿಲ್ಲ. ಬೆಟ್ಟ, ಕಾನು, ಗೋಮಾಳ, ಕುಮ್ಕಿ ಮುಂತಾದ ಗ್ರಾಮ ನೈಸರ್ಗಿಕ ಸಾಮೂಹಿಕ ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ ಲೀಸ್ ನೀಡುವ ಯೋಜನೆಗೆ ಸರ್ಕಾರ ಪ್ರಯತ್ನ ನಡೆಸಿದಾಗ 2 ವರ್ಷ ಹಿಂದೇ ಮಲೆನಾಡಿನ ಜನತೆ ವಿರೋಧಿಸಿದೆ. ಸರ್ಕಾರ ಈ ಯೋಜನೆ ಕೈಬಿಟ್ಟಿದೆ. ಆದಾಗ್ಯೂ ಪಶ್ಚಿಮ ಘಟ್ಟದ ಬೆಟ್ಟ, ಕಾನು, ಗೋಚರ, ಸೊಪ್ಪಿನ ಮುಫತ್ತು ಮುಂತಾದ ಗ್ರಾಮ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸುವ ಸರ್ಕಾರದ ಹಿಂಬಾಗಿಲ ಯೋಜನೆಗಳೂ ಆಗಾಗ ಮುನ್ನೆಲೆಗೆ ಬರುತ್ತಿವೆ. ಬೆಟ್ಟ ಕಾನು ಅರಣ್ಯ ನಾಶ ಪ್ರಕರಣಗಳು ಜರುಗುತ್ತಿವೆ. ಬೆಟ್ಟ, ಕಾನು ಗ್ರಾಮ ಅರಣ್ಯ ನಾಶದಂತ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ’ ಎಂದರು.
ಜೂನ್ 2ರಂದು 10.30ಕ್ಕೆ ಯಡಳ್ಳಿ ಸಹಕಾರಿ ಸಂಘದ ಆವರಣದಲ್ಲಿ ವೃಕ್ಷಾರೋಪಣ ಬೆಟ್ಟ ಅಭಿಯಾನ ಕಾರ್ಯಕ್ರಮ ನಡೆಯಲಿದೆ. ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಸಾನ್ನಿಧ್ಯ ವಹಿಸುವರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಅರಣ್ಯ ಇಲಾಖೆ ಸಿಸಿಎಫ್ ಎ.ವಿ.ವಸಂತ ರೆಡ್ಡಿ ಆಗಮಿಸುವರು. ಶ್ರೀಧರ ಮಂಜುನಾಥ ಕೆರೆಕೊಪ್ಪ ಅವರಿಗೆ ಬೆಟ್ಟ ಸನ್ಮಾನ ಮಾಡಲಾಗುತ್ತದೆ’ ಎಂದರು.
ಜೂನ್ 4ರಂದು ಬೆಳಿಗ್ಗೆ 10.30ಕ್ಕೆ ನೆಲಮಾವು ಮಠದ ಮಾಧವಾನಂದ ಭಾರತಿ ಸ್ವಾಮೀಜಿ ಅವರಿಂದ ನೆಲಮಾವು ಬೆಟ್ಟದಲ್ಲಿ ವೃಕ್ಷಾರೋಪಣ ಕಾರ್ಯಕ್ರಮದ ಉದ್ಘಾಟನೆ ಆಗಲಿದೆ. 5ರಂದು ತಾಲ್ಲೂಕಿನ ಭೈರುಂಬೆಯ ಶಾರದಾಂಬಾ ಶಿಕ್ಷಣ ಸಂಸ್ಥೆ ನೇತೃತ್ವದಲ್ಲಿ ಹಲಸು ವೃಕ್ಷಾರೋಪಣ ನಡೆಯಲಿದೆ. ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಎಸ್.ಬಿ.ದಂಡೀನ್, ಡಿಸಿಎಫ್ ಜಿ.ಆರ್.ಅಜ್ಜಯ್ಯ ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಘಟನೆಯ ಪ್ರಮುಖರಾದ ಕೇಶವ ಕೊರ್ಸೆ, ಜಿ.ಆರ್.ಹೆಗಡೆ ಬೆಳ್ಳೇಕೇರಿ, ನಾರಾಯಣ ಹೆಗಡೆ ಗಡೀಕೈ, ಗಣಪತಿ ಕೆ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.