
ಶಿರಸಿ: ರೈತರ ಜೀವನಾಡಿಯಾಗಿರುವ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ ಬಡ್ಡಿರಹಿತ ಅಲ್ಪಾವಧಿ ಸಾಲ ಹಾಗೂ ಶೇಕಡಾ 3ರ ಬಡ್ಡಿದರದ ಮಧ್ಯಮ ಹಾಗೂ ದೀರ್ಘಾವಧಿ ಸಾಲದ ಮೊತ್ತ ಏರಿಸಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಿಗೆ ನೀಡಲು 'ಆರ್ಥಿಕ ಸದೃಢತೆ'ಯ ಮಾನದಂಡ ಮುಂದಿಟ್ಟಿದೆ. ಬ್ಯಾಂಕ್‍ನ ಈ ನಡೆಯಿಂದ ಜಿಲ್ಲೆಯ ಶೇ 75ಕ್ಕಿಂತ ಹೆಚ್ಚು ಸಂಘಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ರಾಜ್ಯ ಸರ್ಕಾರವು ಗರಿಷ್ಠ ₹5 ಲಕ್ಷವರೆಗೆ ಶೂನ್ಯ ಬಡ್ಡಿ ದರ ಹಾಗೂ ಶೇ.3ರ ಬಡ್ಡಿ ದರದಲ್ಲಿ ಮಾಧ್ಯಮಿಕ ಹಾಗೂ ದೀರ್ಘಾವಧಿ ಸಾಲ ₹15 ಲಕ್ಷವನ್ನು ಪ್ಯಾಕ್ಸ್‌ಗಳ ಮೂಲಕ ರೈತರಿಗೆ ಕೊಡಿಸಿ, ಬಡ್ಡಿಯನ್ನು ತಾನೇ ಭರಿಸುವ ಯೋಜನೆ ರೂಪಿಸಿದೆ. ಆದರೆ, ಆ ರಿಯಾಯಿತಿಯನ್ನು ಪಡೆಯಲು ಈಗ ಬಹುತೇಕ ಸಹಕಾರಿ ಸಂಘದಲ್ಲಿ ರೈತರಿಗೆ ಸಾಲ ಸಿಗುತ್ತಿಲ್ಲ. ಇದರಿಂದ ಕೃಷಿ ಅಭಿವೃದ್ಧಿ, ಬೆಳೆ ಪ್ರದೇಶ ವಿಸ್ತರಣೆ, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮತ್ತಿತರೆ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ನೆರವಿಲ್ಲದೆ ರೈತರು ಸ್ಥಳೀಯ ಸಹಕಾರಿ ಸಂಘವನ್ನು ದೂರುವಂತಾಗಿದೆ.
'ನಬಾರ್ಡ್‌ನಿಂದ ಅಪೆಕ್ಸ್ ಬ್ಯಾಂಕ್, ಅಲ್ಲಿಂದ ಡಿಸಿಸಿ ಬ್ಯಾಂಕ್ ಮೂಲಕ ಎಲ್ಲ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಆರ್ಥಿಕ ನೆರವು ಹರಿದು ಬರುತ್ತಿತ್ತು. ಈಗ ನಬಾರ್ಡ್ ಅನುದಾನ ಕಡಿತ ಮಾಡಿದ್ದರಿಂದ ಕೆಡಿಸಿಸಿ ಬ್ಯಾಂಕ್ ಕೂಡ ಹೆಚ್ಚುವರಿ ಸಾಲ ನೀಡಲು ಯೋಚಿಸುವಂತಾಗಿದೆ. ಈ ನಡುವೆ ಸಾಲದ ಮೊತ್ತ ಏರಿಸಿ ಸಾಲ ನೀಡಲು ನಿರಾಕರಿಸುತ್ತಿರುವ ಬ್ಯಾಂಕ್ ನಡೆಯಿಂದ ಸಹಕಾರ ಸಂಘಗಳ ಆರ್ಥಿಕ ವ್ಯವಸ್ಥೆ ಮೇಲೆ ಬರೆ ಎಳೆದಂತಾಗಿದೆ. ನಬಾರ್ಡ್, ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ನಡುವಿನ ಜಟಾಪಟಿಯ ನೇರ ಪರಿಣಾಮ ಫಲಾನುಭವಿಗಳ ಮೇಲೆ ಉಂಟಾಗಿದೆ' ಎಂಬುದು ಹಲವು ಸಹಕಾರಿಗಳ ಅಭಿಪ್ರಾಯ.
ಆದರೆ, ಕೆಡಿಸಿಸಿ ಬ್ಯಾಂಕ್ ಮೂಲದ ಪ್ರಕಾರ, 'ಜಿಲ್ಲೆಯ ಬೆರಳೆಣಿಕೆ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳನ್ನು ಹೊರತುಪಡಿಸಿ ಉಳಿದವು ಇನ್ನೂ ಆರ್ಥಿಕ ಸಬಲತೆ ಪಡೆದಿಲ್ಲ. ಹಲವು ಸಂಘದಲ್ಲಿ ಆರ್ಥಿಕ ಅವ್ಯವಹಾರ ನಡೆದಿದೆ. ಒಂದೊಮ್ಮೆ ಸರ್ಕಾರದ ನಿಯಮಾವಳಿಯಂತೆ ₹15 ಲಕ್ಷ ಸಾಲ ನೀಡಿದರೆ ಅದರ ಮರುಪಾವತಿ ವೇಳೆ ಸಮಸ್ಯೆ ಆದರೆ ಬ್ಯಾಂಕ್ ನಷ್ಟಕ್ಕೆ ಒಳಗಾಗಬೇಕಾಗುತ್ತದೆ. ಹೀಗಾಗಿ ಆರ್ಥಿಕ ಬಲವಿರುವ, ಸ್ವಂತ ಬಂಡವಾಳ ಇರುವ ಸಂಘಗಳು ತಮ್ಮ ಸಾಮರ್ಥ್ಯದ ಮೇಲೆ ಸಾಲ ನೀಡಬಹುದು ಎಂದು ಈಗಾಗಲೇ ತಿಳಿಸಲಾಗಿದೆ. ಉಳಿದಂತೆ ಶೂನ್ಯ ಬಡ್ಡಿ ದರದಡಿ ₹3 ಲಕ್ಷ ಹಾಗೂ ಶೇ.3ರ ಬಡ್ಡಿ ದರದಡಿ ₹5 ಲಕ್ಷದ ಸಾಲ ಯೋಜನೆ ಚಾಲ್ತಿಯಲ್ಲಿದೆ.
‘ಜಿಲ್ಲೆಯಲ್ಲಿನ 200ಕ್ಕೂ ಹೆಚ್ಚು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಿಂದ ₹500 ಕೋಟಿಗೂ ಹೆಚ್ಚು ಸಾಲದ ಬೇಡಿಕೆ ಇದೆ. ಇವುಗಳಲ್ಲಿ ಹಲವು ಸಂಘಗಳು ಕೇವಲ ಪಡಿತರ ವಿತರಣೆ ಹಾಗೂ ಪಿಗ್ಮಿ ಸಂಗ್ರಹಕ್ಕಷ್ಟೇ ಸೀಮಿತವಾದಂತಿದೆ. ಜತೆ, ಜಿಲ್ಲೆಯ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಲ್ಲಿ ಆರ್ಥಿಕ ಅಶಿಸ್ತು ಹೆಚ್ಚುತ್ತಿರುವ ಕಾರಣ ಕೆಡಿಸಿಸಿ ಬ್ಯಾಂಕ್ ಸಾಲದ ಮೊತ್ತ ಏರಿಸಲು ಹಿಂದೇಟು ಹಾಕಲಾಗುತ್ತಿದೆ’ ಎಂಬ ಮಾತು ಬ್ಯಾಂಕ್‍ನ ಕೆಲವು ನಿರ್ದೇಶಕ ಮಾತಾಗಿದೆ.
200ಕ್ಕೂ ಹೆಚ್ಚು ಸಂಘಗಳು ₹500 ಕೋಟಿಗೂ ಹೆಚ್ಚು ಸಾಲದ ಬೇಡಿಕೆ ₹5 ಲಕ್ಷ ಮತ್ತು ₹15 ಲಕ್ಷ ಸಾಲ ನೀಡಲು ಕೆಡಿಸಿಸಿ ನಿರಾಕರಣೆ
ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಆರ್ಥಿಕ ಸದೃಢತೆ ಆಧರಿಸಿ ಕೆಡಿಸಿಸಿ ಬ್ಯಾಂಕ್ ಶೂನ್ಯ ಬಡ್ಡಿ ಹಾಗೂ ಶೇ.3 ರ ಬಡ್ಡಿ ಯೋಜನೆಗಳಡಿ ಸಾಲ ವಿತರಿಸಲು ನಿರ್ಧರಿಸಿದೆ. ಬ್ಯಾಂಕ್ ನ ಈ ನಡೆ ಸಹಕಾರಿ ಸಂಘಗಳು ಆರ್ಥಿಕ ಶಕ್ತಿ ವೃದ್ದಿಸಿಕೊಳ್ಳಲು ಉತ್ತೇಜನ ನೀಡುತ್ತದೆಶಿವರಾಮ ಹೆಬ್ಬಾರ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ
ಸರ್ಕಾರದ ಆದೇಶದ ಪ್ರಕಾರ ಕೆಡಿಸಿಸಿ ಬ್ಯಾಂಕ್ ಅರ್ಹ ರೈತರಿಗೆ ಆಯಾ ಸಹಕಾರಿ ಸಂಘಗಳ ಮೂಲಕ ಸಾಲ ವಿತರಿಸಬೇಕು.
ಜಿ.ಆರ್.ಹೆಗಡೆ ಬೆಳ್ಳೆಕೇರಿ ಸಹಕಾರಿ
ಸಶಕ್ತಗೊಳ್ಳದ ಸಂಘಗಳು: ರೈತರ ಆರ್ಥಿಕ ಸಬಲೀಕರಣ ಹಿತದೃಷ್ಟಿಯಿಂದ ನಬಾರ್ಡ್ ಮತ್ತಿತರೆ ಹಣಕಾಸು ಸಂಸ್ಥೆಗಳು ಆರ್ಥಿಕ ನೆರವನ್ನು ನೀಡುತ್ತಾ ಬಂದಿವೆ. ಆದರೆ ಡಾ. ವೈದ್ಯನಾಥನ್ ವರದಿ ಜಾರಿಗೆ ಬಂದ ನಂತರ ಎಲ್ಲ ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮ ಸ್ವ ಶಕ್ತಿಯಿಂದ ಆರ್ಥಿಕತೆಯನ್ನು ಹೆಚ್ಚಿಸಿ ಕೊಳ್ಳಬೇಕು ಎಂಬ ನಿಯಮ ಜಾರಿಗೆ ತಂದಿತ್ತು. ಈ ನಿಯಮದ ಪ್ರಕಾರ ಕ್ರಮೇಣ ಆರ್ಥಿಕ ಸಶಕ್ತಿಕರಣಗೊಳ್ಳಬೇಕಿದ್ದ ಪ್ಯಾಕ್ಸ್‌ಗಳು ಪರಾವಲಂಬನೆ ಕೈಬಿಡದ ಪರಿಣಾಮ ಇಂದು ರೈತರಿಗೆ ಈ ದುಸ್ಥಿತಿ ಬಂದೊದಗಿದೆ ಎನ್ನಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.