
ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದ ರೈಲ್ವೆ ಗೇಟ್ ಎಲ್‍ಸಿ-37 ಕಾಮಗಾರಿಗೆ ಆಗಸ್ಟ್ ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ಸಂಸದ ಇ.ತುಕಾರಾಂ ಹೇಳಿದರು.
ಪಟ್ಟಣದಲ್ಲಿ ಬ್ಯಾಲಾಳು ಕೆರೆಯ ಬಳಿ ₹35.5ಕೋಟಿ ವೆಚ್ಚದ ಎಲ್‍ಸಿ-35 ಮೇಲ್ಸೇತುವೆ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಮರಿಯಮ್ಮನಹಳ್ಳಿಯಿಂದ ಹಗರಿಬೊಮ್ಮನಹಳ್ಳಿ ಮೂಲಕ ಶಿವಮೊಗ್ಗ ಹೆದ್ದಾರಿಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸಲಾಗುವುದು. ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತುಕತೆ ನಡೆಸಿ ₹1,350 ಕೋಟಿ ಮೊತ್ತದ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.
‘ತಾಲ್ಲೂಕಿನ ಮೂರು ಕಡೆಗಳಲ್ಲಿ ಡಿಜಿಟಿಲ್ ಲೈಬ್ರರಿ ಆರಂಭಿಸಲಾಗುವುದು, ವೈಜ್ಞಾನಿಕವಾಗಿ ಕೃಷಿ ಪದ್ದತಿ ಅಳವಡಿಸಿಕೊಳ್ಳುವುದಕ್ಕೆ ರೈತರ ಮಾಹಿತಿ ಮತ್ತು ತರಬೇತಿ ಕೇಂದ್ರ ಸ್ಥಾಪಿಸಲಾಗುವುದು’ ಎಂದರು.
ಪಟ್ಟಣದ ಸೋನಿಯಾಗಾಂಧಿ ನಗರದ ಸಮುದಾಯ ಭವನದಲ್ಲಿ ನಮ್ಮ ಕ್ಲಿನಿಕ್ ಮತ್ತು ಕಾರ್ಮಿಕ ಇಲಾಖೆಯ ಮೊಬೈಲ್ ಕ್ಲಿನಿಕ್ ಉದ್ಘಾಟಿಸಿದರು. ಎಪಿಎಂಸಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್‍ಗೆ ಚಾಲನೆ ನೀಡಿದರು.
ಶಾಸಕ ಕೆ.ನೇಮರಾಜನಾಯ್ಕ, ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಕುರಿ ಶಿವಮೂರ್ತಿ, ತಾಲ್ಲೂಕು ಅಧ್ಯಕ್ಷ ಸೊನ್ನದ ಗುರುಬಸವರಾಜ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಬಿ.ಗಂಗಾಧರ, ತಹಶೀಲ್ದಾರ್ ಆರ್.ಕವಿತಾ, ಪುರಸಭೆ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.