ADVERTISEMENT

ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 5:45 IST
Last Updated 22 ಅಕ್ಟೋಬರ್ 2024, 5:45 IST
   

ಕಾನಹೊಸಹಳ್ಳಿ (ವಿಜಯನಗರ ಜಿಲ್ಲೆ): ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಕೆಲವೆಡೆ ಜನ ಜೀವನ‌ ಅಸ್ತವ್ಯಸ್ತವಾಗಿದೆ. ಹಲವು ಮನೆಗಳಿಗೆ ಭಾಗಃ ಹಾನಿಯಾಗಿದೆ.

ಸೋಮವಾರ ರಾತ್ರಿ 10 ಗಂಟೆಯ ಸುಮಾರಿಗೆ ಆರಂಭವಾದ ಮಳೆ ಮಂಗಳವಾರ ಬೆಳಗಿನ‌ ಜಾವದವರೆಗೂ ಬಿಡದೆ ಸುರಿಯಿತು, ಕಳೆದ ಎರಡ್ಮೂರು ವಾರಗಳಿಂದ ಬೀಳುತ್ತಿರುವ ಮಳೆಯಿಂದ ಕೆರೆ-ಕಟ್ಟೆ, ಹಳ್ಳಗಳು ತುಂಬಿ ಹರಿಯುತ್ತಿದ್ದು, ನೀರಿನ ಹರಿವು ಮತ್ತಷ್ಟು ಹೆಚ್ಚಾಯಿತು.

ಸಮೀಪದ ಹುಲಿಕೆರೆ ಕೆರೆ ಕೋಡಿಯ ಹರಿವು ಹೆಚ್ಚಾಗಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ, ರಾಷ್ಟ್ರೀಯ ಹೆದ್ದಾರಿ 50 ರಿಂದ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಹಳ್ಳ ಹರಿಯುತ್ತಿರುವ ಪರಿಣಾಮ ಸಂಪರ್ಕ ಕಡಿತ ಗೊಂಡಿದೆ, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ಹಳ್ಳದಾಟಲು ಪರದಾಡಿದರು.

ADVERTISEMENT

ಬಯಲುತುಂಬರಗುದ್ದಿ, ರಂಗನಾಥನಹಳ್ಳಿ ಭಾಗಗಳಲ್ಲಿ ಬಾರಿ ಮಳೆಯಾದ್ದರಿಂದ ಕಾನಹೊಸಹಳ್ಳಿ ಕೆರೆಗೆ ನೀರು ಹರಿದು ಬರುತ್ತಿದ್ದು, ಬಹುತೇಕ ಕೆರೆ ಭರ್ತಿಯಾಗುವ ಹಂತಕ್ಕೆ ತಲುಪಿದೆ.

ಬೆಳೆ ಕೊಯ್ಲಿಗೆ ಅಡ್ಡಿ:

ಕಳೆದ ಮೂರು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೋಬಳಿ ವ್ಯಾಪ್ತಿಯಲ್ಲಿ ಬೆಳೆಗಳ ಕೊಯ್ಲಿಗೆ ಅಡ್ಡಿಯಾಗಿದೆ, ಶೇಂಗಾ, ಮೆಕ್ಕೆಜೋಳ, ರಾಗಿ ಬೆಳೆಗಳು ಮೊಳಕೆಯೊಡೆಯುತ್ತಿವೆ, ಶೇಂಗಾ ಬೆಳೆ ಕೊಳೆತು ಮಣ್ಣುಪಾಲಾಗುತ್ತಿದ್ದು, ರಾಗಿ ಗಿಡಗಳು ಚಾಪೆಹಾಸಾಗಿವೆ. ಮಳೆ ಇದೇ ರೀತಿಯಾಗಿ ಮುಂದುವರಿದರೆ ಸಂಪೂರ್ಣ ಬೆಳೆ ಕೈತಪ್ಪಿ ಹೋಗಲಿವೆ ಎಂದು ರೈತರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.