ADVERTISEMENT

ಹೊಸಪೇಟೆ | ಮುಂಗಾರು ಆರಂಭ: ಸಂಯುಕ್ತ ರಸಗೊಬ್ಬರ ಸಂಗ್ರಹಿಸಿದ ಕೃಷಿ ಇಲಾಖೆ

ಎಂ.ಜಿ.ಬಾಲಕೃಷ್ಣ
Published 29 ಮೇ 2025, 4:52 IST
Last Updated 29 ಮೇ 2025, 4:52 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ವಾಡಿಕೆಗಿಂತ ಒಂದು ವಾರ ಮುನ್ನವೇ ಮುಂಗಾರು ಮಳೆಯ ಆಗಮನ ಆಗಿರುವುದರಿಂದ ರೈತರ ಮೊಗದಲ್ಲಿ ನಗು ಮೂಡಿದ್ದು, ಕೃಷಿ ಚಟುವಟಿಕೆಗೆ ಸಿದ್ಧತೆ ಆರಂಭಿಸಿದ್ದಾರೆ. ಈ ಬಾರಿ ಡಿಎಪಿಗಿಂತ ಸಂಯುಕ್ತ ರಸಗೊಬ್ಬರವನ್ನೇ ಅಧಿಕ ಬಳಕೆ ಮಾಡಿ ಎಂದು ಕೃಷಿ ಇಲಾಖೆ ಹೇಳುತ್ತಿದೆ.

ಡಿಎಪಿ ಪೂರೈಕೆಯಲ್ಲಿ ಕೊರತೆ ಇರುವ ಕಾರಣಕ್ಕೆ ರಾಜ್ಯದ ಎಲ್ಲೆಡೆಯಂತೆ ಜಿಲ್ಲೆಯಲ್ಲೂ ಕೃಷಿ ಇಲಾಖೆ ಈ ಸೂಚನೆ ನೀಡುತ್ತಿದ್ದು, ಸಂಯುಕ್ತ ರಸಗೊಬ್ಬರಗಳ ಮಹತ್ವ, ಅದರಿಂದ ಕೃಷಿಗೆ ಆಗುವ ಲಾಭಗಳ ಬಗ್ಗೆ ರೈತರ ಮನವರಿಕೆ ಮಾಡುತ್ತಿದೆ.

ADVERTISEMENT

‘ರೈತರು ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿಎಪಿಯನ್ನು ರೂಢಿಗತವಾಗಿ ಬಳಸುತ್ತಿದ್ದಾರೆ. ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರವಿರುತ್ತದೆ. ಆದರೆ, ಬೆಳೆಗಳಿಗೆ ಬರ ಮತ್ತು ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೊಟ್ಯಾಷ್ ಲಭ್ಯವಿರುವುದಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ (ಗ್ರೇಡ್) ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ ಅಂಶಗಳಿರುವ ರಸಗೊಬ್ಬರಗಳು ಸಾಕಷ್ಟು ಪ್ರಮಾಣದಲ್ಲಿ ಇವೆ. ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಕೆ ಮಾಡಬೇಕು’ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್‌ ಹೇಳಿದರು.

ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ 20:20:0:13 ಹಾಗೂ ಪೊಟ್ಯಾಷ್ ಒದಗಿಸುವ ಇತರೆ ಸಂಯುಕ್ತ ರಸಗೊಬ್ಬರಗಳಾದ 15:15:15, 10.26.26, 12:32:16, 17:17:17. 19:19:19, ಇತ್ಯಾದಿ ರಸಗೊಬ್ಬರಗಳನ್ನು ಬಳಸಬೇಕು. ಜಿಲ್ಲೆಯಲ್ಲಿ ಇವುಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಇದೆ ಎಂದು ಅವರು ತಿಳಿಸಿದರು.

ಜೋಳ, ಹೆಸರು, ಎಳ್ಳು: ‘ಮೂಗಾರು ಮಳೆಯ ಆರಂಭವಾಗಿರುವ ಸದ್ಯದ ಸ್ಥಿತಿಯಲ್ಲಿ ಜೋಳ, ಹೆಸರು, ಎಳ್ಳು ಬಿತ್ತನೆ ಕಾರ್ಯ ಜಿಲ್ಲೆಯಲ್ಲಿ ಚುರುಕು ಪಡೆಯಲಿದೆ. ಜೂನ್ ಮೊದಲ ವಾರದ ಬಳಿಕ ಮುಸುಕಿನ ಜೋಳದ ಬಿತ್ತನೆ ಆರಂಭವಾಗಲಿದೆ. ಜುಲೈ ಅಂತ್ಯದ ವೇಳೆಗೆ ಶೇಂಗಾ ಬಿತ್ತನೆ ಚುರುಕು ಪಡೆಯಲಿದೆ. ಹೀಗಿದ್ದರೂ ಮಳೆಯ ಸ್ಥಿತಿಗತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ರೈತರು ಸೂಕ್ತ ನಿರ್ಧಾರಕ್ಕೆ ಬರುತ್ತಾರೆ’ ಎಂದು ಶರಣಪ್ಪ ಮುದುಗಲ್ ಹೇಳಿದರು.

2023ರಲ್ಲಿ ಜಿಲ್ಲೆಗೆ ಮುಂಗಾರು ಪ್ರವೇಶ ಬಹುತೇಕ ಒಂದು ತಿಂಗಳಷ್ಟು ವಿಳಂಬವಾಗಿತ್ತು. ಕಳೆದ ವರ್ಷ ಜೂನ್‌ 1ರಿಂದಲೇ ಮುಂಗಾರು ಮಳೆ ಶುರುವಾಗಿತ್ತು. ಬಳಿಕ ಉತ್ತಮವಾಗಿ ಮಳೆ ಸುರಿದ ಕಾರಣ ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್‌ ಕೊಚ್ಚಿಹೋದರೂ ಲಕ್ಷಾಂತರ ರೈತರ ಎರಡೂ ಬೆಳೆಗೆ ನೀರು ಲಭ್ಯವಾಗಿತ್ತು.

ಈ ಬಾರಿ ವಾಡಿಕೆಗಿಂತ ಒಂದು ವಾರ ಮೊದಲೇ ಮಳೆ ಸುರಿದಿದ್ದು, ರೈತರು ಪರಿಸ್ಥಿತಿಯನ್ನು ಕುತೂಹಲದಿಂದ ಗಮನಿಸುತ್ತಿದ್ದಾರೆ. 

ಪಿ ಕೊರತೆ ನಮ್ಮ ಜಿಲ್ಲೆಗಷ್ಟೇ ಸೀಮಿತವಲ್ಲ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳು ಇರುವಾಗ ರೈತರು ಚಿಂತೆ ಮಾಡುವ ಅಗತ್ಯವೇ ಇಲ್ಲ
ಶರಣಪ್ಪ ಮುದುಗಲ್‌ ಕೃಷಿ ಜಂಟಿ ನಿರ್ದೇಶಕ
ಡಿಎಪಿ ದರ ಭಾರಿ ಹೆಚ್ಚಳವಾಗಿದೆ. ಕಲಬೆರಕೆ ದಂಧೆಯೂ ನಡೆಯುತ್ತಿದೆ ಇಲಾಖೆ ಇದರ ಬಗ್ಗೆ ಎಚ್ಚರ ವಹಿಸಲಿ
ಗಂಟೆ ಸೋಮಶೇಖರ್‌ ರೈತ ಸಂಘದ ಮುಖಂಡ

ರಾಷ್ಟ್ರೀಯ ಖಾದ್ಯತೈಲ ಅಭಿಯಾನ

ರಾಷ್ಟ್ರೀಯ ಖಾದ್ಯತೈಲ ಅಭಿಯಾನ ಯೋಜನೆಯಡಿ ಐದು ವರ್ಷದೊಳಗಿನ ತಳಿಗಳ ಬಿತ್ತನೆ ಬೀಜಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ಕೃಷಿ ಇಲಾಖೆ ಮುಂದಾಗಿದೆ. ಸೂರ್ಯಕಾಂತಿಯ ಕೆಪಿಎಚ್‌ಎಚ್‌–85 ಮತ್ತು ಆರ್‌ಎಸ್‌ಎಫ್‌ಎಚ್–700 ತಳಿಯ ಬಿತ್ತನೆ ಬೀಜವನ್ನು 1700 ಹೆಕ್ಟೇರ್‌ನಲ್ಲಿ ಬಳಸುವ ಗುರಿ ಇದ್ದು ರೈತರಿಗೆ ಸಾಕಷ್ಟು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ದೊರಕಲಿದೆ. ಈಗಾಗಲೇ ಎಲ್ಲಾ ಕೃಷಿ ಕೇಂದ್ರಗಳಿಗೆ ಇವುಗಳ ವಿತರಣೆ ನಡೆದಿದೆ.  ಇದೇ  ಯೋಜನೆಯಡಿ 5 ವರ್ಷಕ್ಕಿಂತ ಕೆಳಗಿನ ಶೇಂಗಾ ತಳಿಯ ಬೀಜವನ್ನು ಸಹ ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಆಯ್ದ ರೈತರಿಗೆ ಒದಗಿಸಲು ಕೃಷಿ ಇಲಾಖೆ ಕ್ರಮ ಕೈಗೊಂಡಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.