
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ಶಿಥಿಲಗೊಂಡಿರುವ ಕ್ರಸ್ಟ್‌ಗೇಟ್‌ಗಳನ್ನು ಬದಲಿಸುವ ಕೆಲಸ ಈ ಬಾರಿ ಆಗಿಲ್ಲದ ಕಾರಣ ಈ ಮಳೆಗಾಲ ಜಲಾಶಯದಿಂದ ಒಂದು ಬೆಳೆ ಮತ್ತು ಕುಡಿಯುವ ಉದ್ದೇಶಕ್ಕೆ 120 ಟಿಎಂಸಿ ಅಡಿ ನೀರಷ್ಟೇ ಸಿಗಲಿದೆ.
ತುಂಗಭದ್ರಾ ಜಲಾಶಯಕ್ಕೆ ಸಂಬಂಧಪಟ್ಟಂತೆ ಮೂರೂ ರಾಜ್ಯಗಳ ಅಧೀಕ್ಷಕ ಎಂಜಿನಿಯರ್‌ಗಳು (ಎಸ್‌ಇ) ಬುಧವಾರ ನಡೆಸಿದ ಆಲ್‌ನೈನ್ ಸಭೆಯಲ್ಲಿ ನೀರು ಶೇಖರಣೆ, ವಿತರಣೆ ಕುರಿತಂತೆ ವಿವರವಾಗಿ ಚರ್ಚಿಸಿದ್ದು, ಜಲಾಶಯದಲ್ಲಿ 80 ಟಿಎಂಸಿ ಅಡಿಯಷ್ಟು ನೀರನ್ನು ಮಾತ್ರ ಸಂಗ್ರಹಿಸಬೇಕು ಎಂದು ತುಂಗಭದ್ರಾ ಮಂಡಳಿ ಈಗಾಗಲೇ ನಿರ್ಧರಿಸಿದ್ದಕ್ಕೆ ತಕ್ಕಂತೆ ಯೋಜನೆ ರೂಪಿಸಲು ನಿರ್ಧರಿಸಿದರು.
‘ಈ ಬಾರಿ ಮುಂಗಾರು ಮಳೆ ಅಧಿಕ ಇರುವ ಸೂಚನೆ ಇದೆ, ಈಗಾಗಲೇ 24 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವೂ ಆಗಿದೆ. ಆದರೆ ಗರಿಷ್ಠ ಸಂಗ್ರಹ ಸಾಮರ್ಥ್ಯವಾದ 105.78 ಟಿಎಂಸಿ ಅಡಿಯಷ್ಟು ನೀರನ್ನು ಸಂಗ್ರಹಿಸಲು ಈ ಬಾರಿ ಸಾಧ್ಯವಿಲ್ಲ. ಹೀಗಾಗಿ 80 ಟಿಎಂಸಿ ಅಡಿಯಷ್ಟು ನೀರನ್ನು (ಅಣೆಕಟ್ಟೆಯ ಗರಿಷ್ಠ ಎತ್ತರ 1,633 ಅಡಿಯ ಪೈಕಿ 1,626 ಅಡಿಯಷ್ಟು) ಮಾತ್ರ ಸಂಗ್ರಹಿಸಿ ಇಟ್ಟುಕೊಳ್ಳಲಾಗುವುದು. ಹೆಚ್ಚುವರಿ ನೀರನ್ನು ನದಿಗೆ ಹರಿಸುವುದು ಅನಿವಾರ್ಯವಾಗಲಿದೆ’ ಎಂಬ ಎಂಜಿನಿಯರ್‌ಗಳು ತಿಳಿಸಿದರು.
‘ಮುಂಗಾರು ಬೆಳೆಗಳಿಗೆ ಪ್ರತಿವರ್ಷ ಜಲಾಶಯದಿಂದ ಕಾಲುವೆಗಳ ಮೂಲಕ 80 ಟಿಎಂಸಿ ಅಡಿಯಷ್ಟು ನೀರನ್ನು ಪೂರೈಸಲಾಗುತ್ತದೆ. ಈ ವರ್ಷವೂ ಅದಕ್ಕೆ ಅಡ್ಡಿ ಇಲ್ಲ. 40 ಟಿಎಂಸಿ ಅಡಿ ನೀರನ್ನು ಕುಡಿಯಲು, ಉದ್ಯಮಗಳಿಗೆ ಹಾಗೂ ಇತರ ಬಳಕೆಗೆ ಮೀಸಲಿಡಲಾಗುವುದು. ಹಿಂಗಾರು ಬೆಳೆಗೆ ಈ ಬಾರಿ ನೀರು ಲಭಿಸದು. ಹಿಂಗಾರು ಅವಧಿಯಲ್ಲಿ ಮಳೆ ಬಂದರೆ ಪರಿಸ್ಥಿತಿ ನೋಡಿಕೊಂಡು ನೀರು ಲಭ್ಯವಾಗಬಹುದಷ್ಟೇ’ ಎಂದು ಸಭೆಯ ಬಳಿಕ ತುಂಗಭದ್ರಾ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಸಭೆಯಲ್ಲಿ ಕರ್ನೂಲ್‌ನ ಅಧೀಕ್ಷಕ ಎಂಜಿನಿಯರ್ (ಎಸ್‌ಇ) ಬಾಲಚಂದ್ರ ರೆಡ್ಡಿ, ಅನಂತಪುರ ಎಸ್‌ಇ ಪುರಂಧನ ರೆಡ್ಡಿ, ಮುನಿರಾಬಾದ್ ಮುಖ್ಯ ಎಂಜಿನಿಯರ್ ಬಸವರಾಜ್, ಗದ್ವಾಲ್ ಎಸ್‌ಇ ರಹಿಮುದ್ದೀನ್, ತುಂಗಭದ್ರಾ ಮಂಡಳಿಯ ಎಸ್‌ಇ ನಾರಾಯಣ ನಾಯ್ಕ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.