ADVERTISEMENT

ಕಾಂಗ್ರೆಸ್‌ ಆಡಳಿತ; ಶ್ವೇತಪತ್ರ ಹೊರಡಿಸಿ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ಗೋವಿಂದ ಕಾರಜೋಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 16:16 IST
Last Updated 12 ಜೂನ್ 2025, 16:16 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ವಿಜಯಪುರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆಯ ಮೌಲ್ಯಮಾಪನ ಮಾಡುವ ನೈತಿಕತೆ ಇಲ್ಲ. ಶೂನ್ಯ ಅಂಕ ಕೊಡುವ ಮೊದಲು ತಮ್ಮ ಎರಡು ವರ್ಷಗಳ ಆಡಳಿತಾವಧಿಗೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸಲಿ’ ಎಂದು ಸಂಸದ ಗೋವಿಂದ ಕಾರಜೋಳ ಸವಾಲೆಸೆದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರಕ್ಕೆ ಅಂಕ ಕೊಡುವ ಹಂತದಲ್ಲಿ ಸಿದ್ದರಾಮಯ್ಯ ಇಲ್ಲ. ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸಾವಿರಾರು ರೈತರು, ಬಾಣಂತಿಯರ ಸಾವಾಗಿದೆ. ಮಹಿಳೆಯರ‌‌ ಮೇಲೆ ಅತ್ಯಾಚಾರ ನಡೆದಿದೆ. ಪ್ರಧಾನಿ ಮೋದಿ ಅವರನ್ನು ಟೀಕೆ, ಟಿಪ್ಪಣಿ ಮಾಡಲು ಅವರಿಗೆ ನೈತಿಕತೆ ಇಲ್ಲ’ ಎಂದರು.

‘ಸಿದ್ದರಾಮಯ್ಯ ಅವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಎರಡು ವರ್ಷಗಳಲ್ಲಿ ಎಷ್ಟು ಕೋಟಿ ಅನುದಾನ ನೀಡಿದ್ದಾರೆ’ ಎಂದು ಪ್ರಶ್ನಿಸಿದರು.

ADVERTISEMENT

ಶ್ರೇಷ್ಠ ಪ್ರಧಾನಿ: ‘2001ರಿಂದ 14ರವರೆಗೆ ಗುಜರಾತ್‌ ಮುಖ್ಯಮಂತ್ರಿಯಾಗಿ, 2014ರಿಂದ ಪ್ರಧಾನಿಯಾಗಿ ಕಳಂಕ ರಹಿತ ವ್ಯಕ್ತಿತ್ವದೊಂದಿಗೆ ಪ್ರಧಾನಿ ಮೋದಿ ಅವರು ಆಡಳಿತ ನಡೆಸಿದ್ದಾರೆ. ರಾಜಕೀಯ ಮನೆತನದ ಹಿನ್ನೆಲೆ ಇಲ್ಲದ ಅವರು ದೇಶದ ಸಂವಿಧಾನದಿಂದ ಪ್ರಧಾನಿ ಆಗಿದ್ದಾರೆ. ಸಂವಿಧಾನವನ್ನೇ ಧರ್ಮಗ್ರಂಥ ಎಂದು‌ ನಂಬಿರುವ ಅವರಷ್ಟು ಶ್ರೇಷ್ಠ ಪ್ರಧಾನಿ ಮತ್ತಿಬ್ಬರಿಲ್ಲ’ ಎಂದು ಬಣ್ಣಿಸಿದರು.

‘ದೇಶದ ಹಲವು ದಶಕಗಳಿಂದ ಬಗೆಹರಿಯದೇ ಇದ್ದ ರಾಮಮಂದಿರ ವಿವಾದ ಇತ್ಯರ್ಥಗೊಳಿಸಿ, ಮಂದಿರ‌ ನಿರ್ಮಾಣ ಮಾಡಿದ್ದಾರೆ. 370ನೇ ವಿಧಿಯಡಿ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಮಾನ್ಯತೆರದ್ದುಗೊಳಿಸಿ, ಸಮಸ್ಯೆ ನಿವಾರಣೆ ಮಾಡಿದ್ದಾರೆ’ ಎಂದರು.

‘ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮನ್ನಣೆ ನೀಡಿದ್ದಾರೆ. ಅವರ ಸಂಪುಟದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗದವರು ಶೇ 60ರಷ್ಟು ಇದ್ದಾರೆ. ಶೇ 33ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸಿದ್ದಾರೆ’ ಎಂದು ಹೇಳಿದರು.

‘ತಮ್ಮ ಆಡಳಿತದಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟಿದ್ದಾರೆ. ಪ್ರಧಾನಮಂತ್ರಿ ಸ್ವ ನಿಧಿ, ಮುದ್ರಾ ಯೋಜನೆ, ವಿಕಸಿತ ಭಾರತ, ಜನ್ ಧನ್ ಖಾತೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೆ ಶೇ 10ರಷ್ಟು ಮೀಸಲಾತಿ ಜಾರಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ, ಜಲ ಜೀವನ್ ಮಿಷನ್ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ’ ಎಂದರು.

ಬಿಜೆಪಿ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ವಿಜುಗೌಡ ಪಾಟೀಲ, ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಉಮೇಶ ಕಾರಜೋಳ, ವಿಜಯ ಜೋಶಿ ಇದ್ದರು. 

ಜಾತಿ ಧರ್ಮದ ನಡುವೆ ಬಿರುಕು‌ ಮೂಡಿಸಲು ಕೇಂದ್ರ ಸರ್ಕಾರ ಜನಗಣತಿ ಜೊತೆ ಜಾತಿಗಣತಿ ಮಾಡುತ್ತಿಲ್ಲ. ಮಹಿಳಾ ಮೀಸಲಾತಿಗಾಗಿ ಮಾಡುತ್ತಿದೆ
– ಗೋವಿಂದ ಕಾರಜೋಳ, ಸಂಸದ

‘11 ಕೋಟಿ ಶೌಚಾಲಯ ನಿರ್ಮಾಣ’

‘ಪ್ರಧಾನಿ ಮೋದಿ ಆಡಳಿತದ್ಲಲಿ 11 ಕೋಟಿ ಶೌಚಾಲಯ ನಿರ್ಮಿಸಲಾಗಿದೆ. 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ₹2 ಲಕ್ಷದಿಂದ ₹5 ಲಕ್ಷದವರೆಗೆ ಸಾಲದ ಪ್ರಮಾಣ ಹೆಚ್ಚಿಸಲಾಗಿದೆ. ಮುದ್ರಾ ಯೋಜನೆ ಮನೆ ಮನೆಗೆ ಎಲ್‌ಪಿಜಿ ಸಂಪರ್ಕ ಐಐಎಂಗಳ‌ ಸಂಖ್ಯೆ 8ರಿಂದ 21ಕ್ಕೆ ಏರಿಕೆ 11‌ ಹೊಸ ‌ಏಮ್ಸ್ ಸ್ಥಾಪನೆ ಕೇಂದ್ರದ ಸಾಧನೆಗಳಾಗಿವೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

‘ಉಡಾನ್ ಯೋಜನೆ ಮೂಲಕ ಸಾಮಾನ್ಯ ಪ್ರಜೆಯೂ ವಿಮಾನ ಪ್ರಯಾಣ ಮಾಡುವಂತೆ ಪ್ರಧಾನಿ ಮಾಡಿದ್ದಾರೆ. ಸಣ್ಣಪುಟ್ಟ ನಗರಗಳಲ್ಲೂ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರಿಗೆ ಅನುಕೂಲವಾಗಿದೆ. ಜನೌಷಧ ಕೇಂದ್ರ ಸ್ಥಾಪನೆ ಮಾಡಿದ್ದಾರೆ. ಆಪರೇಷನ್ ಸಿಂಧೂರ ಯಶಸ್ವಿಯಾಗದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.