
ವಿಜಯಪುರ: ಜಿಲ್ಲೆಯಲ್ಲಿ ಖಾಸಗಿ– ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಕೈ ಬಿಟ್ಟು, ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಎಐಡಿಎಸ್‌ಒ ಜಿಲ್ಲಾ ಸಮಾವೇಶದಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು.
ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದ ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ಅಧೀಕ್ಷಕ ಜಿಲಾನಿ ಅವಟಿ, ‘ಖಾಸಗಿ ಆಸ್ಪತ್ರೆಯಲ್ಲಿ ಕೆಲವು ಚಿಕಿತ್ಸೆಗೆ ₹30ಸಾವಿರದಿಂದ ₹40 ಸಾವಿರ ಖರ್ಚಾಗುತ್ತದೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಗುತ್ತದೆ. ಬಡವರಿಗೆ ಆರೋಗ್ಯದ ಸೌಲಭ್ಯ ಸಿಗಬೇಕಾದರೆ ಮತ್ತು ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಸಿಗಬೇಕಾದರೆ ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು’ ಎಂದರು.
ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ‘ವಿಜಯಪುರ ಜಿಲ್ಲೆಯಲ್ಲಿ ಒಂದೂ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ. ಖಾಸಗಿ ಕಾಲೇಜುಗಳಲ್ಲಿ ಡೊನೇಶನ್ ಕೊಟ್ಟು ಕಲಿಯುವದಂತೂ ಬಡ ಜನಗಳಿಗೆ, ರೈತ ಮತ್ತು ಕೂಲಿಕಾರ್ಮಿಕರ ಮಕ್ಕಳಿಗೆ ಖಂಡಿತ ಸಾಧ್ಯವಿಲ್ಲ. ಆದ್ದರಿಂದ ಸರ್ಕಾರವು ವಿಶೇಷ ಮುತುವರ್ಜಿವಹಿಸಿ ಜಿಲ್ಲೆಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು’ ಎಂದರು.
ಎಐಡಿಎಸ್ಒ ರಾಜ್ಯ ಸೆಕ್ರೆಟರಿಯೆಟ್ ಸದಸ್ಯ ಕಂಬಳಿ ಮಂಜುನಾಥ ಮಾತನಾಡಿ, ‘ಕಳೆದ 20 ವರ್ಷಗಳಿಂದ ವಿದ್ಯಾರ್ಥಿ ಸಂಘಟನೆಯಿಂದ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕೆಂದು ಹೋರಾಟ ನಡೆಸಿದೆ’ ಎಂದರು.
‘ವೈದ್ಯಕೀಯ ಕಾಲೇಜುಗಳು ಖಾಸಗೀಕರಣವಾದರೆ ಮುಂಬರುವ ವಿದ್ಯಾರ್ಥಿಗಳು ಬಡ ಜನರಿಗೆ ತಮ್ಮ ಸೇವೆ ಸಲ್ಲಿಸುವ ಬದಲು, ಎಷ್ಟು ಲಕ್ಷ ದುಡ್ಡು ಗಳಿಸಲಿ ಎಂದು ಯೋಚನೆ ಮಾಡುವ ಮನಸ್ಥಿತಿ ಬೆಳೆಯುತ್ತದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು’ ಎಂದರು.
ಹಿರಿಯ ಪತ್ರಕರ್ತ ಅನಿಲ ಹೊಸಮನಿ ಮಾತನಾಡಿ, ‘ಈಗಾಗಲೇ ಜಿಲ್ಲೆಯಲ್ಲಿ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳಿದ್ದು, ಇದಕ್ಕೆ ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಲು ಸಾಧ್ಯವಾಗದೇ, ಸಾವಿರಾರು ವಿದ್ಯಾರ್ಥಿಗಳು ತಮ್ಮ ಕನಸನ್ನು ತೊರೆದಿದ್ದಾರೆ. ಶಿಕ್ಷಣ ಎಲ್ಲರ ಸ್ವತ್ತಾಗಬೇಕು. ಅದಕ್ಕಾಗಿ ಸರ್ಕಾರವೇ ಸಂಪೂರ್ಣ ಆರ್ಥಿಕ ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದು ಹೇಳಿದರು.
ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಮುಖಂಡರಾದ ಭರತಕುಮಾರ ಎಚ್.ಟಿ., ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ, ನಿವೇದಿತಾ ಚಲವಾದಿ, ಪವಿತ್ರಾ, ರಶ್ಮಿ ಮಾದನಶೆಟ್ಟಿ, ಭುವನೇಶ್ವರಿ ಇದ್ದರು.
Quote - ಕನಿಷ್ಠ ಜಿಲ್ಲೆಗೊಂದರಂತೆ ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ಸರ್ಕಾರ ನೀಡಬೇಕು. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಾದರೂ ಹೆಚ್ಚುತ್ತದೆ ಕಂಬಳಿ ಮಂಜುನಾಥ ರಾಜ್ಯ ಸೆಕ್ರೆಟರಿಯೆಟ್ ಸದಸ್ಯ ಎಐಡಿಎಸ್ಒ
Cut-off box - ಬೆಳೆ ಸಮೀಕ್ಷಕರ ಬೆಂಬಲ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿಗೆ ಕರ್ನಾಟಕ ಬೆಳೆ ಸಮೀಕ್ಷಕರ ಸಂಘದ ಜಿಲ್ಲಾ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನರಸಪ್ಪ ನಾವಿ ಮಾತನಾಡಿ ‘ವೈದ್ಯಕೀಯ ಕಾಲೇಜು ಸ್ಥಾಪನೆ ಹೋರಾಟವು ನಮ್ಮ ಎಲ್ಲರ ಹೋರಾಟ. ಅಗತ್ಯವಿದ್ದರೆ ರಾಜ್ಯವ್ಯಾಪಿ ಹೋರಾಟ ಕೂಡ ಮಾಡುತ್ತೇವೆ’ ಎಂದರು. ಜಿಲ್ಲಾ ಕಾರ್ಯದರ್ಶಿ ಭೀಮಸೈ ತಲ್ವಾರ್ ಬೀರಪ್ಪ ಸಾತಿಹಾಳ ಕುಮಾರ ಮಠ ಸಿದ್ದಲಿಂಗ ಕದರಿ ರವಿ ಚವ್ಹಾಣ ಸುಧೀರ್ ಮಠ ಗುರು ಬಡಿಗೇರ ಸುನೀಲ್ ಅವಟಿ ಅಮೀರ್ ಖಾನ್ ಬೈರೊಡಗಿ ರವಿಕಿರಣ ಹೊಸಮನಿ ಮೆಹಬೂಬ್ ರಸೂಲ್ ಅಲಮೇಲ್ ಗೋಪಾಲ್ ಹೊಸೂರು ಶ್ರೀಶೈಲ ಮಂಗಳೂರು ಶಿವಾನಂದ್ ಬಿರಾದಾರ ಅಮರ್ ಬನಸೋಡೆ ಅಮರಸಿದ್ದ ಕೇಸರಗೋಪ್ಪ ಚಂದನ ಕೋಳಿ ಅರುಣ್ ಕುಮಾರ್ ತಳವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.