ADVERTISEMENT

ಶೂ ಎಸೆತ ಪ್ರಕರಣ: ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ 

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 6:03 IST
Last Updated 1 ನವೆಂಬರ್ 2025, 6:03 IST
ಮುದ್ದೇಬಿಹಾಳ ಬಂದ್ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ಬಸ್ ನಿಲ್ದಾಣ ಬೆಳಗ್ಗೆಯೇ ಬಿಕೋ ಎನ್ನುತ್ತಿತ್ತು
ಮುದ್ದೇಬಿಹಾಳ ಬಂದ್ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ಬಸ್ ನಿಲ್ದಾಣ ಬೆಳಗ್ಗೆಯೇ ಬಿಕೋ ಎನ್ನುತ್ತಿತ್ತು   

ಮುದ್ದೇಬಿಹಾಳ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿಗೆ ಶೂ ಎಸೆತ ಪ್ರಕರಣ, ತಾಲ್ಲೂಕಿನ ಗ್ರಾಮವೊಂದರಲ್ಲಿ ದಲಿತ ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ಹಾಗೂ ರಾಜ್ಯದ ವಿವಿಧೆಡೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದ ಘಟನೆಗಳನ್ನು ಖಂಡಿಸಿ ಶುಕ್ರವಾರ ವಿವಿಧ ದಲಿತಪರ ಸಂಘಟನೆಗಳು ಕರೆ ನೀಡಿದ್ದ ಮುದ್ದೇಬಿಹಾಳ ಬಂದ್‌ ಯಶಸ್ವಿಯಾಯಿತು.

ಬೆಳಗ್ಗೆಯಿಂದಲೇ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಬಸ್ ನಿಲ್ದಾಣಕ್ಕೆ ಜನರು ಬರಲಿಲ್ಲ. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವವರ ಸಂಖ್ಯೆಯೂ ಇಳಿಮುಖವಾಗಿ ಜನಸಂಚಾರ ವಿರಳವಾಗಿತ್ತು. 

ಬಂದ್ ಯಶಸ್ವಿಗೆ ಸಹಕರಿಸುವಂತೆ ನಾಗರಿಕರಲ್ಲಿ, ವ್ಯಾಪಾರಸ್ಥರಲ್ಲಿ ದಲಿತಪರ, ಪ್ರ ಗತಿಪರ ಸಂಘಟನೆಯ ಒಕ್ಕೂಟದವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಯಾರೊಬ್ಬರೂ ಅಂಗಡಿಗಳನ್ನು ತೆರೆಯಲಿಲ್ಲ. ಅಗತ್ಯ ವಸ್ತುಗಳ ಸೇವೆ ಹಾಗೂ ಆಸ್ಪತ್ರೆಗಳ ಸೇವೆ ಅಬಾಧಿತವಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ವಹಿಸಿದ್ದರು.  ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ, ಮಾನವ ಸರಪಳಿ ನಿರ್ಮಾಣದ ಹಿನ್ನೆಲೆಯಲ್ಲಿ ಬಸವೇಶ್ವರ ಸಂಪರ್ಕಿಸುವ ನಾಲ್ಕು ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಪೊಲೀಸರು ಬಂದ್ ಮಾಡಿಸಿದ್ದರು. 

ADVERTISEMENT

ಶೂ ಎಸೆದ ವಕೀಲರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಆಗ್ರಹಿಸಿದರು.  ಪ್ರತಿಭಟನಕಾರರನ್ನುದ್ದೇಶಿಸಿ ಅವರು ಮಾತನಾಡಿದರು.

ಮಾನವ ಬಂಧುತ್ವ ವೇದಿಕೆ ಸಂಚಾಲಕ ಎಸ್.ಎಂ.ನೆರಬೆಂಚಿ, ದಲಿತಪರ ಸಂಘಟನೆ ಹೋರಾಟಗಾರ ಚೆನ್ನಪ್ಪ ವಿಜಯಕರ, ಎನ್.ಎಸ್.ಯು.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ರೇವಣೆಪ್ಪ ಚಲವಾದಿ ಮತ್ತಿತರರು ಮಾತನಾಡಿ, ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಹೋರಾಟದ ನೇತೃತ್ವ ವಹಿಸಿದ್ದ ಮುಖಂಡ ಹರೀಶ ನಾಟೀಕಾರ, ಯುವ ಕಾಂಗ್ರೆಸ್ ಮುಖಂಡ ಮಹ್ಮದರಫೀಕ ಶಿರೋಳ, ವಾಲ್ಮೀಕಿ ಸಮಾಜದ ಅಧ್ಯಕ್ಷ ಬಲಭೀಮ ನಾಯ್ಕಮಕ್ಕಳ ಮತ್ತಿತರರು ಮಾತನಾಡಿದರು. ಮುಖಂಡರಾದ ಪರಶುರಾಮ ಮುರಾಳ,ಪ್ರಕಾಶ ಚಲವಾದಿ ಸರೂರ,ಆನಂದ ದೇವೂರ, ಆನಂದ ಮುದೂರ, ಮಲ್ಲು ತಳವಾರ, ಸಿದ್ದಪ್ಪ ಚಲವಾದಿ,ಮಂಜುನಾಥ ಕಟ್ಟಿಮನಿ,ಪ್ರಶಾಂತ ಕಾಳೆ,ಯಮನಪ್ಪ ಚಲವಾದಿ ಮೊದಲಾದವರು ಪಾಲ್ಗೊಂಡಿದ್ದರು.

ಪಟ್ಟಣದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಹೋರಾಟಗಾರರು ರ‍್ಯಾಲಿ ನಡೆಸಿದರು. ಅಂಬೇಡ್ಕರ್ ವೃತ್ತದಲ್ಲಿ ತಹಶೀಲ್ದಾರ್ ಕೀರ್ತಿ ಚಾಲಕ್ ಪ್ರತಿಭಟನಕಾರರಿಂದ ಮನವಿ ಪತ್ರ ಸ್ವೀಕರಿಸಿದರು.

 ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪೊಲೀಸ್ ಇಲಾಖೆಯಿಂದ ಬಂದ್ ಹಿನ್ನೆಲೆಯಲ್ಲಿ ಸಿಪಿಐ ಮೊಹ್ಮದಫಸಿವುದ್ದೀನಪಿ.ಎಸ್.ಐ ಸಂಜಯ ತಿಪರೆಡ್ಡಿ ಪೆಟ್ರೋಲಿಂಗ್ ನಡೆಸಿದರು.
ಫೋಟೋ:31-ಎಂ.ಬಿ.ಎಲ್1ಬಿ ಮುದ್ದೇಬಿಹಾಳ ಪಟ್ಟಣದಲ್ಲಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳುನಾಗರಿಕರು ಶುಕ್ರವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು.
ಫೋಟೋ:31-ಎಂ.ಬಿ.ಎಲ್1ಸಿ ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ದಲಿತಪರ ಸಂಘಟನೆ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.