ಮುದ್ದೇಬಿಹಾಳ: ತಾಲ್ಲೂಕಿನ ಗ್ರಾಮವೊಂದರ ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
‘ಮಗಳನ್ನು ಪ್ರೀತಿಸುವುದಾಗಿ ಮೂರು ತಿಂಗಳಿಂದ ಮಾಳಿಂಗರಾಯ ದಂಡೋಜಿ ಎಂಬಾತ ಪೀಡಿಸುತ್ತಿದ್ದನು. ವಿಷಯ ತಿಳಿದು ಮಗಳಿಗೆ ಬೇರೊಬ್ಬರ ಜೊತೆ ಮದುವೆ ಮಾಡಲು ಮಾತುಕತೆ ನಡೆಸಿದ್ದೆವು. ಈ ವಿಷಯ ತಿಳಿದ ಆರೋಪಿಯು ನನ್ನನ್ನೇ ಮದುವೆಯಾಗಬೇಕು ಎಂದು ಮಗಳಿಗೆ ದೈಹಿಕ, ಮಾನಸಿಕ ಹಿಂಸೆ ನೀಡಿದ್ದಾನೆ. ಇದರಿಂದ ಬೇಸತ್ತ ಮಗಳು ಮಂಗಳವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಬಾಲಕಿಯ ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ಎದುರಿಗೆ ಸಂತ್ರಸ್ಥೆಯ ತಾಯಿ, ತಂದೆ, ಕುಟುಂಬದವರು ಮಗಳು ನೇಣು ಬಿಗಿದ ಸ್ಥಿತಿಯಲ್ಲಿದ್ದಾಗ ಆಕೆಯ ಕತ್ತಿನಲ್ಲಿ ರೋಲ್ಡ್‌ಗೋಲ್ಡ್ ತಾಳಿ ಸರ ಹಾಕಿದ್ದಾರೆ ಎಂದು ತಾಳಿ ಸರವನ್ನು ಪ್ರದರ್ಶಿಸಿದರು. ಇದನ್ನು ಯಾರು ಹಾಕಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.
‘ಪೋಷಕರ ದೂರಿನನ್ವಯ ಆರೋಪಿ ಮಾಳಿಂಗರಾಯ ದಂಡೋಜಿ ಮತ್ತು ಪ್ರಕರಣಕ್ಕೆ ಕುಮ್ಮಕ್ಕು ನೀಡಿದ ಆತನ ಸ್ನೇಹಿತ ಶಿವನಗೌಡ ಬಿರಾದಾರ ಸೇರಿದಂತೆ ಮೂವರ ವಿರುದ್ಧ ಪೋಕ್ಸೋ ಮತ್ತು ದೌರ್ಜನ ಪ್ರಕರಣ ದಾಖಲಿಸಿಕೊಂಡು, ಮೂವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ವಿಷಯ ತಿಳಿದು ಶಾಸಕ ಸಿ.ಎಸ್.ನಾಡಗೌಡ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಅನುಸರಿಸುವಂತೆ ಪೊಲೀಸರಿಗೆ ತಿಳಿಸುವುದಾಗಿ ಹೇಳಿದರು. ಆಸ್ಪತ್ರೆಗೆ ಕುಂಟೋಜಿ ಭಾವೈಕ್ಯತಾ ಹಿರೇಮಠದ ಚೆನ್ನವೀರ ಶಿವಾಚಾರ್ಯರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಜಿಲ್ಲಾಡಳಿತ ಸಂತ್ರಸ್ತ ಕುಟುಂಬಕ್ಕೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯಡಿ ₹ 8.25 ಲಕ್ಷ ಮಂಜೂರು ಮಾಡಿದ್ದು, ಮೊದಲ ಹಂತದಲ್ಲಿ ₹4,12,500 ಮೊತ್ತದ ಚೆಕ್ ಅನ್ನು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೊದ್ದಾರ ವಿತರಿಸಿದರು. ಇನ್ನುಳಿದ ಶೇ 50ರಷ್ಟು ಹಣವನ್ನು ಕುಟುಂಬಕ್ಕೆ ನೀಡುವುದಾಗಿ ತಿಳಿಸಿದರು.
‘ಇಡೀ ಗ್ರಾಮದಲ್ಲಿ ನಮ್ಮದೊಂದೇ ದಲಿತ ಕುಟುಂಬವಿದ್ದು ಈ ಘಟನೆಯಿಂದ ಭಯಭೀತರಾಗಿದ್ದೇವೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಕುಟುಂಬದವರು ಆಗ್ರಹಿಸಿದರು.
ಈ ಸಂಬಂಧ ತಹಶೀಲ್ದಾರ್ ಕೀರ್ತಿ ಚಾಲಕ ಅವರು ಪುರಸಭೆ ಅಧಿಕಾರಿಗಳೊಂದಿಗೆ ಮಾತನಾಡಿ, ಸಂತ್ರಸ್ಥೆಯ ಕುಟುಂಬದ ವಾಸಕ್ಕೆ ಅಗತ್ಯ ವ್ಯವಸ್ಥೆ ಅವರು ಬಯಸಿದರೆ ಮುದ್ದೇಬಿಹಾಳ ಪಟ್ಟಣದಲ್ಲೇ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಸಂತಿ ಮಠ ಇದ್ದರು.