
ಮುದ್ದೇಬಿಹಾಳ : ಕಾಲುವೆಯಲ್ಲಿ ಜಾರಿಬಿದ್ದು ಮುಳುಗುತ್ತಿದ್ದ ಅಕ್ಕನ ಜೀವ ಉಳಿಸಲು ಹೋದ ತಮ್ಮಂದಿರಿಬ್ಬರು ನೀರು ಪಾಲಾಗಿರುವ ಘಟನೆ ತಾಲ್ಲೂಕಿನ ಶಿರೋಳ ಗ್ರಾಮದ ಸಮೀಪದಲ್ಲಿ ಹಾದು ಹೋಗಿರುವ ಕೆಬಿಜೆಎನ್‌ಎಲ್ ಎಡದಂಡೆ ಕಾಲುವೆಯಲ್ಲಿ ಮಂಗಳವಾರ ನಡೆದಿದೆ.
ಪಟ್ಟಣದ ಶಿರೋಳ ರಸ್ತೆಯಲ್ಲಿರುವ ಗೊಲ್ಲರ ಓಣಿಯ ಪಕ್ಕದಲ್ಲಿರುವ ವೇಷಗಾರರ ಬಡಾವಣೆ ನಿವಾಸಿಗಳಾದ ಬಸಮ್ಮ ಚೆನ್ನಪ್ಪ ಕೊಣ್ಣೂರ(21), ಸಂತೋಷ ಚೆನ್ನಪ್ಪ ಕೊಣ್ಣೂರ(16) ಹಾಗೂ ರವಿ ಹಣಮಂತ ಕೊಣ್ಣೂರ (15) ಕಾಲುವೆಯಲ್ಲಿ ಮುಳುಗಿದವರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಬಟ್ಟೆ ತೊಳೆಯುವುದಕ್ಕೆಂದು ಹೋಗಿದ್ದ ಬಸಮ್ಮ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಆಕೆಯ ಸಹೋದರ ಸಂತೋಷ ಕಾಲುವೆಗೆ ಜಿಗಿದು ಆಕೆಯನ್ನು ರಕ್ಷಣೆಗೆ ಮುಂದಾಗಿದ್ದಾನೆ. ಆದರೆ, ಕಾಲುವೆಯಲ್ಲಿ ನೀರಿನ ಪ್ರಮಾಣ ಅಧಿಕವಾಗಿದ್ದರಿಂದ ನೀರಿನ ಸೆಳೆತಕ್ಕೆ ಹರಿದು ಹೋಗಿದ್ದಾರೆ. ಇದನ್ನು ಗಮನಿಸಿದ ಬಸಮ್ಮಳ ಸಂಬಂಧಿ ರವಿ ಇಬ್ಬರನ್ನು ರಕ್ಷಿಸಲು ಕಾಲುವೆ ಪಕ್ಕದಲ್ಲಿಯೇ ಬಿದ್ದಿದ್ದ ಹಳೆಯ ಸೀರೆಯೊಂದನ್ನು ಇವರ ಸಹಾಯಕ್ಕೆ ಎಸೆದಿದ್ದಾನೆ. ಈ ಸಮಯದಲ್ಲಿ ಕಾಲುವೆ ದಡದಲ್ಲಿದ್ದ ರವಿಯ ಕಾಲುಜಾರಿ ಆತನೂ ಕಾಲುವೆಗೆ ಬಿದ್ದು ಮುಳುಗಿದ ಎಂದು ಅವರ ಸಂಬಂಧಿಕರಾದ ರೂಪಾ ಹಾಗೂ ಹಣಮವ್ವ ತಿಳಿಸಿದ್ದಾರೆ.
ಶೋಧ ಕಾರ್ಯ: ಅಗ್ನಿಶಾಮಕ ಠಾಣೆ ಹಾಗೂ ಪೊಲೀಸ್ ಇಲಾಖೆಯಿಂದ ಮಂಗಳವಾರ ಮದ್ಯಾಹ್ನವೇ ಜಂಟಿ ಶೋಧ ಕಾರ್ಯ ಆರಂಭಿಸಲಾಯಿತು. ಕಾರ್ಯಾಚರಣೆ ನಡೆಸಿದ್ದ ಅಗ್ನಿಶಾಮಕ ಠಾಣೆ, ಪೊಲೀಸರ ತಂಡಕ್ಕೆ ಸಂತೋಷನ ಶವ ಸಿಕ್ಕಿದ್ದು, ಇನ್ನಿಬ್ಬರಿಗಾಗಿ ಶೋಧಕ್ಕೆ ಬುಧವಾರ ಕಾರ್ಯಾಚರಣೆ ಮುಂದುವರೆಸುವುದಾಗಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ನಾಗೇಶ ರಾಠೋಡ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ಮೊಹ್ಮದ ಫಸಿವುದ್ದೀನ್ , ಪಿಎಸೈ ಸಂಜಯ ತಿಪರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಡಹಳ್ಳಿ ಸಾಂತ್ವನ: ಮುದ್ದೇಬಿಹಾಳ ತಾಲ್ಲೂಕಿನ ಶಿರೋಳ ರಸ್ತೆಯಲ್ಲಿರುವ ವೇಷಗಾರರ ಬಡಾವಣೆಯ ಮೂವರು ಕಾಲುವೆಯಲ್ಲಿ ನಾಪತ್ತೆಯಾಗಿರುವ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಸಂತ್ರಸ್ಥ ಕುಟುಂಬದವರಿಗೆ ಸಾಂತ್ವನ ಹೇಳಿದರು.
ರಾಜ್ಯ ಸರ್ಕಾರ ಮೂವರಿಗೆ ತಲಾ ₹5 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೇ, ಮೂವರಿಗೆ ವೈಯಕ್ತಿಕವಾಗಿ ₹1 ಲಕ್ಷ ನೆರವು ನೀಡುವುದಾಗಿ ವಾಗ್ದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.