
ಚಡಚಣ: ಪ್ರಸಕ್ತ ಸಾಲಿನಲ್ಲಿ ರೈತರು ಕಳುಹಿಸಿದ ಕಬ್ಬಿಗೆ ಬೆಲೆ ನಿಗದಿಗೊಳಿಸಿ ಕಾರ್ಖಾನೆ ಆರಂಭಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಹಾವಿನಾಳದ ಶ್ರೀದತ್ತ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿದರು.
ಹಸಿರು ಸೇನೆಯ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ನಾಗನಾಥಗೌಡ ಬಿರಾದಾರ ಮಾತನಾಡಿ, ಶ್ರೀದತ್ತ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಕಬ್ಬಿಗೆ ದರ ನಿಗದಿಪಡಿಸದೆ, ಹಳೆಯ ದರಗಳನ್ನೇ ಮುಂದುವರಿಸಿ ಕಬ್ಬು ನುರಿಸುವಿಕೆಗೆ ಚಾಲನೆ ನೀಡಿದ್ದಾರೆ. ಇದು ಖಂಡನೀಯ ಯಾವುದೇ ಕಾರ್ಖಾನೆಗಳು ಮೊದಲು ಕಬ್ಬು ನುರಿಸುವ ಪ್ರಕ್ರಿಯೆಗೆ ಚಾಲನೆ ನೀಡಿ, ನಂತರ ಬೆಲೆ ನಿಗದಿ ಮಾಡುವ ನೀತಿ ಸಹಿಸುವುದಿಲ್ಲ. ರೈತರ ಪ್ರತಿ ಟನ್ ಕಬ್ಬಿಗೆ ₹3500 ದರ ನಿಗದಿಪಡಿಸಿ, ಮುಂಗಡ ಪಾವತಿಸಿ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು. ಒಂದು ವೇಳೆ ಬೆಲೆ ನಿಗದಿ ಮಾಡದೇ ಕಾರ್ಖಾನೆ ಪ್ರಾರಂಭಿಸಿದರೇ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ರೈತ ಮುಖಂಡರಾದ ಸಂತೋಷ ಭೈರಗೊಂಡ, ಸತೀಶ ಭೈರಗೊಂಡ, ಮಲ್ಲಿಕಾರ್ಜುನ ಬಿರಾದಾರ, ಮಹಾದೇವ ಭಂಡಿ, ಅಶೋಕ ಬೋರ್ಗಿ, ವಿಲಾಸ ಡೊಳ್ಳಿ, ಘೇನಪ್ಪ ಬಿರಾದಾರ, ಬಸವರಾಜ ಡೋಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.