ADVERTISEMENT

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ: ನಂಜಯ್ಯನಮಠ 

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 5:39 IST
Last Updated 12 ನವೆಂಬರ್ 2025, 5:39 IST
ವಿಜಯಪುರ ವಿಮಾನ ನಿಲ್ಧಾಣಕ್ಕೆ ಆಸ್ಟ್ರೀಯಾದಿಂದ ತರಲಾಗಿರುವ ಅತ್ಯಾಧುನಿಕ ಅಗ್ನಿ ಶಾಮಕ ವಾಹನವನ್ನು ಕೈಗಾರಿಕಾ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಂಗಳವಾರ ಪರಿಶೀಲಿಸಿದರು
ವಿಜಯಪುರ ವಿಮಾನ ನಿಲ್ಧಾಣಕ್ಕೆ ಆಸ್ಟ್ರೀಯಾದಿಂದ ತರಲಾಗಿರುವ ಅತ್ಯಾಧುನಿಕ ಅಗ್ನಿ ಶಾಮಕ ವಾಹನವನ್ನು ಕೈಗಾರಿಕಾ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಂಗಳವಾರ ಪರಿಶೀಲಿಸಿದರು   

ವಿಜಯಪುರ: ‘ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸುಪ್ರೀಂ ಕೋರ್ಟ್‌ನಲ್ಲಿ ಇರುವ ಪ್ರಕರಣ ಇನ್ನೊಂದು ತಿಂಗಳೊಳಗೆ ತೀರ್ಪು ಬರುವ ನಿರೀಕ್ಷೆ ಇದೆ. ತಕ್ಷಣವೇ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲಾಗುವುದು’ ಎಂದು ಕೈಗಾರಿಕಾ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.

ನಗರ ಸಮೀಪದ ಬುರಣಾಪುರ ಹತ್ತಿರದ ವಿಮಾನ ನಿಲ್ಧಾಣಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ, ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ವಿಮಾನ ನಿಲ್ದಾಣ ಕಾರ್ಯಾಚರಣೆಯಿಂದ ಜಿಲ್ಲೆಯ ಪ್ರವಾಸೋದ್ಯಮ, ಕೈಗಾರಿಕೆ, ವಾಣಿಜ್ಯ, ವ್ಯಾಪಾರ ಚಟುವಟಿಕೆಗೆ ಹೆಚ್ಚು ಅನುಕೂಲವಾಗಲಿದೆ. ಜೊತೆಗೆ ಜಿಲ್ಲೆಯ ಜನರು ಬೆಂಗಳೂರು, ಮುಂಬೈ, ದೆಹಲಿಯನ್ನು ಸುಲಭವಾಗಿ ಸಂಪರ್ಕಿಸಲು ಅನುಕೂಲವಾಗಲಿದೆ’ ಎಂದರು.

ADVERTISEMENT

‘ಏರ್‌ಬಸ್‌-320 ವಿಮಾನಗಳ ಹಾರಾಟಕ್ಕಾಗಿ ಒಟ್ಟು ₹618.75 ಕೋಟಿಗಳ ಮೊತ್ತಕ್ಕೆ ಮಂಜೂರಾಗಿದ್ದು, ವಿವಿಧ ಹಂತಗಳ ಅಭಿವೃದ್ಧಿ ಕಾಮಗಾರಿಗಳು ಶೇ 99.9 ಕಾಮಗಾರಿ ಪೂರ್ಣಗೊಂಡಿದ್ದು, ಇತರ ಕಾಮಗಾರಿಗಳನ್ನೂ ತ್ವರಿತವಾಗಿ ಪೂರ್ಣಗೊಳಿಸಲಾಗುವುದು’ ಎಂದು ಹೇಳಿದರು. 

‘ಈಗಾಗಲೇ ಒಂದನೇ ಹಂತ ಹಾಗೂ ಎರಡನೇ ಹಂತದ ಕಾಮಗಾರಿಗಳು ಪೂರ್ಣಗೊಂಡಿವೆ. ₹ 25 ಕೋಟಿ ವೆಚ್ಚದಲ್ಲಿ 2 ಅಗ್ನಿಶಾಮಕ ವಾಹನ, 13.09, ಡಿ.ವಿ.ಓ.ಆರ್, ₹ 2.76 ಕೋಟಿಗಳಲ್ಲಿ ಬಿ.ಡಿ.ಡಿ.ಎಸ್ ಉಪಕರಣ ಖರೀದಿಸಲಾಗಿದೆ. ವಿಮಾನಗಳ ರಾತ್ರಿ ಕಾರ್ಯಾಚರಣೆಗೆ ಭೂಸ್ವಾದಿನಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ₹65 ಕೋಟಿಗಳ ಪ್ರಸ್ತಾವನೆಯನ್ನು ಕೆ.ಐ.ಎ.ಡಿ.ಬಿ ಸಲ್ಲಿಸಲಾಗಿದೆ. ಈಗಾಗಲೇ ಏರ್ ಬಸ್-320 ವಿಮಾನಗಳ ಹಗಲಿನ ವೇಳೆ ಹಾರಾಟಕ್ಕಾಗಿ ಅವಶ್ಯವಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಪರಿಸರ ಅನುಮತಿಗಾಗಿ ನಿರೀಕ್ಷಿಸಲಾಗುತ್ತಿದೆ. ಅನುಮತಿ ದೊರತಲ್ಲಿ ಹಗಲಿನ ವೇಳೆಯ ವಿಮಾನ ಹಾರಾಟಕ್ಕೆ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ರನ್ ವೇ, ಟ್ಯಾಕ್ಸಿ ವೇ, ಎಪ್ರಾನ್‌, ಐಸೋಲೇಶನ್ ಬೇ, ಕೂಡು ರಸ್ತೆ, ಒಳ ರಸ್ತೆಗಳು, ಇ.ಎಸ್.ಎಸ್. ಕಟ್ಟಡ, ಆರ್ಮರಿ, ಡಾಗ್ ಕೆನಲ್ ಕಟ್ಟಡ, ಕ್ಯಾಂಟಿನ್‌ ಕಟ್ಟಡ, 10 ವಾಚ್ ಟವರ್‌ಗಳು, ಫೈರ್ ಫಿಟ್, ಕೂಲಿಂಗ್ ಫಿಟ್, ಕೆಳಮಟ್ಟದ ಹಾಗೂ ಮೇಲ್ಮಟ್ಟದ ನೀರು ಸಂಗ್ರಹಾಲಯ, ಎಸ್.ಟಿ.ಪಿ, ಪಂಪ್ ಹೌಸ್, ಕಾಂಪೌಂಡ್ ಗೋಡೆ, ಸೋಲಾರ ಪೆನಲ್, ಏವಿಯೋನಿಕ್ಸ್, ಬದ್ರತಾ ಉಪಕರಣಗಳು, ವಿದ್ಯುತ್ ಸಂಪರ್ಕ ಕಾಮಗಾರಿ, ನಿರಂತರ ನೀರು ಸರಬರಾಜು ಕಾಮಗಾರಿಗಳನ್ನು ವೀಕ್ಷಿಸಿದರು.

ವಿಮಾನ ನಿಲ್ಧಾಣ ನಿರ್ದೇಶಕ ಪೊನ್ನಪ್ಪ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎಸ್. ಪಾಟೀಲ್, ಎ.ಇ.ಇ. ಪ್ರಮೋದ ಹೊಟ್ಟಿ, ಸಹಾಯಕ ಎಂಜಿನಿಯರ್ ರೇವಣ್ಣ ಮಸಳಿ, ಸಹಾಯಕ ಎಂಜಿನಿಯರ್ ವಿವೇಕ ರೆಡ್ಡಿ, ಕೆ.ಎಂ.ವಿ ಪ್ರಾಜೆಕ್ಟನ್‌ ಗುತ್ತಿಗೆದಾರರಾದ ಶರವಣನ್, ಎಸ್.ಎಸ್. ಆಲೂರ, ಇತರರು ಇದ್ದರು.

ಆಲಮಟ್ಟಿಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರಿಗೆ ತಂಗಲು ಅನುಕೂಲವಾಗುವಂತೆ ಯಾತ್ರಿ ನಿವಾಸ ನಿರ್ಮಿಸುವ ಉದ್ದೇಶವಿದ್ದು ಶೀಘ್ರ ಕ್ರಮಕೈಗೊಳ್ಳಲಾಗುವುದು
ಎಸ್‌.ಜಿ.ನಂಜಯ್ಯನಮಠ ಅಧ್ಯಕ್ಷ ಕೈಗಾರಿಕಾ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.