
ವಿಜಯಪುರ: ನಗರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸಮುದಾಯ ಭವನ, ರಸ್ತೆ ಅಭಿವೃದ್ಧಿ, ಒಳಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು.
ವಿಜಯಪುರ ತೊರವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವರಸಪುರದ ವಿಜಯ ಕಾಲೊನಿಯ ಶ್ರೀ ಹನುಮಾನ ದೇವಸ್ಥಾನದ ಹತ್ತಿರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಮಂಜೂರಿಸಲಾದ ₹5 ಲಕ್ಷ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ, ನಗರದ ಅಟಲ್ ಬಿಹಾರಿ ವಾಜಪೇಯಿ ರಸ್ತೆಯಲ್ಲಿ ನಿರ್ಮಾಣ ಮಾಡಲಾದ ಕೊಳಗೇರಿ ಮನೆಗಳ ಹತ್ತಿರ, ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಂಜೂರಿಸಲಾದ ₹ 56.35 ಲಕ್ಷ ಅನುದಾನದಲ್ಲಿ ಪ್ರಧಾನಮಂತ್ರಿ ಅವಾಸ ಯೋಜನೆಯಡಿ ನಿರ್ಮಿಸಲಾದ ಜಿ+1 ಮಾದರಿ ಮನೆಗಳಿಗೆ ನೀರು ಸರಬರಾಜು, ಸಿಸಿ ರಸ್ತೆ ಹಾಗೂ ಆರ್.ಸಿ.ಸಿ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ನಗರದ ವಾರ್ಡ್ ನಂ.24ರ ಕಮಾನಖಾನ್ ಬಜಾರ್ (ಗೌಡರ ಓಣಿ)ದಲ್ಲಿ ಬರುವ ಶ್ರೀ ಬಸವಣ್ಣ ದೇವರ ಪುರಾತನ ದೇವಸ್ಥಾನದ ಹತ್ತಿರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಮತ್ತು ಮುಜರಾಯಿ ಇಲಾಖೆಯಿಂದ ಮಂಜೂರಾದ ₹14 ಲಕ್ಷ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಹಾಗೂ ನಮ್ಮ ಸರ್ಕಾರಿ ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ.18 ರಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮತ್ತು ಬಯಲು ಸೀಮೆ ಅಭಿವೃದ್ಧಿ ಮಂಡಳಿಯಿಂದ ಮಂಜೂರಿಸಿದ ₹ 45 ಲಕ್ಷ ಅನುದಾನದಲ್ಲಿ 3 ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಭೂಮಿಪೂಜೆ ನಂತರ ಸಾರ್ವಜನಿಕರಿಂದ ಅಹವಾಲು ಆಲಿಸಿದರು. ಮುಖಂಡರಾದ ಪ್ರೇಮಾನಂದ ಬಿರಾದಾರ, ವಿಠ್ಠಲ ಹೊಸಪೇಟ, ಮಲ್ಲಿಕಾರ್ಜುನ ಗಡಗಿ, ಅಶೋಕ ಬೆಲ್ಲದ, ಸಂತೋಷ ಪಾಟೀಲ, ದಾದಾಸಾಹೇಬ ಬಾಗಾಯತ, ಚಂದ್ರು ಚೌಧರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.