ADVERTISEMENT

ಕಾಲ್ತುಳಿತ ಘಟನೆ: ಶಿವಲಿಂಗ ಕುಟುಂಬಕ್ಕೆ ₹25 ಲಕ್ಷ ಪರಿಹಾರ ವಿತರಣೆ

ಮೃತ ಯುವಕನ ತಂದೆ, ತಾಯಿಗೆ ಸಚಿವ ದರ್ಶನಾಪುರದಿಂದ ಚೆಕ್ ವಿತರಣೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 15:49 IST
Last Updated 9 ಜೂನ್ 2025, 15:49 IST
ಯಾದಗಿರಿ ತಾಲ್ಲೂಕಿನ ಹೊನಗೇರಾದ ಮೃತ ಶಿವಲಿಂಗನ ಕುಟುಂಬಕ್ಕೆ ಸೋಮವಾರ ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ₹25 ಲಕ್ಷ ಮೊತ್ತದ ಚೆಕ್ ವಿತರಿಸಿದರು
ಯಾದಗಿರಿ ತಾಲ್ಲೂಕಿನ ಹೊನಗೇರಾದ ಮೃತ ಶಿವಲಿಂಗನ ಕುಟುಂಬಕ್ಕೆ ಸೋಮವಾರ ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ₹25 ಲಕ್ಷ ಮೊತ್ತದ ಚೆಕ್ ವಿತರಿಸಿದರು   

ಯಾದಗಿರಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಸಾವನ್ನಪ್ಪಿದ ತಾಲ್ಲೂಕಿನ ಹೊನಗೇರಾದ ಶಿವಲಿಂಗನ ಕುಟುಂಬಕ್ಕೆ ಸೋಮವಾರ ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ₹25 ಲಕ್ಷ ಮೊತ್ತದ ಚೆಕ್ ವಿತರಿಸಿದರು.

ಶಿವಲಿಂಗನ ತಂದೆ ಚಂದಪ್ಪ, ತಾಯಿ ಲಕ್ಷ್ಮೀ, ಅಣ್ಣ ಹೊನ್ನಪ್ಪ ಅವರೊಂದಿಗೆ ಸಚಿವರು ಮಾತನಾಡಿ, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ‘ಮಗನನ್ನು ತಂದುಕೊಡಲು ಯಾರಿಂದಲೂ ಸಾಧ್ಯವಿಲ್ಲ. ಇನ್ನೊಬ್ಬ ಮಗ ಹೊನ್ನಪ್ಪನಲ್ಲಿಯೇ ಶಿವಲಿಂಗನನ್ನು ಕಾಣುವ ಮೂಲಕ ನೆಮ್ಮದಿ ಜೀವನ ನಡೆಸಿ. ಹಣದ ಸದ್ಬಳಕೆ ಮಾಡಿಕೊಳ್ಳಿ’ ಎಂದು ಹೇಳಿದರು.

‘ನಡೆಯಬಾರದ್ದು ನಡೆದಿದೆ. ವಿಧಿಯಾಟ. ಎದೆಗುಂದದೇ ಬದುಕು ಸಾಗಿಸಿ. ನಿಮ್ಮ ಇನ್ನೊಬ್ಬ ಮಗನಿಗೆ ಇಲ್ಲಿನ‌ ವೈದ್ಯಕೀಯ ಕಾಲೇಜಿನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೌಕರಿ ಕೊಡಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ‘ಸರ್ಕಾರದ ಈ ಪರಿಹಾದ ಹಣ ಪೋಲಾಗಿಸದೇ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿ’ ಎಂದರು.

ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಜಿಲ್ಲಾಧಿಕಾರಿ ಡಾ.ಸುಶೀಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ್ ಉಪಸ್ಥಿತರಿದ್ದರು.

14 ರಂದು ಯಾದಗಿರಿಗೆ ಸಿಎಂ

ಈಗಾಗಲೇ ನಿಗದಿಯಾದಂತೆಯೇ ಜೂನ್‌ 14 ರಂದು ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ಕೊನೆಗಳಿಗೆಯಲ್ಲಿ ಕಾರ್ಯಕ್ರಮ ಏನಾಗುತ್ತದೆ ಎಂದು ಹೇಳಲು ಆಗದು. ಜೂನ್‌ 9 ರಂದು ನಿಗದಿಯಾಗಿದ್ದ ರಾಯಚೂರು ಕಾರ್ಯಕ್ರಮ ರದ್ದಾಗಿದೆ. ಇಲ್ಲಿ ನಾವು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದೆ ಎಂದರು. ಬಂಜಾರ ಭವನದ ಮುಖಂಡರು ಬಂದು ಭೇಟಿ ಮಾಡಲಿ ಮುಖ್ಯಮಂತ್ರಿ ಅವರಿಂದ ಅದನ್ನು ಉದ್ಘಾಟಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದೆಂದು ಸಚಿವರು ಹೇಳಿದರು.

ಬಿಜೆಪಿಯವರು ಎಷ್ಟು ಜನರು ರಾಜೀನಾಮೇ ನೀಡಿದ್ದಾರೇ?

ಕಾಲ್ತುಳಿದ ಘಟನೆ ನಡೆದಿದ್ದು ವಿಷಾದಕರ. ಸರ್ಕಾರ ತನ್ನ ವೈಫಲ್ಯತೆ ಒಪ್ಪಿಕೊಂಡಿದೆ. ಹೀಗಾಗಿ ಯಾರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಂದೆ ಇಂಥ ಘಟನೆಗಳು ನಡೆದಾಗ ಯಾರು ಯಾರು ರಾಜೀನಾಮೆ ನೀಡಿದ್ದಾರೆ. ಕುಂಭಮೇಳದಲ್ಲಿ ಜನರು ಸತ್ತಾಗ ಎಷ್ಟು ಜನರು ರಾಜೀನಾಮೆ ನೀಡಿದ್ದರು ಎಂದು ಪ್ರಶ್ನಿಸಿದ ಸಚಿವರು ಬಿಜೆಪಿಯವರಿಗೆ ಮಾಡಲು ಏನು ಕೆಲಸವಿಲ್ಲ. ಅದಕ್ಕೆ ಇಂತಹದೆಲ್ಲ ರಾಜಕೀಯ ಮಾಡಿ ಬೆಳೆ ಬೆಯಿಸಿಕೊಳ್ಳಲು ಮುಂದಾಗುತ್ತಾರೆಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.