ADVERTISEMENT

ಯಾದಗಿರಿ | ಜಾತ್ರೆಗಳಲ್ಲಿ ಪ್ರಾಣಿ ಬಲಿ ತಡೆಯಿರಿ: ದಯಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2023, 16:26 IST
Last Updated 20 ಡಿಸೆಂಬರ್ 2023, 16:26 IST

ಯಾದಗಿರಿ: ಜಿಲ್ಲೆಯ ವ್ಯಾಪ್ತಿಯಲ್ಲಿ ಜರುಗುವ ವಿವಿಧ ಜಾತ್ರೆಗಳಲ್ಲಿ ಕುರಿ, ಕೋಳಿ, ಕೋಣ ಸೇರಿದಂತೆ ಯಾವುದೇ ರೀತಿಯ ಪ್ರಾಣಿಗಳನ್ನು ಬಲಿ ನೀಡುವುದನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಮನವಿ ಮಾಡಿದರು.

ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸುರಪುರ ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಡಿ.18 ರಿಂದ 20ರವರೆಗೆ ಜರುಗಿದ ಜಾತ್ರೆ ಮತ್ತು ದೇವಲ ಗುಡ್ಡದ ಗ್ರಾಮದೇವತೆ ಜಾತ್ರೆಗಳಲ್ಲಿ ಪ್ರಾಣಿ ಬಲಿ ನೀಡುವುದನ್ನು ತಡೆಯುವಲ್ಲಿ  ಜಿಲ್ಲಾಡಳಿತ ಯಶಸ್ವಿಯಾಗಿದೆ.ಹರಕೆಯ ರೂಪದಲ್ಲಿ ದೇವಿಕೇರಾ ಜಾತ್ರೆಯಲ್ಲಿ ಪ್ರಾಣಿ ಬಲಿ ನೀಡಲಾಗುತ್ತದೆ. ಅದನ್ನು ತಡೆಯುವಂತೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಪಶು-ಪ್ರಾಣಿ ಬಲಿ ನಿರ್ಮೂಲನ ಜಾಗೃತಿ ಮಹಾಸಂಘ, ಬಸವ ಧರ್ಮ ಜ್ಞಾನ ಪೀಠದ ಮೂಲಕ ಮನವಿ ಮಾಡಲಾಗಿತ್ತು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ಸಂಪೂರ್ಣ ಗೋವಂಶ ಜಾನುವಾರು ಹತ್ಯೆ ನಿಷೇಧ ಕಾಯ್ದೆ’ ರೂಪಿಸಿ ಭಾರತವನ್ನು ಸಂಪೂರ್ಣ ಮಾಂಸ ರಫ್ತು ಮುಕ್ತ ದೇಶವನ್ನಾಗಿ ಘೋಷಿಸಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.