ADVERTISEMENT

ಕರ್ನಾಟಕ ಫಲಿತಾಂಶದ ಪಕ್ಷಿನೋಟ...

​ಪ್ರಜಾವಾಣಿ ವಾರ್ತೆ
Published 17 ಮೇ 2014, 11:29 IST
Last Updated 17 ಮೇ 2014, 11:29 IST

ಶಿವಮೊಗ್ಗ 
ಸಮಾಜವಾದದ ಕ್ಷೇತ್ರವಾಗಿರುವ ಶಿವಮೊಗ್ಗದಲ್ಲಿ ‘ಮೋದಿ ಪ್ರಧಾನಿಯಾಗಲು ಮತ ನೀಡಿ’ ಎಂದು ಯಾಚಿಸಿದ ಬಿಜೆಪಿ ಅಭ್ಯರ್ಥಿ ಬಿ.ಎಸ್‌.ಯಡಿ­ಯೂ­­ರಪ್ಪ (606216 ಪಡೆದ ಮತಗಳು) ಅವರ ಕೈಹಿಡಿದಿರುವ ಮತದಾರರು ‘ಬಂಗಾ­ರಪ್ಪ ಅವರ ಮಗಳು ನಾನು. ಅವರ ಕೆಲಸ ಮುಂದುವರಿಸಲು ಮತ ನೀಡಿ’ ಎಂದು ಬೇಡಿದ ಜೆಡಿಎಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ (240636 ಪಡೆದ ಮತಗಳು) ಅವರ ಮನವಿಯನ್ನು ತಳ್ಳಿಹಾಕಿದ್ದಾರೆ.

ಬದಲಾದ ಸನ್ನಿವೇಶದಲ್ಲಿ ತಮ್ಮ ಸ್ವಭಾವವನ್ನು ಬದಲಾಯಿಸಿಕೊಂಡು ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಯಾವುದೇ ಟೀಕೆ, ಆರೋಪ ಮಾಡದೇ ಮೋದಿ ಹೆಸರು ಹೇಳಿ ಮಾಡಿದ ಮೋಡಿ ಮತ್ತು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲೆಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಇಲ್ಲಿ ಬಿವೈಎಸ್‍ ಕೈಹಿಡಿದಿವೆ.

ಮಾವ ಮತ್ತು ಪತಿಯ ತಾರಾ ವರ್ಚಸ್ಸಿನ ಜತೆಗೆ ತಂದೆ ಹೆಸರಿನ ಅನುಕಂಪವನ್ನು ಮತಗಳನ್ನಾಗಿ ಪರಿವರ್ತಿಸಬಹುದೆಂಬ ಗೀತಾ ಅವರ ಲೆಕ್ಕಾಚಾರ ಇಲ್ಲಿ ತಲೆಕೆಳಗಾಗಿ, ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ.

ADVERTISEMENT

ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ಕಾಂಗ್ರೆಸ್ ನ ಅಭ್ಯರ್ಥಿ ಮಂಜುನಾಥ್ ಭಂಡಾರಿ ಅವರು 242911 ಮತಗಳನ್ನು ಗಳಿಸುವ ಮೂಲಕ ಇಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಫಲಿತಾಂಶದ ವಿವರ
 

ಬೆಳಗಾವಿ 

ಕಬ್ಬಿನ ಕಣಜ ಎಂಬ ಖ್ಯಾತಿ ಹೊಂದಿರುವ ಬೆಳಗಾವಿಯಲ್ಲಿ ಈ ಬಾರಿ ಮತದಾರರು ಮತ್ತೊಮ್ಮೆ ಬಿಜೆಪಿಯ ಹಾಲಿ ಸಂಸದ ಸುರೇಶ ಅಂಗಡಿ ಅವರಿಗೆ 554417 ಮತಗಳನ್ನು ನೀಡುವ ಮೂಲಕ ಗೆಲುವಿನ ಸಿಹಿ ಉಣ್ಣಿಸಿದ್ದಾರೆ. ‘ಮಹಿಳೆಗೆ ಮತ ನೀಡಿ’ ಎಂದು ಮತ­ದಾರರ ಮುಂದೆ 'ಕೈ'ಮುಗಿದು ಕೇಳಿದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್‌ (478557 ಪಡೆದ ಮತಗಳು) ಅವರ ಮನವಿ ಇಲ್ಲಿ ವ್ಯರ್ಥವಾಗಿದೆ.

ಕಳೆದ ಬಾರಿಯಂತೆ ಈ ಬಾರಿಯೂ ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌  ನಡುವೆಯೇ ನೇರ ಹಣಾಹಣಿ ಇತ್ತು. ಜತೆಗೆ ಜೆಡಿಎಸ್‌ ಅಭ್ಯರ್ಥಿ ನಾಸೀರ್‌ ಬಾಗವಾನ್‌ ದಿಢೀರನೆ ಕಣದಿಂದ ನಿವೃತ್ತಿ ಘೋಷಿಸಿ ಕಾಂಗ್ರೆಸ್‌ ಪಕ್ಷವನ್ನು ಸೇರಿ ಚುನಾವಣಾ ಕಣಕ್ಕೆ ಹೊಸ ತಿರುವು ಬಂದಿತ್ತು.

ಬಾಗವಾನ್‌ ಕಾಂಗ್ರೆಸ್‌ ಸೇರಿದ್ದರಿಂದ ಅಲ್ಪ­ಸಂಖ್ಯಾತ ಮತಗಳ ವಿಭಜನೆ ತಪ್ಪಿದಂತಾ­ಗಿದ್ದು, ಬಹುತೇಕ ಮತಗಳು ಕಾಂಗ್ರೆಸ್‌ಗೆ ಬೀಳಬಹುದು ಎಂಬ ಲೆಕ್ಕಾಚಾರ ಇಲ್ಲಿ ತಲೆಕೆಳಗಾಗಿದೆ.

ಫಲಿತಾಂಶದ ವಿವರ

ಉತ್ತರ ಕನ್ನಡ ಕ್ಷೇತ್ರ

ಕೊನೆ ಗಳಿಗೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ನಾಮಪತ್ರ ವಾಪಸ್‌ ಪಡೆದ ಕಾರಣ ಇಡೀ ರಾಜ್ಯದ ಗಮನ ಸೆಳೆದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮೋದಿ ಅಲೆ ಜೋರಾಗಿ ಬೀಸಿದ್ದು, ಹಲವು ಅಸಮಾಧಾನ ಮತ್ತು ಸವಾಲುಗಳ ನಡುವೆಯೂ ಬಿಜೆಪಿಯ ಹಾಲಿ ಸಂಸದ ಅನಂತಕುಮಾರ್ ಹೆಗಡೆ (546939 ಪಡೆದ ಮತಗಳು) ಅವರು ಗೆಲುವಿನ ನಗೆ ಬೀರಿದ್ದಾರೆ.

ಹೆಗಡೆ ಅವರ ಎದುರಾಳಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಅವರ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಪ್ರಶಾಂತ ದೇಶಪಾಂಡೆ (406239 ಪಡೆದ ಮತಗಳು) ಅವರು ಮೋದಿ ಅಲೆಯಲ್ಲಿ ಕೊಚ್ಚಿಹೋಗಿದ್ದಾರೆ.

ಒಟ್ಟಾರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಾಬಲ್ಯವಿದ್ದರೂ ಆ ಪಕ್ಷದ ಆಂತರಿಕ ಭಿನ್ನಮತದಿಂದ ಕೆಲವು ಪ್ರಮುಖರು ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿ ಭಾಗವಹಿಸಿರಲಿಲ್ಲ. ಆದರೂ, ಮಗನ ರಾಜಕೀಯ ಭವಿಷ್ಯ ಅರಳಿಸುವುದರ ಜೊತೆಗೆ ತಮ್ಮ ಪ್ರತಿಷ್ಠೆ ಉಳಿಸಿಕೊಳ್ಳಲು ಪಣತೊಟ್ಟಿದ್ದ ಸಚಿವ ದೇಶಪಾಂಡೆ ಪಕ್ಷದಲ್ಲಿನ ಆಂತರಿಕ ಭಿನ್ನಮತಕ್ಕೆ ತಾತ್ಕಾಲಿಕ ತೇಪೆ ಹಚ್ಚುವ ಪ್ರಯತ್ನ ಮಾಡಿದರಾದರೂ ಅದು ಇಲ್ಲಿ ಕೈಕೊಟ್ಟಿದೆ.

ಫಲಿತಾಂಶದ ವಿವರ
 

ಹಾವೇರಿ 

ರಾಜ್ಯ ಹಾಗೂ ರಾಷ್ಟ್ರ ರಾಜಕಾ­ರಣದಲ್ಲಿ ಹೊಸ ಪ್ರಯೋಗ ಹಾಗೂ ವೈಶಿಷ್ಟ್ಯಗಳಿಗೆ ಸಾಕ್ಷಿಯಾದ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸತತ ಮೂರನೇ ಬಾರಿಗೆ ಮತದಾರರು ಕಮಲ ಅರಳಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಎದುರಾಳಿ­ಯಾಗಿದ್ದ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಶಿವಕುಮಾರ ಉದಾಸಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್‌ ಈ ಬಾರಿಯೂ ಪರಸ್ಪರ ಅದೃಷ್ಟ ಪರೀಕ್ಷೆಗೆ ಮುಂದಾದ ಕಾರಣ ಈ ಕ್ಷೇತ್ರ ಕಾಂಗ್ರೆಸ್‌, ಬಿಜೆಪಿ ನಡುವಣ ಜಿದ್ದಾಜಿದ್ದಿನ ಕಣವಾಗಿತ್ತು.

ಸಂಸದರಾದ ನಂತರ ಸಂಸತ್‌ಗೆ ಹೆಚ್ಚು ಹಾಜರಿ ಹಾಕಿ, 300ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ ರಾಜ್ಯದ ಯುವ ಸಂಸದ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶಿವಕುಮಾರ್‍ ಅವರಿಗೆ 566790 ಮತಗಳನ್ನು ನೀಡುವ ಮೂಲಕ ಮತ್ತೊಮ್ಮೆ ಆಶೀರ್ವದಿಸಿರುವ ಮತದಾರರು ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅವರ 'ಕೈ'ಗೆ 479219 ಮತ ನೀಡಿದ್ದಾರೆ.

ಬಿಜೆಪಿ ಇಬ್ಭಾಗವಾಗಿ ಕೆಜೆಪಿ ಹುಟ್ಟಿಗೆ ಸಾಕ್ಷಿಯಾಗಿದ್ದ ಹಾವೇರಿ ಜಿಲ್ಲೆ­ಯಲ್ಲಿಯೇ ಕಳೆದ ವಿಧಾನಸಭಾ ಚುನಾವಣೆ­ಯಲ್ಲಿ ಕೆಜೆಪಿ ದಯನೀಯ ಸೋಲು ಕಂಡಿತ್ತು. ಪಕ್ಷ ಇಬ್ಭಾಗ­ವಾಗಿದ್ದೇ ಸೋಲಿಗೆ ಕಾರಣ ಎಂದು ಅರಿತ ಎರಡೂ ಪಕ್ಷದ ಮುಖಂಡರು ಮುಖಂಡರು ಒಂದಾಗಿ ಚುನಾವಣೆ ಎದುರಿಸಿ, ತಮ್ಮ ಅಭ್ಯರ್ಥಿ ಗೆಲ್ಲಿಸಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

ಫಲಿತಾಂಶದ ವಿವರ

ಚಿಕ್ಕೋಡಿ

ರಾಜಕೀಯ ಪಾಳೇಗಾರಿಕೆ’ಗೆ ಹೆಸರಾಗಿ­ರುವ ಚಿಕ್ಕೋಡಿ ಕ್ಷೇತ್ರದಲ್ಲಿ ಈ ಬಾರಿ ಒಲ್ಲೆ, ಒಲ್ಲೆ ಎನ್ನುತ್ತ ಕೊನೆಗೆ ವರಿಷ್ಠರ ಒತ್ತಡಕ್ಕೆ ಮಣಿದು ಚುನಾವಣಾ ಕಣಕ್ಕೆ ಧುಮುಕಿದ್ದ ಆಡಳಿತಾರೂಢ ಕಾಂಗ್ರೆಸ್‌ನ ಸಚಿವ ಪ್ರಕಾಶ ಹುಕ್ಕೇರಿ (474373 ಪಡೆದ ಮತಗಳು) ಅವರಿಗೆ ವಿಜಯಲಕ್ಷ್ಮೀ ಒಲಿದಿದ್ದಾಳೆ.

2009ರ ಚುನಾವಣೆಯಂತೆಯೇ ಈ ಬಾರಿಯೂ ಇಲ್ಲಿ ಬಿಜೆಪಿಯ ರಮೇಶ ಕತ್ತಿ (471370 ಪಡೆದ ಮತಗಳು) ಅವರೇ ಪ್ರಕಾಶ್ ಅವರಿಗೆ ಪ್ರತಿಸ್ಪರ್ಧಿ­ಗಳಾಗಿದ್ದರಾದರೂ ಇಲ್ಲಿ ಅವರ ಯಾವುದೇ 'ಕತ್ತಿ ವರಸೆ'ಗೆ ಮತದಾರರು ಮಣೆ ಹಾಕಿಲ್ಲ.

ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಸಚಿವ ಸ್ಥಾನ ತೊರೆದು ದೆಹಲಿಗೆ ಹೋಗಬೇಕು ಅಕಸ್ಮಾತ್‌ ಆಯ್ಕೆಯಾಗದಿದ್ದರೆ, ಸಚಿವರಾಗಿಯೂ ಸೋತರು ಎಂಬ ಅಪಕೀರ್ತಿ. ಹೀಗಾಗಿ ಪ್ರಕಾಶ ಅವರಿಗೆ ಈ ಬಾರಿ ಚುನಾವಣೆ ಇವರೆಗೆ ನುಂಗಲಾರದ ಉಗುಳಲಾಗದ ‘ಬಿಸಿ ತುಪ್ಪ’ವಾಗಿತ್ತು. ಆದರದೀಗ ಹೊರಹೊಮ್ಮಿರುವ ಫಲಿತಾಂಶದಿಂದ ಸಿಹಿತುಪ್ಪವಾಗಿ ಬದಲಾಗಿದೆ.

ಫಲಿತಾಂಶದ ವಿವರ
 

ದಾವಣಗೆರೆ ‍

ಕಳೆದ ನಾಲ್ಕು ಚುನಾವಣೆಗಳಿಂದ ಎರಡು ಪ್ರಭಾವಿ ಕುಟುಂಬಗಳ ಸದಸ್ಯರ ನಡುವಿನ ಪ್ರತಿಷ್ಠೆಯ ಸ್ಪರ್ಧಾ ಕಣವಾಗಿರುವ ಮಧ್ಯ ಕರ್ನಾಟಕದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮೋದಿ ಅಲೆ ಜೋರಾಗಿಯೇ ಬಿಸಿದೆ.

ಬಿಜೆಪಿಯ ಹಾಲಿ ಸಂಸದರಾಗಿದ್ದ ದಿ. ಜಿ.ಮಲ್ಲಿಕಾರ್ಜುನಪ್ಪ ಅವರ ಪುತ್ರ ಜಿ.ಎಂ.ಸಿದ್ದೇಶ್ವರ ಅವರಿಗೆ 518894 ಮತಗಳನ್ನು ನೀಡುವ ಮೂಲಕ ಮತದಾರರು ಮತ್ತೊಮ್ಮೆ ಕೈ ಹಿಡಿಯುವ ಮೂಲಕ ಗೆಲುವಿನ ದಡ ಸೇರಿಸಿದ್ದಾರೆ. ಸಿದ್ದೇಶ್ವರ ಅವರ ಪ್ರತಿಸ್ಪರ್ಧಿಯಾಗಿದ್ದ ಸಚಿವ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಎಸ್‌.ಎಸ್‌.ಮಲ್ಲಿಕಾರ್ಜುನ ಅವರು 501287 ಮತಗಳನ್ನು ಗಳಿಸುವ ಮೂಲಕ ಮತ್ತೊಮ್ಮೆ ಪರಾಭವಗೊಂಡಿದ್ದಾರೆ.

ಫಲಿತಾಂಶದ ವಿವರ

ಧಾರವಾಡ 

ತಾವು ಇಷ್ಟಪಟ್ಟ ಅಭ್ಯರ್ಥಿಯನ್ನು ಕನಿಷ್ಟ ಎರಡು ಬಾರಿ ಸಂಸತ್ತಿಗೆ ಕಳಿಸಿಕೊಡುವ ಔದಾರ್ಯವುಳ್ಳ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿ­ರುವ ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರು ಈ ಬಾರಿ ತಮ್ಮ ಔದಾರ್ಯವನ್ನು ಕೊಂಚ ಹೆಚ್ಚಿಸುವ ಮೂಲಕ ಹಾಲಿ ಸಂಸದ ಪ್ರಹ್ಲಾದ ಜೋಶಿ (545395 ಪಡೆದ ಮತಗಳು) ಅವರನ್ನು ಮೂರನೇ ಬಾರಿಗೆ ಆಯ್ಕೆ ಮಾಡಿದ್ದಾರೆ.

ಆಡಳಿತಾರೂಢವಾಗಿರುವ ತಮ್ಮ ಪಕ್ಷ ನೆಚ್ಚಿ  ಜೋಶಿ ಅವರ ವಿರುದ್ಧ ಕಣಕ್ಕಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ವಿನಯ್‍ ಕುಲಕರ್ಣಿ ಅವರು 'ಕೈ'ಮುಗಿದು ಮಾಡಿದ ಮನವಿಗೆ ಮತದಾರರು ಮಾರುಹೋಗದೇ, ಮೋದಿ ಅಲೆಯಲ್ಲಿ ಮುಳುಗಿಹೋಗಿದ್ದಾರೆ.

ಫಲಿತಾಂಶದ ವಿವರ

ಚಿತ್ರದುರ್ಗ

ಕಲ್ಲಿನ ಕೋಟೆಯ ಜನರು ಈ ಬಾರೀ ಕಾಂಗ್ರೆಸ್‌ ಕೈಹಿಡಿದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಎನ್‌. ಚಂದ್ರಪ್ಪ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಜರ್ನಾದನಸ್ವಾಮಿ ಅವರನ್ನು 101291ಮತಗಳ ಅಂತರದಿಂದ ಸೋಲಿಸಿದರು. ಜೆಡಿಎಸ್‌ ಅಭ್ಯರ್ಥಿ ಗೂಳಿಹಟ್ಟಿ ಶೇಖರ್‌ 202108 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಉಡುಪಿ–ಚಿಕ್ಕಮಗಳೂರು

ಕಾಫಿಯ ಕಣಜ ಎಂದೇ ಹೆಸರಾಗಿರುವ  ಚಿಕ್ಕಮಗಳೂರಿನಲ್ಲಿ ಈ ಸಲ ಕಮಲ ಅರಳಿದೆ. ಬಿಜೆಪಿಯ ಶೋಭಾ ಕರಂದ್ಲಾಜೆ ಅವರು 581168 ಮತಗಳಿಂದ ಜಯಭೇರಿ ಬಾರಿಸಿದರು. ಕಾಂಗ್ರೆಸ್‌ನ ಕೆ. ಜಯಪ್ರಕಾಶ್‌ ಹೆಗ್ಡೆ ಅವರು 181643 ಮತಗಳ ಅಂತರದಿಂದ ಸೋಲುಂಡರು. ಜೆಡಿಎಸ್‌ನ ವಿ.ಧನಂಜಯ ಕುಮಾರ್‌ ಅವರು 14895 ಮತಗಳನ್ನು ಪಡೆದರು.

ಫಲಿತಾಂಶದ ವಿವರ

ಚಾಮರಾಜನಗರ

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮತ್ತೆ ಕಾಂಗ್ರೆಸ್‌ ಪಾರಮ್ಯ ಮೆರೆದಿದೆ. ಆರ್‌. ದೃವನಾರಾಯಣ್‌ ಅವರು 141182 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. ಬಿಜೆಪಿಯ ಎ.ಆರ್‌. ಕೃಷ್ಣಮೂರ್ತಿ 426660 ಮತಗಳನ್ನು ಪಡೆದು ಪರಾಭವಗೊಂಡರು. ಜೆಡಿಎಸ್‌ನ ಕೋಟೆ ಶಿವಣ್ಣ 58760 ಮತಗಳನ್ನು ಪಡೆದರು.

ಹಾಸನ

ಜೆಡಿಎಸ್‌ ಭದ್ರಕೋಟೆ ಎಂದೇ ಖ್ಯಾತಿಯಾಗಿರುವ ಹಾಸನದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಅವರು 100462 ಮತಗಳ ಅಂತರದಿಂದ ಗೆದ್ದರು. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎ. ಮಂಜು 409379 ಮತಗಳನ್ನು ಪಡೆದರು. ಬಿಜೆಪಿಯ ವಿಜಯಶಂಕರ್‌ 165688 ಮತಗಳನ್ನು ಪಡೆದರು.

ಮೈಸೂರು–ಕೊಡಗು

ಮುಖ್ಯಮಂತ್ರಿಯ ತವರು ಜಿಲ್ಲೆ ಮೈಸೂರಿನಲ್ಲಿ ಕಮಲ ಅರಳಿದೆ. ಬಿಜೆಪಿಯ ಪ್ರತಾಪ್‌ ಸಿಂಹ ಅವರು ಕಾಂಗ್ರೆಸ್‌ನ ಎಚ್‌. ವಿಶ್ವನಾಥ್‌ ಅವರನ್ನು 31608 ಮತಗಳ ಅಂತರದಿಂದ ಸೋಲಿಸಿದರು.  ಪ್ರತಾಪ್‌ ಸಿಂಹ 503908 ಮತಗಳನ್ನು ಪಡೆದರು. ಜೆಡಿಎಸ್‌ನ ಚಂದ್ರಶೇಖರಯ್ಯ ಅವರು 138587 ಮತಗಳನ್ನು ಪಡೆದರು.

ದಕ್ಷಿಣ ಕನ್ನಡ

ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮತ್ತೆ ಕಮಲದ ಹೂ ಅರಳಿದೆ. ಬಿಜೆಪಿಯ ನಳೀನ್‌ ಕುಮಾರ್‌ ಕಟಿಲ್‌ ಅವರು 642739 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ ಹಿರಿಯ ಮುಖಂಡ ಜರ್ನಾದನ ಪೂಜಾರಿ ಅವರನ್ನು ಸೋಲಿಸಿದರು. ಪೂಜಾರಿ ಅವರು 499030 ಮತಗಳನ್ನು ಪಡೆದರು.

ಮಂಡ್ಯ

ತಾರಾ ಮೆರುಗಿದ್ದ ಮಂಡ್ಯ ಕ್ಷೇತ್ರದಲ್ಲಿ ಚಿತ್ರನಟಿ ರಮ್ಯಾ ಅವರು 5518 ಮತಗಳಿಂದ ಪರಾಭವಗೊಂಡರು. ಜೆಡಿಎಸ್‌ನ ಸಿ. ಎಸ್‌. ಪುಟ್ಟರಾಜು ಅವರು 524370 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಬಿಜೆಪಿಯ ಶಿವಲಿಂಗಯ್ಯ ಅವರು ಕೇವಲ 86993 ಮತಗಳನ್ನು ಪಡೆದರು.

ಬಾಗಲಕೋಟೆ

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗದ್ದಿಗೌಡರ್ ಪರ್ವತಗೌಡ ಚಂದನ ಅವರು 1,16,560 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಅಜಯಕುಮಾರ ಸರನಾಯಕ ಅವರನ್ನು ಪರಾಭವಗೊಳಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಇದರೊಂದಿಗೆ ಕಾಂಗ್ರೆಸ್ ದೂಳಿಪಟ ಮಾಡಿ ವಿಜಯಮಾಲೆಯನ್ನು ತಮ್ಮದಾಗಿಸಿಕೊಂಡರು.

ಬಿಜೆಪಿ 5,71,548 ಮತ ಪಡೆದಿದ್ದು, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ 4,54,988 ಮತ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಶಂಕರ ಬಿದರಿ 10,959 ಮತ ಪಡೆಯಲಷ್ಟೇ ಸಮರ್ಥರಾಗಿದ್ದಾರೆ. ನಂತರದ ಸ್ಥಾನ ‘ನೋಟಾ’ಕ್ಕೆ ದೊರೆತಿದ್ದು,  10,764 ಜನ ‘ನೋಟಾ’ ಚಲಾಯಿಸಿದ್ದಾರೆ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರ ಬಿಜೆಪಿ ಉಳಿದಂತೆ ಏಳು ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಶಾಸಕರು, ಅದರಲ್ಲಿ ಇಬ್ಬರು ಸಚಿವರು ಇದ್ದರೂ ಬಿಜೆಪಿ ಅಲೆ ಕಾಂಗ್ರೆಸ್ ಕೋಟೆಯನ್ನು ಛಿದ್ರಗೊಳಿಸಿ ದೂಳಿಪಟ ಮಾಡಿದೆ.

ಫಲಿತಾಂಶದ ವಿವರ

ಗುಲ್ಬರ್ಗ

ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗುವ ಮೂಲಕ ನಿರಂತರವಾಗಿ 11 ಬಾರಿ ಗೆಲುವು ಸಾಧಿಸಿ ಸೊಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ.
ಖರ್ಗೆ ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ರೇವುನಾಯಕ್ ಬೆಳಮಗಿ ಅವರಿಗಿಂತ 74,733 ಹೆಚ್ಚು ಮತ ಗಳಿಸುವ ಮುಲಕ ಜಯಬೇರಿ ಬಾರಿಸಿದರು.

ಖರ್ಗೆ 507193 ಮತ ಗಳಿಸಿದ್ದು, ರೇವುನಾಯಕ ಬೆಳಮಗಿ ಅವರು 432460 ಮತ ಗಳಿಸಿದರು. ಜೆಡಿಎಸ್ 15690 ಮತ ಗಳಿಸಿ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿದೆ. 9888 ‘ನೋಟಾ’ ಚಲಾವಣೆಯಾಗಿವೆ.

‘ಮುಂದಿನ ಮುಖ್ಯಮಂತ್ರಿ ಯಾರಪ್ಪಾ? ಖರ್ಗೆ ಸಾಹೇಬ್ರಪ್ಪಾ’ ಎಂದು ಘೋಷಣೆ ಕೂಗಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಫಲಿತಾಂಶದ ವಿವರ
 
ವಿಜಾಪುರ

ವಿಜಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಅವರು ಕಾಂಗ್ರೆಸ ಅಭ್ಯರ್ಥಿ ಪ್ರಕಾಶ ರಾಠೋಡ್ ಅವರನ್ನು 69,819 ಮತಗಳ ಅಂತರದಿಂದ ಸೋಲಿಸುವ ಮೂಲಕ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾದರು.

ಜಿಗಜಿಣಿಗಿ ಅವರು 4,71,757 ಮತ ಪಡೆದಿದ್ದು, ಸಮೀಪ ಪ್ರತಿಸ್ಪರ್ಥಿ ಕಾಂಗ್ರೆಸ್ ಪ್ರಕಾಶ್ ರಾಠೋಡ್ 4,01,938 ಮತ ಪಡೆದಿದ್ದಾರೆ. ಜೆಡಿಎಸ್ 57,551 ಮತ ಪಡೆದಿದ್ದು, 8,287 ‘ನೋಟಾ’ ಚಲಾವಣೆಯಾಗಿವೆ.

ಜಿಗಜಿಣಗಿ ಅವರನ್ನು ಮೂರು ಬಾರಿ ವಿಧಾನಸಭೆಗೆ ಹಾಗೂ ಎರಡು ಬಾರಿ ಲೋಕಸಭೆಗೆ ಆರಿಸುವ ಮೂಲಕ ಮತದಾರರು ಐದು ಬಾರಿ ಗೆಲುವು ತಂದುಕೊಟ್ಟಿದ್ದಾರೆ. ಜಿಗಜಿಣಗಿ ಅವರು ಚಿಕ್ಕೋಡಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಫಲಿತಾಂಶದ ವಿವರ

ರಾಯಚೂರು

ರಾಯಚೂರು ಲೊಕಸಭಾ ಕ್ಷೇತ್ರದಲ್ಲಿ 13,175 ‘ನೋಟಾ’ ಮತಚಲಾಯಿಸಿರುವ ಮತದಾರರು ಯಾವ ಅಭ್ಯರ್ಥಿಯೂ ಸೂಕ್ತರಲ್ಲ  ಎಂದು ಹೇಳಿದ್ದರೂ, 1499 ಮತಗಳ ಅಂತರದಿಂದ ಕಾಂಗ್ರೆಸ್ ನ ಬಿ.ವಿ. ನಾಯಕ್ ಅವರು ಗೆಲುವು ಸಾಧಿಸಿದ್ದಾರೆ.

ಬಿ.ವಿ. ನಾಯಕ್ 4,43,659 ಮತ ಗಳಿಸಿದ್ದು, ಬಿಜೆಪಿಯ ಅರಕೇರಾ ಶಿವನಗೌಡ ನಾಯಕ್ 4,42,160 ಮತ ಗಳಿಸಿದ್ದಾರೆ. ಜೆಡಿಎಸ್ 21,706 ಮತ ಗಳಿಸಲಷ್ಟೇ ಶಕ್ತವಾಗಿದೆ. ನಾಲ್ಕನೇ ಸ್ಥಾನವನ್ನು ‘ನೋಟಾ’ ಪಡೆದುಕೊಂಡಿದೆ. ಅಳಿಯ ಮಾವನ ಪೈಪೋಟಿಗೆ ಈ ಕ್ಷೇತ್ರ ಸಾಕ್ಷಿಯಾಗಿತ್ತು.

ಫಲಿತಾಂಶದ ವಿವರ

ಬೀದರ್

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಪೈಪೊಟಿಗಿಳಿದಿದ್ದ ಕಾಂಗ್ರೆಸ್ ಹಿರಿಯ ಧುರೀಣ ಎನ್. ಧರ್ಮ ಸಿಂಗ್ ಅವರನ್ನು 92,222 ಮತಗಳ ಅಂತರದಿಂದ ಹಿಂದಿಕ್ಕಿ ಬಿಜೆಪಿಯ ಭಗವಂತ ಖೂಬಾ ಅಭೂತಪೂರ್ವ ಜಯ ಸಾಧಿಸಿದರು.

ಭಗವಂತ ಖೂಬಾ  4,59,290 ಮತ ಗಳಿಸಿದರೆ, ಧರ್ಮ ಸಿಂಗ್ 3,67,068 ಮತ ಗಳಿಸಿದರು. 50161 ಮತ ಗಳಿಸಿರುವ ಜೆಡಿಎಸ್ ನ ಬಂಡೆಪ್ಪ ಕಾಶೆಂಪೂರ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
2817 ‘ನೋಟಾ’ ಚಲಾವಣೆಯಾಗಿವೆ. 

ಫಲಿತಾಂಶದ ವಿವರ  

ಬಳ್ಳಾರಿ

ಬಳ್ಳಾರಿ ಲೋಕ ಸಭಾ ಕ್ಷೇತ್ರದಲ್ಲಿ ಪಕ್ಷ ಬದಲಿಸಿ ಮತ್ತೆ ಬಿಜೆಪಿಗೆ ಮರಳಿದ್ದ ಶ್ರಿ ರಾಮುಲು ಅವರು 85144 ಮತಗಳ ಅಂತರದ ಜಯ ಗಳಿಸುವ ಮೂಲಕ ಮತ್ತೆ ತಮ್ಮ ಬಿಜೆಪಿಯಲ್ಲಿ ತಮ್ಮ ಅಸ್ಥಿತ್ವ ಉಳಿಸಿಕೊಂಡರು.

ಸಮೀಪ ಸ್ಪರ್ಧಿ ಕಾಂಗ್ರೆಸ್ ನ  ಎನ್.ವೈ.ಹನುಮಂತಪ್ಪ ಅವರು 449262 ಮತ ಗಳಿಸಿದರೆ, ಶ್ರೀರಾಮುಲು 534406 ಮತ ಗಳಿಸಿದರು. ಜೆಡಿಎಸ್್ 12613 ಮತ ಪಡೆದು ನಂತರದ ಸ್ಥಾನದಲ್ಲಿದೆ. ಬಿಸಿಲಿಗೆ ಬೆಂದ ಜನಕ್ಕೆ ಅಭ್ಯರ್ಥಿಗಳ ಆಯ್ಕೆಯೂ ತಲೆ ಬಿಸಿ ಎನಿಸಿ 11,320 ಮಂದಿ ‘ನೋಟಾ’ ಚಲಾಯಿಸಿದ್ದಾರೆ.

ಕೂಡ್ಲಿಗಿ, ವಿಜಯನಗರ, ಕಂಪ್ಲಿ ಕ್ಷೇತ್ರಗಳಲ್ಲಿ ಮತದಾರರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್ ನ ಪಿಟಿ ಪರಮೇಶ್ವರ ನಾಯ್ಕ ಅವರ ಕ್ಷೇತ್ರ ಹೂವಿನ ಹಡಗಲಿ, ಅನಿಲ್ ಲಾಡ ಪ್ರತಿನಿಧಿಸಿದ್ದ ಕ್ಷೇತ್ರ ಬಳ್ಳಾರಿ ನಗರದಲ್ಲಿಯೂ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ.

ಫಲಿತಾಂಶದ ವಿವರ

ಕೊಪ್ಪಳ

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬಸವರಾಜ ಹಿಟ್ನಾಳ ಅವರಿಗಿಂತ 32759 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿ ಬಹುತೇಕ ವಿಜಯ ಮಾಲೆ ಒಲಿಸಿಕೊಂಡಿರುವ ಬಿಜೆಪಿಯ ಕರಡಿ ಸಂಗಣ್ಣಾ ಅಮರಪ್ಪ ಅವರಿಗೆ ಅಧಿಕೃತ ವಾಗಿ ಗೆಲುವು ಘೋಷಿಸಿಲಸಾಗಿಲ್ಲ.

ಒಂದು ಮತಯಂತ್ರದಲ್ಲಿನ ತಾಂತ್ರಿಕ ದೋಷದಿಂದಾಗಿ ಅದರಲ್ಲಿನ ಮತಗಳ ಎಣಿಕೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಅಧಿಕೃತವಾಗಿ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.

ಕರಡಿ ಸಂಗಣ್ಣಾ ಅಮರಪ್ಪ 486493 ಮತ ಪಡೆದಿದ್ದು, ಕಾಂಗ್ರೆಸ್ ನ ಬಸವರಾಜ್ ಹಿಟ್ನಾಳ 453734 ಮತ ಪಡೆದಿದ್ದಾರೆ. 12957 ಮತ ದಾಖಲಿಸುವ ಮೂಲಕ ಮತದಾರರು ‘ನೋಟಾ’ಕ್ಕೆ ಮೂರನೇ ಸ್ಥಾನ ನೀಡಿದ್ದಾರೆ.

ಫಲಿತಾಂಶದ ವಿವರ

ತುಮಕೂರು 

ಅನುಭವಿ, ನುರಿತ ರಾಜಕಾರಣಿಗಳ ಸ್ಪರ್ಧೆ­ಯಿಂದ ತುಮಕೂರು ಲೋಕಸಭೆ ಕ್ಷೇತ್ರ ಗಮನ ಸೆಳೆದಿದೆ. ಏಳು ಸಲ ಸ್ಪರ್ಧಿಸಿ ನಾಲ್ಕು ಬಾರಿ ಲೋಕಸಭೆ ಮೆಟ್ಟಿಲೇರಿದ್ದ ಬಿಜೆಪಿಯ ಜಿ.ಎಸ್.ಬಸವರಾಜ್ ಅವರಿಗೆ ಈ ಬಾರಿ ಮತದಾರ ಕೈ ಹಿಡಿದಿಲ್ಲ.  ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ 429868 ಮತಗಳಿಂದ ಜಯಸಾಧಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಸೀಟು ಸಿಗದೆ ಅಸಮಾಧಾನಗೊಂಡು ಜೆಡಿಎಸ್ ಸೇರಿದ್ದ ಎ. ಕೃಷ್ಣಪ್ಪ ತೀವ್ರ ಪೈಪೋಟಿ ನೀಡುವ ನಿರೀಕ್ಷೆ ಮಾಡಲಾಗಿತ್ತು. ಆದರೆ 25,8683 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಫಲಿತಾಂಶದ ವಿವರ
 

ಬೆಂಗಳೂರು ಗ್ರಾಮಾಂತರ

ದೇಶಕ್ಕೆ ಮತ್ತು ರಾಜ್ಯಕ್ಕೆ ಘಟಾನುಘಟಿ ನಾಯಕರನ್ನೇ ಪರಿಚಯಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು ಭೌಗೋಳಿಕವಾಗಿ ಮೆಟ್ರೋಪಾಲಿಟನ್‌ ಮತ್ತು ಗ್ರಾಮೀಣ ಪ್ರದೇಶದ ಮಿಶ್ರ ಸಂಸ್ಕೃತಿಯನ್ನು ಹುದುಗಿ­ಸಿ­ಕೊಂಡಿದೆ.

ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ 652723 ಮತಗಳನ್ನು ಪಡೆದು ಈ ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ. ಸಮೀಪ ಸ್ಪರ್ಧಿ ಬಿಜೆಪಿಯ ಮುನಿರಾಜು ಗೌಡ ಪಿ ಅವರು 421243 ಮತಗಳನ್ನು ಪಡೆದು 231480 ಮತಗಳ ಅಂತರದಿಂದ ಸೋತಿದ್ದಾರೆ.

ಫಲಿತಾಂಶದ ವಿವರ

ಬೆಂಗಳೂರು ಉತ್ತರ

ಈ ಕ್ಷೇತ್ರ ಹೆಚ್ಚು ಸಲ ಹೊರಗಿನಿಂದ ಬಂದವರನ್ನೇ ಸಂಸತ್ತಿಗೆ ಕಳುಹಿಸಿದ ಇತಿಹಾಸ ಹೊಂದಿದೆ. ಈ ಬಾರಿಯೂ ಇತಿಹಾಸ ಮರುಕಳಿಸಿದ್ದು, ಬಿಜೆಪಿ ಅಭ್ಯರ್ಥಿ ಡಿ ವಿ ಸದಾನಂದಗೌಡ ಅವರನ್ನು ಮತದಾರರು ಆರಿಸಿದ್ದಾರೆ.

ಸದಾನಂದಗೌಡ  (718326 ಮತ) ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ (488562ಮತ) ವಿರುದ್ಧ  229764 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಮ್ಯಾಥ್ಯೂ 28107 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಫಲಿತಾಂಶದ ವಿವರ

ಬೆಂಗಳೂರು ಕೇಂದ್ರ

ಕ್ಷೇತ್ರಗಳ ಪುನರ್‌ ವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ರಾಜಧಾನಿಯ ಹೃದಯ ಭಾಗದ ಜೊತೆಗೆ ಹೊರವಲಯದ ಗ್ರಾಮೀಣ ಪ್ರದೇಶವನ್ನೂ ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಈ ಕ್ಷೇತ್ರದ ಮೊದಲ ಸಂಸದ ಎಂಬ ಹೆಗ್ಗಳಿಕೆ ಹೊಂದಿರುವ ಬಿಜೆಪಿಯ ಪಿ.ಸಿ.­ಮೋಹನ್‌ ಅವರನ್ನು ಮತದಾರರು ಪುನರಾಯ್ಕೆ ಮಾಡಿದ್ದಾರೆ.

ಮೋಹನ್ 557130 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ 419630 ಮತಗಳನ್ನಷ್ಟೇ ಪಡೆದುಕೊಂಡರು. 137500 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಫಲಿತಾಂಶದ ವಿವರ

ಬೆಂಗಳೂರು ದಕ್ಷಿಣ

ಈ ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು ಕಣದಲ್ಲಿದ್ದರೂ, ನೇರ ಹಣಾಹಣಿ ಇದ್ದಿದ್ದು ಬಿಜೆಪಿ ಅಭ್ಯರ್ಥಿ ಅನಂತಕುಮಾರ್‌  ಹಾಗೂ ರಾಜಕೀಯ ರಂಗಕ್ಕೆ ಈಗಷ್ಟೇ ಕಾಲಿರಿಸಿದ ಹೊಸ ಮುಖ ನಂದನ್ ನಿಲೇಕಣಿ ಮಧ್ಯೆ.

ಈ ನಡುವೆಯೂ ಸತತ ಆರನೇ ಬಾರಿಗೆ ಗೆಲುವು ಸಾಧಿಸುವಲ್ಲಿ ಅನಂತಕುಮಾರ್ ಯಶಸ್ವಿಯಾಗಿದ್ದಾರೆ. 633816 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ (405241 ಮತ) ಅವರಿಗಿಂತ 228575 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಫಲಿತಾಂಶದ ವಿವರ   

ಚಿಕ್ಕಬಳ್ಳಾಪುರ 

ಘ‍ಟಾನುಘಟಿ ರಾಜಕಾರಣಿ ಎದುರು ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಟಿ ಅದೃಷ್ಟ ಪರೀಕ್ಷಿಸಲು ಸ್ಪರ್ಧಿಸಿ ಸೋತ ಕ್ಷೇತ್ರ ಚಿಕ್ಕಬಳ್ಳಾಪುರ. ಈ ಭಾರಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ 424800 ಮತಗಳನ್ನು ಪಡೆದು ತಮ್ಮ ಸಮೀಪ ಸ್ಪರ್ಧಿ ಬಿಜೆಪಿಯ ಬಚ್ಚೇಗೌಡ ಅವರನ್ನು ಮಣಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ 346339 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಫಲಿತಾಂಶದ ವಿವರ

ಕೋಲಾರ

ಕೋಲಾರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದೇ ಕರೆಯಬಹುದು. 1951ರಿಂದ ಇದುವರೆಗೆ ಲೋಕಸಭೆಗೆ ನಡೆದಿ­ರುವ 15 ಚುನಾವಣೆಗಳಲ್ಲಿ ಕಾಂಗ್ರೆಸ್‌ ಭರ್ತಿ 14 ಚುನಾವಣೆ­ಗಳಲ್ಲಿ ಗೆಲುವು ಸಾಧಿಸಿತ್ತು. ಇದೀಗ ಈ ಬಾರಿಯೂ ಕೆ. ಎಚ್. ಮುನಿಯಪ್ಪ 418926 ಮತಗಳನ್ನು ಪಡೆದು ವಿಜಯೋತ್ಸವ ಆಚರಿಸಿದ್ದಾರೆ.

ಜೆಡಿಎಸ್ ಪಕ್ಷದ ಕೋಲಾರ ಕೇಶವ 371076 ಮತಗಳನ್ನು ಪಡೆದರೆ, ಬಿಜೆಪಿಯ ಇ. ಎಂ ನಾರಾಯಣ ಸ್ವಾಮಿ 267322 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿ ಉಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.