
‘ಗತವೈಭವ’
ಗತವೈಭವ
ಸಿಂಪಲ್ ಸುನಿ ನಿರ್ದೇಶನದ ಚಿತ್ರವಿದು. ಯುವ ನಟ ದುಷ್ಯಂತ್‌ಗೆ ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ. ನಟ ಸುದೀಪ್ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಹಾರೈಸಿದ್ದರು.
‘ಈ ಚಿತ್ರ ಬಿಡುಗಡೆಯಾದ ಬಳಿಕ ಮೌತ್ ಪಬ್ಲಿಸಿಟಿ ತೆಗೆದುಕೊಂಡು ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ. ಚಿತ್ರಕ್ಕೆ ಹಾಕಿರುವ ಶ್ರಮ ದೊಡ್ಡದಿದೆ. ಆದರೆ ಸ್ಟಾರ್ ವ್ಯಾಲ್ಯೂ ಕಮ್ಮಿ ಇತ್ತು. ಚಿತ್ರರಂಗದ ಗಣ್ಯರಾದ ಶಿವಣ್ಣ, ಸುದೀಪ್ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಚಿತ್ರ ಉತ್ತಮ ಪ್ರಾರಂಭ ಪಡೆಯುತ್ತದೆ ಎಂಬ ನಂಬಿಕೆಯಿದೆ’ ಎಂದಿದ್ದಾರೆ ಸುನಿ.
ಸುಧಾ ಬೆಳವಾಡಿ, ಕಿಶನ್ ಬಿಳಗಲಿ, ಕೃಷ್ಣ ಹೆಬ್ಬಾಳೆ, ಕೃಷ್ಣ ಜೋರಾಪುರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, ವಿಲಿಯಂ ಡೇವಿಡ್ ಛಾಯಾಚಿತ್ರಗ್ರಹಣವಿದೆ. ದೀಪಕ್ ಹಾಗೂ ಸಿಂಪಲ್ ಸುನಿ ಚಿತ್ರ ನಿರ್ಮಾಣ ಮಾಡಿದ್ದಾರೆ.
ಉಡಾಳ
ಯೋಗರಾಜ್ ಭಟ್ಟರ ಗರಡಿಯಲ್ಲಿ ಪಳಗಿದ ಅಮೋಲ್ ಪಾಟೀಲ್ ನಿರ್ದೇಶನದ ಚಿತ್ರವಿದು. ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ನಿರ್ಮಾಣವಿದೆ. ‘ಪದವಿಪೂರ್ವ’ ಖ್ಯಾತಿಯ ಪೃಥ್ವಿ ಶಾಮನೂರಿಗೆ ಹೃತಿಕಾ ಶ್ರೀನಿವಾಸ್ ಜೋಡಿಯಾಗಿದ್ದಾರೆ.
‘ನಗಿಸುವುದು ಅಷ್ಟು ಸುಲಭವಲ್ಲ. ಆದರೆ ನಿರ್ದೇಶಕ ಅಮೋಲ್ ಪಾಟೀಲ್, ನಾಯಕ ಪೃಥ್ವಿ ಶಾಮನೂರು ಸೇರಿದಂತೆ 20 ಜನ ಕಲಾವಿದರ ತಂಡವನ್ನಿಟ್ಟುಕೊಂಡು ಈ ಚಿತ್ರದ ಮೂಲಕ ನಗುವಿನ ರಸದೌತಣವನ್ನೇ ಬಡಿಸಿದ್ದಾರೆ’ ಎಂದಿದ್ದಾರೆ ಯೋಗರಾಜ್ ಭಟ್.
‘ಉತ್ತರ ಕರ್ನಾಟಕದ ಸೊಗಡನ್ನು ಊಟದಲ್ಲಿ ಉಪ್ಪಿನಕಾಯಿ ರೀತಿ ಕೆಲವು ಚಿತ್ರಗಳಲ್ಲಿ ಬಳಸಿಕೊಳ್ಳಲಾಗಿತ್ತು. ಆದರೆ ನಮ್ಮ ಚಿತ್ರ ಉತ್ತರ ಕರ್ನಾಟಕದ ಫುಲ್ ಮೀಲ್ಸ್. ಇಡೀ ಕಥೆ ವಿಜಯಪುರದಲ್ಲೇ ನಡೆಯುತ್ತದೆ’ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಚೇತನ್ ಡ್ಯಾವಿ ಸಂಗೀತ, ಶಿವಶಂಕರ ಛಾಯಾಚಿತ್ರಗ್ರಹಣ, ಮಧು ತುಂಬಕೆರೆ ಸಂಕಲನವಿದೆ. ಬಲ ರಾಜವಾಡಿ, ಗೋವಿಂದೇಗೌಡ ಮುಂತಾದವರು ಚಿತ್ರದಲ್ಲಿದ್ದಾರೆ.
kite ಬ್ರದರ್ಸ್
ವಿರೇನ್ ಸಾಗರ್ ಬಗಾಡೆ ನಿರ್ದೇಶನದ ಚಿತ್ರವಿದು. ಭಜರಂಗ ಸಿನಿಮಾ ಲಾಂಛನದಲ್ಲಿ ಮಂಜುನಾಥ್ ಬಿ.ಎಸ್, ರಜನಿಕಾಂತ್ ರಾವ್ ಹಾಗೂ ಮಂಜುನಾಥ್ ಬಗಾಡೆ ಬಂಡವಾಳ ಹೂಡಿದ್ದಾರೆ.
‘ಮಕ್ಕಳ ಚಿತ್ರವಾದರೂ, ಎಲ್ಲಾ ವಯಸ್ಸಿನವರು ನೋಡಬೇಕಾದ ಉತ್ತಮ ಸಂದೇಶವಿರುವ ಚಿತ್ರ. ಹಳೆಯ ಸರ್ಕಾರಿ ಶಾಲೆಗಳನ್ನು ಸರ್ಕಾರವೇ ದುರಸ್ತಿ ಮಾಡಿಸಲಿ ಎಂದು ಸಮಾಜ ಕಾಯಬಾರದು. ಆ ಶಾಲೆಯಲ್ಲಿ ಕಲಿತವರು ಸಶಕ್ತರಾದ ಬಳಿಕ ಶಾಲೆಯ ಬೆಂಬಲಕ್ಕೆ ನಿಲ್ಲಬೇಕು ಎಂಬ ಸದಾಶಯ ಚಿತ್ರದಲ್ಲಿದೆ. ಚಿತ್ರದಲ್ಲಿ ಸಹೋದರರಿಬ್ಬರು ಗಾಳಿಪಟ ಉತ್ಸವದಲ್ಲಿ ಭಾಗವಹಿಸಿ ತಮ್ಮೂರಿನ ಶಾಲೆಯನ್ನು ದುರಸ್ತಿ ಮಾಡುತ್ತಾರೆ’ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಪ್ರಣಿಲ್ ನಾಡಗೀರ್, ಸಮರ್ಥ ಆಶಿ, ವಿನೋದ್ ಬಗಾಡೆ, ಅನಂತ ದೇಶಪಾಂಡೆ, ಪ್ರಭು ಹಂಚಿನಾಳ, ಶ್ರೇಯಾ ಹರಿಹರ ಮುಂತಾದವರು ಅಭಿನಯಿಸಿದ್ದಾರೆ. ಅನೀಶ್ ಚೆರಿಯನ್ ಸಂಗೀತ, ಅಶೋಕ್ ಕಶ್ಯಪ್ ಛಾಯಾಚಿತ್ರಗ್ರಹಣವಿದೆ.
ಪ್ರೇಮಂ ಮಧುರಂ ಪ್ರೇಮಂ ಅಮರಂ
ಬಹುತೇಕ ಹೊಸಬರಿಂದಲೇ ಕೂಡಿರುವ ಚಿತ್ರವಿದು. ಗಾಂಧಿ ಎ.ಬಿ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶಿಸಿರುವುದರ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ರೂಬಿ ಕ್ರಿಯೇಶನ್ಸ್ ಅಡಿಯಲ್ಲಿ ಅರಗೊಂಡ ಶೇಖರ್‌ರೆಡ್ಡಿ ನಿರ್ಮಾಣ ಮಾಡಿದ್ದಾರೆ.
‘ಸಿನಿಮಾವು ಪ್ರಸಕ್ತ ಯುವಜನತೆಗೆ ಕನೆಕ್ಟ್ ಆಗುವ ಸನ್ನಿವೇಶಗಳನ್ನು ಹೊಂದಿದೆ. ಪ್ರತಿಯೊಬ್ಬರ ಬದುಕಲ್ಲಿ ಪ್ರೀತಿ, ಯಶಸ್ಸು ಇರುತ್ತದೆ. ಜತೆಗೆ ಸೋಲು ಕೂಡ. ಶಾಲೆ, ಕಾಲೇಜು ದಿನಗಳಲ್ಲಿ ನಮಗಾದ ಒಂದಷ್ಟು ಅನುಭವಗಳನ್ನೇ ಚಿತ್ರಕಥೆಯಾಗಿಸಿದ್ದೇವೆ’ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಐಶ್ವರ್ಯ ದಿನೇಶ್, ಅನುಷಾ ಜೈನ್ ನಾಯಕಿಯರು. ಸಿಹಿಕಹಿ ಚಂದ್ರು, ರಾಜೇಶ್ವರಿ, ಲಪಂಗ್ ರಾಜ, ಅನೂಪ್ ಅಗಸ್ತ್ಯ ಮುಂತಾದವರು ನಟಿಸಿದ್ದಾರೆ. ಮೂರು ಹಾಡುಗಳಿಗೆ ವಿಶಾಲ್ ಆಲಾಪ ಸಂಗೀತ ಸಂಯೋಜಿಸಿದ್ದಾರೆ. ಮಂಜುನಾಥ ಹೆಗಡೆ ಛಾಯಾಚಿತ್ರಗ್ರಹಣ, ಸಂಜೀವ್ ಜಾಗೀರ್‌ದಾರ್ ಸಂಕಲನವಿದೆ.
ತುಳುವಿನಿಂದ ಕನ್ನಡಕ್ಕೆ ಡಬ್ ಆಗಿರುವ ರೂಪೇಶ್ ಶೆಟ್ಟಿ ನಟನೆಯ ‘ಜೈ’ ಚಿತ್ರ ಕೂಡ ಇಂದೇ ತೆರೆ ಕಾಣುತ್ತಿದೆ. ‘ಲವ್ ಒಟಿಪಿ’, ‘ಹಿಕೋರ’ ಸೇರಿದಂತೆ ಒಟ್ಟು ಏಳು ಸಿನಿಮಾಗಳು ಈ ವಾರ ತೆರೆಯಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.