ADVERTISEMENT

Room Boy kannada Movie | ವಿಭಿನ್ನ ಕಥೆಗಳನ್ನು ಪ್ರಯತ್ನಿಸುವೆ: ಲಿಖಿತ್‌ ಸೂರ್ಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 0:30 IST
Last Updated 12 ಸೆಪ್ಟೆಂಬರ್ 2025, 0:30 IST
<div class="paragraphs"><p>ಲಿಖಿತ್‌ ಸೂರ್ಯ</p></div>

ಲಿಖಿತ್‌ ಸೂರ್ಯ

   
ಲಿಖಿತ್‌ ಸೂರ್ಯ ನಟನೆಯ ‘ರೂಮ್‌ಬಾಯ್‌’ ಚಿತ್ರ ಇಂದು ತೆರೆ ಕಾಣುತ್ತಿದೆ. ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ತಮ್ಮ ಈ ಪಯಣದ ಏರಿಳಿತಗಳ ಬಗ್ಗೆ ಮಾತನಾಡಿದ್ದಾರೆ.

‘ಇದೊಂದು ಪ್ರಯೋಗಾತ್ಮಕ ಸಿನಿಮಾ. ಸೈಕಾಲಜಿಕಲ್‌ ಇನ್ವೆಸ್ಟಿಗೇಷನ್‌ ಡ್ರಾಮಾ. ಒಂದು ಘಟನೆ ನಡೆಯುತ್ತದೆ. ಅದನ್ನು ಹುಡುಕುತ್ತ ಹೋಗುವ ಕಥೆ. ಅಶ್ವಿನಿ ಹಾಸನ್‌, ವರ್ಧನ್‌ ತೀರ್ಥಹಳ್ಳಿ, ವಜ್ರಾಂಗ್‌ ಶೆಟ್ಟಿ ಮತ್ತಿತರರು ಇದ್ದಾರೆ. ಒಂದು ಸಿಸಿಟಿವಿ ಕ್ಯಾಮರಾದಲ್ಲಿ ಫೂಟೇಜ್‌ ಸಿಗುತ್ತದೆ. ಅದನ್ನು ಬೆನ್ನತ್ತಿ ಹೋಗುವ ಕಥೆ. ನಾನು ರೂಮ್‌ಬಾಯ್‌ ಆಗಿರುತ್ತೇನೆ. ನನಗೆ ಏನಾಗುತ್ತದೆ? ಅದಕ್ಕೆ ಪ್ರತಿಕ್ರಿಯೆ ಏನು? ನನ್ನ ಬದುಕಿನಲ್ಲಿ ಅದು ಹೇಗೆ ತಿರುವು ನೀಡುತ್ತದೆ ಎಂಬಿತ್ಯಾದಿ ಅಂಶಗಳ ಸುತ್ತ ಕಥೆ ಸಾಗುತ್ತದೆ’ ಎಂದು ಮಾತು ಪ್ರಾರಂಭಿಸಿದರು ಲಿಖಿತ್‌.

‘ಇದರಲ್ಲಿ ಹೆಚ್ಚೇನು ಬಹಿರಂಗಪಡಿಸುವಂತದ್ದಿಲ್ಲ. ಯಾವುದೇ ಒಂದು ಘಟನೆ ನಡೆದಾಗ ತನಿಖೆ ವೇಳೆ ಸಿಸಿಟಿವಿ ಕ್ಯಾಮರಾ ಫೂಟೇಜ್‌ ಪರಿಶೀಲಿಸುವುದು ಸಾಮಾನ್ಯ. ಅದಷ್ಟನ್ನೇ ಕಥೆಯಾಗಿ ಮನವರಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅದರ ಸುತ್ತಲೂ ಒಂದಷ್ಟು ಘಟನೆಗಳನ್ನು ಹೆಣೆದಿದ್ದೇವೆ. ಚಿತ್ರ ಶುರುವಾಗಿ ಮೂರು ವರ್ಷಗಳಾಗಿತ್ತು. ವಿಎಫ್‌ಎಕ್ಸ್‌ ಮತ್ತಿತರ ಕಾರಣಗಳಿಂದಾಗಿ ಚಿತ್ರ ವಿಳಂಬವಾಗಿದೆ’ ಎಂದರು.

ADVERTISEMENT

‘ಲೈಫ್‌ ಸೂಪರ್‌’ ಚಿತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟ ಲಿಖಿತ್‌ಗಿದು ಐದನೇ ಸಿನಿಮಾ. ‘ಆಪರೇಷನ್‌ ನಕ್ಷತ್ರ’ ಅವರ ಹಿಂದಿನ ಕನ್ನಡ ಸಿನಿಮಾ. ಎರಡು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಕಲ್ಯಾಣ ಮಸ್ತು’ ಈಗಾಗಲೇ ತೆರೆ ಕಂಡಿದ್ದು, ‘ರಾಮಾಪುರಂ’ ಬಿಡುಗಡೆಗೆ ಸಿದ್ಧವಿದೆ. ಚಿತ್ರರಂಗದಲ್ಲಿ ದಶಕ ಪೂರೈಸಿರುವ ಇವರು ಕಿರುಚಿತ್ರಗಳ ಮೂಲಕ ಸಿನಿಪಯಣ ಪ್ರಾರಂಭಿಸಿದರು.

‘ಒಂದು ತಮಿಳು ಸಿನಿಮಾದ ಚರ್ಚೆ ನಡೆಯುತ್ತಿದೆ. ‘ರೂಮ್‌ಬಾಯ್‌’ ಬೇರೆ ಭಾಷೆಗಳಿಗೆ ಡಬ್‌ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಸಿನಿಮಾವನ್ನು ನಾನೇ ನಿರ್ಮಿಸಿದ್ದೇನೆ. ಒಳ್ಳೆ ವಿಷಯ ಸಿಕ್ಕರೆ ಕನ್ನಡದಲ್ಲಿ ಇನ್ನೊಂದು ಚಿತ್ರ ಮಾಡಬೇಕೆಂದಿರುವೆ. ನಾನು ಯಥಾಪ್ರಕಾರದ, ಸಿದ್ಧಸೂತ್ರದ ಕಥೆಗಳನ್ನು ಬಿಟ್ಟು ವಿಭಿನ್ನವಾಗಿರುವುದನ್ನೇ ಪ್ರಯತ್ನಿಸುವೆ. ಆ ನಿಟ್ಟಿನಲ್ಲಿ ಕಥೆಗಳ ಹುಡುಕಾಟ ಮುಂದುವರಿದೆ’ ಎಂದರು.

‘ನಮ್ಮ ಕುಟುಂಬದಲ್ಲಿ ಯಾರೂ ಸಿನಿಮಾಗೆ ಸಂಬಂಧಪಟ್ಟವರು ಇರಲಿಲ್ಲ. ನಿರ್ದೇಶಕನಾಗಬೇಕೆಂದು ಬಂದೆ. ಸಾಕಷ್ಟು ಸ್ಕ್ರಿಪ್ಟ್‌ ಮಾಡಿಕೊಂಡು ಸಿನಿಮಾವಾಗುತ್ತಿರಲಿಲ್ಲ. ಹೀಗಾಗಿ ನಾನೇ ಚಿತ್ರ ನಿರ್ಮಾಣಕ್ಕೂ ಇಳಿದೆ. ಇದರ ಜತೆಗೆ ನನ್ನದೇ ಬಿಸಿನೆಸ್‌ ಕೂಡ ಇದೆ. ಸಿನಿಪಯಣ ಚೆನ್ನಾಗಿದೆ. ಆದರೆ ಸರಿಯಾದ ಯಶಸ್ಸು ಸಿಕ್ಕಿಲ್ಲ. ಅದನ್ನು ಪಡೆಯಬೇಕೆಂದು ಯತ್ನ ಮಾಡುತ್ತಿದ್ದೇನೆ. ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ಮಾಪಕರಿಗೆ ಮನವರಿಕೆ ಮಾಡುವುದು ಕಷ್ಟ. ಹೀಗಾಗಿ ಇಂಥ ಸಿನಿಮಾಗಳಲ್ಲಿ ನಾವೇ ರಿಸ್ಕ್‌ ಕೂಡ ತೆಗೆದುಕೊಳ್ಳಬೇಕು. ‘ರೂಮ್‌ಬಾಯ್‌’ ಭಿನ್ನ ಕಂಟೆಂಟ್‌ ಸಿನಿಮಾ ಬೇಕೆಂದು ನೋಡುವವರಿಗೆ ಖಂಡಿತ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.