
ಹಕ್ಕಿ ಜ್ವರ
2023–24ರಲ್ಲಿ ಅಮೆರಿಕ ಸೇರಿದಂತೆ ವಿಶ್ವದ 108 ದೇಶಗಳಲ್ಲಿ ಹಕ್ಕಿಜ್ವರ ಅವಾಂತರ ಸೃಷ್ಟಿಸಿತ್ತು. ಕೋಟ್ಯಂತರ ಜೀವಿಗಳು ಸೋಂಕಿಗೆ ಬಲಿಯಾಗಿವೆ; ತೀರಾ ಇತ್ತೀಚೆಗೆ ವ್ಯಕ್ತಿಯೊಬ್ಬರೂ ಸತ್ತಿದ್ದಾರೆ. ಭಾರತದಲ್ಲಿಯೂ ಸೋಂಕು ಕಾಣಿಸಿಕೊಂಡಿದ್ದು, ಮಹಾರಾಷ್ಟ್ರ, ರಾಜಸ್ಥಾನದಲ್ಲಿ ಹಲವು ಪ್ರಾಣಿ–ಪಕ್ಷಿಗಳು ಸಾವಿಗೀಡಾಗಿವೆ. ಹಕ್ಕಿಜ್ವರದಿಂದ ಮನುಷ್ಯರಲ್ಲಿ ಸಾಂಕ್ರಾಮಿಕ ಹರಡುವ ಅಪಾಯ ಇಲ್ಲ. ಆದರೆ, ಅದು 2025ರಲ್ಲಿ ಜೀವಜಗತ್ತಿಗೆ ಅತಿ ದೊಡ್ಡ ಬೆದರಿಕೆ ಒಡ್ಡಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಉದಗೀರ್‌ನಲ್ಲಿ ಜನವರಿ 13ರಂದು 28 ಕಾಗೆಗಳು ಸತ್ತುಬಿದ್ದವು. 15ರಂದು ಮತ್ತೆ ಐದು ಕಾಗೆಗಳು ಸತ್ತವು. ನೋಡನೋಡುತ್ತಲೇ ಕೆಲವೇ ದಿನಗಳ ಅಂತರದಲ್ಲಿ ಅಲ್ಲಿ ಒಟ್ಟು 51 ಕಾಗೆಗಳು ಸತ್ತವು. ತಕ್ಷಣವೇ ಎಚ್ಚೆತ್ತುಕೊಂಡ ಅಧಿಕಾರಿಗಳು, ಕಾಗೆಗಳ ದೇಹದ ಮಾದರಿಗಳನ್ನು ಪುಣೆಯ ಪ್ರಾದೇಶಿಕ ರೋಗ ಪತ್ತೆ ಪ್ರಯೋಗಾಲಯ ಮತ್ತು ಭೋಪಾಲ್‌ನ ಐಸಿಎಆರ್–ರಾಷ್ಟ್ರೀಯ ಅಧಿಕ ಸುರಕ್ಷತೆಯ ಪ್ರಾಣಿ ರೋಗಗಳ ಸಂಸ್ಥೆಗೆ (ಎನ್‌ಐಎಚ್‌ಎಸ್‌ಎಡಿ) ಕಳುಹಿಸಿದರು. ಜನವರಿ 18ರಂದು ವರದಿ ಬಂತು; ಹಕ್ಕಿಜ್ವರ (ಎಚ್5ಎನ್1) ತಗುಲಿದ್ದರಿಂದ ಕಾಗೆಗಳು ಮೃತಪಟ್ಟಿದ್ದವು ಎಂದು ವರದಿ ತಿಳಿಸಿತು.
ಭಾರತದಲ್ಲಿ ಕಾಗೆಗಳಿಗೆ 2021ರಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ನಾಲ್ಕು ವರ್ಷಗಳ ನಂತರ ಈಗ ಮತ್ತೆ ಎಚ್5ಎನ್1 ಕಾಣಿಸಿಕೊಂಡಿದೆ. ದೇಶದ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಕಳೆದ ತಿಂಗಳು ನಾಗ್ಪುರದ ಬಾಳಾಸಾಹೇಬ್ ಠಾಕ್ರೆ ಅಂತರರಾಷ್ಟ್ರೀಯ ಮೃಗಾಲಯದಲ್ಲಿ ಮೂರು ಹುಲಿ ಮತ್ತು ಒಂದು ಚಿರತೆ ಮೃತಪಟ್ಟಿದ್ದವು. ಅದಕ್ಕೆ ಹಕ್ಕಿ ಜ್ವರವೇ ಕಾರಣ ಎಂದು ಈ ತಿಂಗಳ ಮೊದಲ ವಾರದಲ್ಲಿ ವರದಿ ಬಂದಿದೆ. ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಕೊಕ್ಕರೆ ಜಾತಿಗೆ ಸೇರಿದ 28 ವಲಸೆ ಪಕ್ಷಿಗಳು ಸಾವಿಗೀಡಾಗಿದ್ದವು. ತಕ್ಷಣವೇ ಹೆಬ್ಬಕ (ಗ್ರೇಟ್ ಇಂಡಿಯನ್ ಬಸ್ಟರ್ಡ್) ಸಂರಕ್ಷಿತ ಪ್ರದೇಶಕ್ಕೆ ಹಕ್ಕಿ ಜ್ವರವು ಹರಡದಂತೆ ತಡೆಯಲು ರಾಜಸ್ಥಾನ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
ಭಾರತದಲ್ಲಿ ಹಕ್ಕಿಜ್ವರದಿಂದಾಗಿ ಹಕ್ಕಿಗಳು, ಪ್ರಾಣಿಗಳ ಸಾವಿನ ಸುದ್ದಿಗಳು ಈಗ ಬಿತ್ತರವಾಗುತ್ತಿವೆ. ಅಮೆರಿಕವೂ ಸೇರಿದಂತೆ ಹಲವು ದೇಶಗಳಲ್ಲಿ 2023–24ರಲ್ಲಿ ಅಪಾರ ಪ್ರಮಾಣದ ಪ್ರಾಣಿ–ಪಕ್ಷಿಗಳು ಎಚ್5ಎನ್1ಗೆ ಬಲಿಯಾಗಿವೆ. ಪ್ರಪಂಚದ ಐದು ಖಂಡಗಳ 108 ದೇಶಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಫಿಲಿಪ್ಪೀನ್ಸ್‌ನಲ್ಲಿ ಬಾತುಕೋಳಿಗಳಲ್ಲಿ, ಜಪಾನ್‌ನ ಕೋಳಿಗಳಲ್ಲಿ ಕಾಣಿಸಿಕೊಂಡಿತ್ತು. ನಂತರ ವಿಯೆಟ್ನಾಂನಲ್ಲಿ ಹುಲಿಗಳಲ್ಲಿಯೂ ಕಾಣಿಸಿಕೊಂಡಿತು. ಹಕ್ಕಿಜ್ವರವು ಭಾರಿ ಅವಾಂತರ ಸೃಷ್ಟಿಸಿರುವುದು ಅಮೆರಿಕದಲ್ಲಿ. ಅಲ್ಲಿ 70 ಸಸ್ತನಿ ವರ್ಗಗಳು ಸೇರಿದಂತೆ ಸುಮಾರು 500 ಪ್ರಭೇದಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಈ ಸೋಂಕು ಕಾಣಿಸಿಕೊಂಡ ಬಹುತೇಕ ದೇಶಗಳಲ್ಲಿ ಅದು ಮತ್ತಷ್ಟು ಹರಡುವುದನ್ನು ತಡೆಯಲು ದೊಡ್ಡ ಸಂಖ್ಯೆಯಲ್ಲಿ ಪ್ರಾಣಿ–ಪಕ್ಷಿಗಳನ್ನು ನಾಶಪಡಿಸಲಾಗುತ್ತಿದೆ.
2024ರ ಡಿಸೆಂಬರ್ ಹೊತ್ತಿಗೆ ವಿಶ್ವದ ವಿವಿಧೆಡೆ 30 ಸಾವಿರ ಕೋಟಿ ಪ್ರಾಣಿ–ಪಕ್ಷಿಗಳು ಎಚ್5ಎನ್1ನಿಂದ ಸತ್ತಿವೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ವಾತಾವರಣದಲ್ಲಿನ ಬದಲಾವಣೆಗಳಿಗೆ ತಕ್ಕಂತೆ ವೈರಸ್ ರೂಪಾಂತರ ಹೊಂದುತ್ತಿದ್ದು, ವೇಗವಾಗಿ ಹರಡುತ್ತಿದೆ. ಕಾಡಿನ ಪ್ರಾಣಿ–ಪಕ್ಷಿಗಳು, ಕೋಳಿ, ಕುದುರೆ, ಹಸುಗಳಂಥ ಸಾಕು ಪ್ರಾಣಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಪ್ರಾಣಿ–ಪಕ್ಷಿಗಳ ನಡುವೆ ಅಷ್ಟೇ ಅಲ್ಲ, ಹಕ್ಕಿಜ್ವರವು ಪಕ್ಷಿಗಳಿಂದ ಮನುಷ್ಯರಿಗೂ ಹರಡಿರುವುದು ವರದಿಯಾಗಿದೆ. 2024ರ ಮಾರ್ಚ್‌ನಲ್ಲಿ ಅಮೆರಿಕದ 66 ಮಂದಿಯಲ್ಲಿ ಹಕ್ಕಿಜ್ವರ ಕಂಡುಬಂದಿದೆ. ಅವರ ಪೈಕಿ ಇದೇ ಜನವರಿ 7ರಂದು ಒಬ್ಬರು ಮೃತಪಟ್ಟಿದ್ದಾರೆ. ಲೂಸಿಯಾನದ ಮೃತ ವ್ಯಕ್ತಿಯು 65 ವರ್ಷದವರಾಗಿದ್ದು, ಅವರಿಗೆ ಹಲವು ಆರೋಗ್ಯ ಸಮಸ್ಯೆಗಳೂ ಇದ್ದವು ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಹೇಳಿದೆ.
ಎರಡು ದಶಕಗಳಲ್ಲಿ ಹಕ್ಕಿಜ್ವರದಿಂದ ಪ್ರಪಂಚದಾದ್ಯಂತ ಸುಮಾರು 500 ಮಂದಿ ಸಾವಿಗೀಡಾಗಿದ್ದು, ಅವರ ಪೈಕಿ ಬಹುತೇಕರು ಆಗ್ನೇಯ ಏಷ್ಯಾಕ್ಕೆ ಸೇರಿದವರು ಎಂದು ಪಿಟಿಐ ವರದಿ ಮಾಡಿದೆ. ಆದರೆ, ಹಕ್ಕಿಜ್ವರದ ಸೋಂಕಿನ ತೀವ್ರತೆ ಕಡಿಮೆ ಇರುತ್ತದೆ ಮತ್ತು ಮನುಷ್ಯರಿಂದ ಮನುಷ್ಯರಿಗೆ ಇದು ಹರಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ಹಕ್ಕಿಜ್ವರದಿಂದ ಕೋವಿಡ್ ರೀತಿಯ ಸಾಂಕ್ರಾಮಿಕ ಉಂಟಾಗುವ ಅಪಾಯ ಇಲ್ಲವಾದರೂ, 2025ರಲ್ಲಿ ಇದು ಜೀವಜಗತ್ತಿನ ಮಟ್ಟಿಗೆ ಬಹುದೊಡ್ಡ ಬೆದರಿಕೆಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ದಿಸೆಯಲ್ಲಿ ಲಸಿಕೆ ತಯಾರಿಯನ್ನು ತ್ವರಿತಗೊಳಿಸಬೇಕು ಎನ್ನುವ ಒತ್ತಾಯವೂ ಕೇಳಿಬಂದಿದೆ.
ಹಕ್ಕಿಜ್ವರವು ಪ್ರಾಣಿ ಪಕ್ಷಿಗಳು, ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ, ಜನರ ಆಹಾರದ ಮೇಲೂ ಪರಿಣಾಮ ಬೀರುತ್ತಿದೆ. ವಿಶ್ವದ ಕೋಟ್ಯಂತರ ಮಂದಿ ತಮ್ಮ ಪ್ರೊಟೀನ್ ಅಗತ್ಯಗಳಿಗಾಗಿ ಪ್ರಾಣಿ–ಪಕ್ಷಿ ಮಾಂಸವನ್ನು ಅವಲಂಬಿಸಿದ್ದು, ಅಂಥವರ ಮೇಲೆ ಇದು ಪರಿಣಾಮ ಬೀರುತ್ತಿದೆ ಎಂದು ಅಮೆರಿಕದ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ತಿಳಿಸಿದೆ.
ಹಕ್ಕಿ ಜ್ವರ ಎಂದರೇನು?
ಇದು ಹಕ್ಕಿಗಳನ್ನು ಬಾಧಿಸುವ ಮತ್ತು ಬಹುಬೇಗ ಹರಡುವ ಜ್ವರ. ಇದಕ್ಕೆ ಎಚ್5ಎನ್1 ವೈರಸ್ ಕಾರಣ. ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಈ ಸೋಂಕು ಕಾಣಿಸಿಕೊಳ್ಳುವುದು ಅಪರೂಪ. ಸೋಂಕಿತ ಹಕ್ಕಿಗಳ ಎಂಜಲು, ಲೋಳೆ, ಹಿಕ್ಕೆಯಲ್ಲಿ ವೈರಸ್‌ಗಳಿರುತ್ತವೆ. ಹೆಬ್ಬಾತು, ಬಾತುಕೋಳಿಯಂತಹ ಕಾಡಿನ ಕೆಲವು ಪಕ್ಷಿಗಳಿಗೆ ಸೋಂಕು ತಗುಲಿದರೂ ಅವುಗಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮವಾಗುವುದಿಲ್ಲ. ಆದರೆ, ಕೋಳಿಗಳಿಗೆ ಈ ಸೋಂಕು ಕಂಟಕವಾಗಿದ್ದು, ತೀವ್ರ ಅನಾರೋಗ್ಯದ ಜೊತೆಗೆ ಅವುಗಳ ಪ್ರಾಣಕ್ಕೂ ಕುತ್ತು ತರುತ್ತದೆ.
1996ರಲ್ಲಿ ಚೀನಾದಲ್ಲಿ ಮೊದಲು ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. 2021ರವರೆಗೂ ಇದು ಗಂಭೀರ ಕಾಯಿಲೆಯಾಗಿರಲಿಲ್ಲ. ಆ ಬಳಿಕ ವೈರಸ್ ರೂಪಾಂತರಗೊಂಡು ಪಕ್ಷಿ, ಪ್ರಾಣಿಗಳನ್ನು ತೀವ್ರವಾಗಿ ಕಾಡಲು ಆರಂಭಿಸಿದೆ.
ಹರಡುವಿಕೆ ಹೇಗೆ?
ಎಚ್5ಎನ್1 ವೈರಸ್ ಹಕ್ಕಿಗಳಿಂದ ಹಕ್ಕಿಗಳಿಗೆ ಬಹುಬೇಗ ಹರಡುತ್ತದೆ. ಹಕ್ಕಿಗಳು ವಲಸೆ ಹೋದಾಗ, ಗುಂಪಿನಲ್ಲಿ ಸೋಂಕಿತ ಹಕ್ಕಿ ಇದ್ದರೆ ಹೋದ ಸ್ಥಳದಲ್ಲಿರುವ ಹಕ್ಕಿಗಳಿಗೂ ಸುಲಭವಾಗಿ ಹರಡುತ್ತದೆ. ಸೋಂಕಿತ ಕೋಳಿ ಅಥವಾ ಹಕ್ಕಿಗಳೊಂದಿಗೆ ನೇರ ಸಂಪರ್ಕಕ್ಕೆ ಬಂದ ಮನುಷ್ಯರು ಮತ್ತು ಪ್ರಾಣಿಗಳಿಗೂ ಸೋಂಕು ಹರಡಬಹುದು. ತೇವ ಅಥವಾ ಒಣಗಿದ ಗೊಬ್ಬರದಲ್ಲಿ ಎಂಟು ವಾರಗಳವರೆಗೂ ಜೀವಿಸುವ ಸಾಮರ್ಥ್ಯ ಈ ವೈರಸ್‌ಗೆ ಇದೆ.
ಸೋಂಕಿತ ಪಕ್ಷಿ, ಪ್ರಾಣಿಗಳ ನೇರ ಸಂಪರ್ಕಕ್ಕೆ ಬಾರದೇ ಇರುವುದು, ಒಂದು ವೇಳೆ ಬಂದರೆ, ಕೈಯನ್ನು ಸಾಬೂನಿನಿಂದ ತೊಳೆದು ಸ್ವಚ್ಛಗೊಳಿಸುವುದರ ಮೂಲಕ ಈ ವೈರಸ್ ಮನುಷ್ಯನಿಗೆ ಹರಡುವುದನ್ನು ತಡೆಯಬಹುದು.
ರೋಗ ಲಕ್ಷಣ ಏನೇನು?
ಮನುಷ್ಯರಲ್ಲಿ ಸಾಮಾನ್ಯ ಜ್ವರದ ಲಕ್ಷಣಗಳೇ ಕಾಣಿಸಿಕೊಳ್ಳುತ್ತವೆ. ತೀವ್ರ ಜ್ವರ, ಚಳಿಯ ಅನುಭವ, ತಲೆ ನೋವು, ಮೈಕೈ ನೋವು, ಕೆಮ್ಮು, ಉಸಿರಾಟ ತೊಂದರೆ, ಗಂಟಲು ನೋವು, ಭೇದಿ, ಹೊಟ್ಟೆನೋವು, ಮೂಗು/ಒಸಡಿನಲ್ಲಿ ರಕ್ತ ಸ್ರಾವ, ಕೆಂಗಣ್ಣು ಬಾಧಿಸುತ್ತದೆ.
ಕೋಳಿಗಳಲ್ಲಿ ಸೋಂಕಿನ ಲಕ್ಷಣಗಳು ತಕ್ಷಣಕ್ಕೆ ಕಾಣಿಸಿಕೊಳ್ಳುವುದಿಲ್ಲ. ಅವು ಬಹುಬೇಗ ಹರಡುವುದರಿಂದ ರೋಗ ಪತ್ತೆ ಕಷ್ಟ. ಸಾಮಾನ್ಯವಾಗಿ ಸೋಂಕಿತ ಕೋಳಿಗಳು ಆಹಾರ ತಿನ್ನುವುದಿಲ್ಲ. ಮೊಟ್ಟೆ ಉತ್ಪಾದನೆ ಕಡಿಮೆಯಾಗುತ್ತದೆ. ಹೆಚ್ಚು ಓಡಾಡುವುದಿಲ್ಲ. ಕಣ್ಣುಗಳು ತೇವಗೊಂಡಿರುತ್ತವೆ. ರೆಕ್ಕೆಗಳು ಕೆದರಿರುತ್ತವೆ. ನೆತ್ತಿ ಮತ್ತು ಜೋಲು ದೊಗಲುವಿನಲ್ಲಿ (ಕುತ್ತಿಗೆಯಲ್ಲಿ ಜೋಲಾಡುವ ಭಾಗ) ದ್ರವ ಸಂಗ್ರಹವಾಗುತ್ತದೆ. ಕೆಮ್ಮೂ ಕಾಡಬಹುದು. ತಲೆ ಭಾಗ ಊದಿಕೊಳ್ಳುತ್ತದೆ. ಕಾಲಿನ ಚರ್ಮದ ಅಡಿಯಲ್ಲಿ ರಕ್ತಸ್ರಾವವೂ ಕಾಣಿಸಿಕೊಳ್ಳಬಹುದು. ದಿಢೀರ್ ಸಾವು ಕೂಡ ಸಂಭವಿಸುತ್ತದೆ.
ಲಸಿಕೆ ಅಭಿವೃದ್ಧಿಗೆ ಅಮೆರಿಕ ನೆರವು
ಸದ್ಯ ಹಕ್ಕಿಜ್ವರಕ್ಕೆ ಲಸಿಕೆ ಇಲ್ಲ. ವಿವಿಧ ಕಂಪನಿಗಳು ಲಸಿಕೆಯ ತಯಾರಿಕೆಯಲ್ಲಿ ತೊಡಗಿವೆ. ಲಸಿಕೆ ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡುವುದಕ್ಕಾಗಿ ಅಮೆರಿಕವು ಕಂಪನಿಗಳಿಗೆ ಆರ್ಥಿಕವಾಗಿ ನೆರವು ನೀಡಲು ಮುಂದಾಗಿದೆ.
ಅಮೆರಿಕದ ಆರೋಗ್ಯ ಇಲಾಖೆಯು ಹಕ್ಕಿ ಜ್ವರಕ್ಕೆ ಎಂಆರ್‌ಎನ್ಎ ಲಸಿಕೆ ತಯಾರಿಸುವುದಕ್ಕಾಗಿ ಔಷಧ ತಯಾರಿಕಾ ಕಂಪನಿ ಮಾಡರ್ನಾಗೆ 59 ಕೋಟಿ ಡಾಲರ್‌ಗಳಷ್ಟು (₹5,109 ಕೋಟಿ) ನೆರವು ನೀಡಲು ನಿರ್ಧರಿಸಿದೆ. ಮಾಡರ್ನಾ ಕಂಪನಿಯು ಅಭಿವೃದ್ಧಿ ಪಡಿಸುತ್ತಿರುವ ಲಸಿಕೆಯು ಈಗ ಅಮೆರಿಕದಲ್ಲಿ ಪಕ್ಷಿಗಳು ಮತ್ತು ಹಸುಗಳಲ್ಲಿ ಕಾಣಿಸಿಕೊಂಡಿರುವ ವೈರಸ್‌ನ ರೂಪಾಂತರ ತಳಿಯ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಅಮೆರಿಕದಲ್ಲಿ ಮೃತಪಟ್ಟಿದ್ದ 65 ವರ್ಷದ ಸೋಂಕಿತ ವ್ಯಕ್ತಿಯಲ್ಲಿ ಎಚ್5ಎನ್1ನ ಡಿ1.1 ರೂಪಾಂತರ ತಳಿ ಪತ್ತೆಯಾಗಿತ್ತು. ಕೋಳಿಗಳಲ್ಲಿ ಮತ್ತು ಪಕ್ಷಿಗಳಲ್ಲೂ ಇದೇ ವೈರಸ್ ಕಾಣಿಸಿಕೊಂಡಿದೆ. ಸೋಂಕಿತ ಹಸುಗಳಲ್ಲಿ ಬಿ3.13 ತಳಿ ಕಂಡು ಬಂದಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ಹೇಳಿದೆ.
ಮನುಷ್ಯರಿಂದ ಮನುಷ್ಯರಿಗೆ ಹರಡದು
ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡ ಐದು ವರ್ಷಗಳ ಬಳಿಕ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಪಕ್ಷಿಗಳು ಮತ್ತು ಜಾನುವಾರುಗಳಲ್ಲಿ ಹಕ್ಕಿ ಜ್ವರ ತೀವ್ರವಾಗಿ ಕಾಣಿಸಿಕೊಳ್ಳುತ್ತಿದೆ. ಅಮೆರಿಕದ ಕ್ಯಾಲಿಫೋರ್ನಿಯಾದ ಹೈನೋದ್ಯಮದ ಮೇಲೆ ಈ ಕಾಯಿಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಅಲ್ಲಿನವರು ಇದನ್ನು ‘ಹಸುಗಳ ಕೋವಿಡ್’ ಎಂದು ಕರೆದಿದ್ದಾರೆ. ಹೀಗೆಯೇ ಮುಂದುವರಿದರೆ, ಇದು ಕೋವಿಡ್ ಮಾದರಿಯ ಮತ್ತೊಂದು ಸಾಂಕ್ರಾಮಿಕ ರೋಗ ಆಗುವ ಸಾಧ್ಯತೆ ಇದೆ ಎಂಬ ಚರ್ಚೆಗಳು ನಡೆಯುತ್ತಿದ್ದರೂ ಮನುಷ್ಯರಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಈ ಕಾಯಿಲೆ ಹರಡುವ ಅಪಾಯ ಕಡಿಮೆ ಎಂದು ಹೇಳಲಾಗುತ್ತಿದೆ. ಏಕೆಂದರೆ, ಈ ವೈರಸ್ ಮನುಷ್ಯರಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಹಕ್ಕಿಗಳು ಇಲ್ಲವೇ ಪ್ರಾಣಿಗಳ ನೇರ ಸಂಪರ್ಕಕ್ಕೆ ಬಂದವರಲ್ಲಷ್ಟೇ ಈವರೆಗೆ ಕಾಣಿಸಿಕೊಂಡಿದೆ.
ಕೋಳಿ ಮೊಟ್ಟೆ ಸುರಕ್ಷಿತವೇ?
ಕೋಳಿ ಮೊಟ್ಟೆ ತಿನ್ನುವುದರಿಂದ ಹಕ್ಕಿ ಜ್ವರ ಬರುವುದೇ ಎಂಬ ಗೊಂದಲ ಹಲವರಲ್ಲಿದೆ. ಸೋಂಕಿತ ಕೋಳಿಯ ಮೊಟ್ಟೆಯನ್ನು ಬೇಯಿಸಿ ತಿಂದರೆ ಯಾವ ಸಮಸ್ಯೆ ಇಲ್ಲ. ಬೇಯಿಸಿದಾಗ, ಅದರಲ್ಲಿನ ವೈರಸ್ ಸಾಯುತ್ತದೆ ಎಂದು ಹೇಳುತ್ತಾರೆ ತಜ್ಞರು. ಆದರೆ, ಯಾವುದೇ ಕಾರಣಕ್ಕೂ ಹಸಿ ಮೊಟ್ಟೆ ತಿನ್ನಬಾರದು ಎನ್ನುವುದು ಅವರ ಸಲಹೆ.
ಹಕ್ಕಿ ಜ್ವರ ಸೋಂಕಿತ ಹಸುವಿನ ಹಾಲಿನಲ್ಲಿ ಎಚ್5ಎನ್1 ವೈರಸ್‌ಗಳು ಭಾರಿ ಪ್ರಮಾಣದಲ್ಲಿ ಇರುತ್ತವೆ. ಆದರೆ, ಆ ಹಾಲನ್ನು ಕುದಿಸಿದರೆ, ಯಾವುದೇ ಭಯವಿಲ್ಲದೇ ಹಾಲನ್ನು ಕುಡಿಯಬಹುದು.
ಎಚ್5ಎನ್1: 1996ರಿಂದ 2025ರವರೆಗೆ
1996: ಚೀನಾದ ಗ್ವಾಂಗ್‌ಡಾಂಗ್‌ನ ಕೋಳಿಫಾರ್ಮ್‌ನಲ್ಲಿ ಮೊದಲ ಬಾರಿಗೆ ವೈರಸ್ ಪತ್ತೆ
1997: ಹಾಂಗ್‌ಕಾಂಗ್‌ನಲ್ಲಿ ಸೋಂಕಿನಿಂದ ಮೊದಲ ಬಾರಿಗೆ ವ್ಯಕ್ತಿ ಸಾವು
2005: ಕಾಡಿನಲ್ಲಿರುವ ಪಕ್ಷಿಗಳಿಗೂ ಹರಡಿದ ಜ್ವರ. ವೈರಸ್‌ನ ಹೊಸ ರೂಪಾಂತರ ತಳಿಗಳ ಪತ್ತೆ
2020: ವರ್ಷ ಪೂರ್ತಿ ವನ್ಯಪಕ್ಷಿಗಳ ದೇಹದಲ್ಲಿ ಉಳಿದುಕೊಳ್ಳುವ ಸಾಮರ್ಥ್ಯವಿರುವ ತಳಿ ಪತ್ತೆ
2020–22: ನಿರ್ದಿಷ್ಟ ಪ್ರದೇಶದ ಕಾಡಿನ ಪಕ್ಷಿಗಳಲ್ಲಿ ಕಾಣಿಸಿಕೊಳ್ಳಲು ಆರಂಭ
2021: ಉತ್ತರ ಅಮೆರಿಕದಲ್ಲಿ ಕಾಣಿಸಿಕೊಂಡ ಸೋಂಕು
2022: ದಕ್ಷಿಣ ಅಮೆರಿಕದಲ್ಲಿ ಮೊದಲ ಬಾರಿಗೆ ಪತ್ತೆ
2024: ಹಿಮಖಂಡ ಅಂಟಾರ್ಕ್ಟಿಕಾದಲ್ಲೂ ದೃಢಪಟ್ಟ ವೈರಸ್
2024, ಡಿಸೆಂಬರ್: ಅಮೆರಿಕದಲ್ಲಿ ತೀವ್ರಗೊಂಡ ಸೋಂಕು. ಮನುಷ್ಯರಲ್ಲೂ ಕಾಣಿಸಿಕೊಂಡ ಹಕ್ಕಿ ಜ್ವರ
2024 ಅಕ್ಟೋಬರ್: ಅಮೆರಿಕದ ಒರೆಗಾನ್‌ನಲ್ಲಿ ಹಂದಿಗಳಲ್ಲಿ ವೈರಸ್ ಪತ್ತೆ
2025 ಜನವರಿ:ಅಮೆರಿಕದಲ್ಲಿ 65 ವರ್ಷದ ವೃದ್ಧ ಸಾವು
ಆಧಾರ: ಪಿಟಿಐ, ರಾಯಿಟರ್ಸ್, ಡೌನ್ ಟು ಅರ್ಥ್, ಬಿಬಿಸಿ, ದಿ ನ್ಯೂಯಾರ್ಕ್ ಟೈಮ್ಸ್, ಡಬ್ಲ್ಯುಎಚ್‌ಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.