ನನ್ನೂರು ಬಾಂಬೆ (ಈಗಿನ ಮುಂಬೈ). ಯಾವುದೋ ಕಾರಣಕ್ಕೆ ಬೇಸತ್ತು ಬಾಂಬೆ ತೊರೆದು ಬೆಂಗಳೂರಿಗೆ ಆಕಸ್ಮಿಕವಾಗಿ ಕಾಲಿಟ್ಟೆ. ಆಗ ನನ್ನ ಕೈಯಲ್ಲಿದ್ದದ್ದು ಕೇವಲ ₹ 2,000. ಇಲ್ಲಿಗೆ ಬಂದ ಮೇಲೆ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ.
ರಾಜಾಜಿನಗರದ ಭಾಷ್ಯಂ ವೃತ್ತದ ಬಳಿ ಚಿಕ್ಕ ನಿಂಬೆ ಜ್ಯೂಸ್ ಅಂಗಡಿ (ಒಂದು ಟೇಬಲ್ ಹಾಗೂ ಸ್ಟೀಲ್ ಪಾತ್ರೆ) ಇಟ್ಟೆ. ಮಾರುಕಟ್ಟೆಗೆ ಹೋಗಿ ಹರಾಜಿನಲ್ಲಿ ಒಂದು ಮೂಟೆ ನಿಂಬೆ ಹಣ್ಣು ತಂದು ಜ್ಯೂಸ್ ವ್ಯಾಪಾರ ಶುರುಮಾಡಿದೆ. ಒಂದು ಲೋಟ ನಿಂಬೆ ಜ್ಯೂಸ್‌ಗೆ ಆಗ ₹ 40 ಪೈಸೆ ಇತ್ತು.ಆ ವ್ಯಾಪಾರ ಕ್ರಮೇಣ ಕೈಹಿಡಿಯಿತು.
ಈಗ ಹೋಟೆಲ್ ಉದ್ಯಮದಲ್ಲಿ ತಕ್ಕಮಟ್ಟಿಗೆ ಹೆಸರು ಮಾಡಿದ್ದೇನೆ. ವಾಸ್ತವವಾಗಿ, ನಾನು ಈ ಉದ್ಯಮಕ್ಕೆ ಬರಬೇಕು ಅಂದುಕೊಂಡಿರಲಿಲ್ಲ. ಭಾಷ್ಯಂ ವೃತ್ತದ ಬಳಿ ಪರಿಚಯಸ್ಥರೊಬ್ಬರ ಖಾಲಿ ಜಾಗವೊಂದಿತ್ತು. ಸ್ನೇಹಿತನ ಸಲಹೆಯಂತೆ ಆ ಜಾಗದಲ್ಲಿ 1980ರಲ್ಲಿ ಸಾಗರ್ ಹೋಟೆಲ್ ಶುರುಮಾಡಿದೆ. ಅಲ್ಲಿಂದ ನನ್ನ ಹೋಟೆಲ್ ಉದ್ಯಮದ ಜೀವನ ಪ್ರಾರಂಭವಾಯಿತು.
ಜ್ಯೂಸ್ ಅಂಗಡಿ ಕ್ಲಿಕ್ ಆದಂತೆಯೇ ರಾಜಾಜಿನಗರದ ನವರಂಗ್ ಚಿತ್ರಮಂದಿರ ಬಳಿಯ ಸಾಗರ್ ಹೋಟೆಲ್ ಸಹ ಕ್ಲಿಕ್ ಆಯಿತು. ಅದನ್ನೀಗ ಸಮೀಪದ ಕೆಎಲ್‌ಇ ಕಾಲೇಜು ಬಳಿ ಸ್ಥಳಾಂತರಿಸಿದ್ದೇವೆ. ಅಲ್ಲೂ ಉತ್ತಮವಾಗಿಯೇ ವ್ಯಾಪಾರವಾಗುತ್ತಿದೆ. ಕ್ರಮೇಣ, ವಿಜಯನಗರ ಹಾಗೂ ಶೇಷಾದ್ರಿಪುರದ ಬಳಿ ಎರಡು ಶಾಖೆಗಳನ್ನು ಪ್ರಾರಂಭಿಸಿದೆ.
1980ರಿಂದ ಈ ಕ್ಷಣದವರೆಗೂ ಹೋಟೆಲ್‌ನಲ್ಲಿ ಗುಣಮಟ್ಟದ ಹಾಗೂ ರುಚಿಕರವಾದ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಿದ್ದೇನೆ. ಸೇವೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಗ್ರಾಹಕರ ಸಂತೃಪ್ತಿಗೆ ಒತ್ತು ನೀಡಿದ್ದೇನೆ. ಹೀಗಾಗಿಯೇ, 38 ವರ್ಷಗಳಿಂದ ಸಾಕಷ್ಟು ಗ್ರಾಹಕರು ನಮ್ಮ ಹೋಟೆಲ್‌ಗೆ ಬರುತ್ತಾರೆ. ಆ ವಿಶ್ವಾಸ ಉಳಿಸಿಕೊಂಡಿರುವುದೇ ನನಗೆ ಹೆಮ್ಮೆಯ ವಿಚಾರ. ಈ ಉದ್ಯಮದಲ್ಲಿ ನಾನು ಉಳಿದುಕೊಳ್ಳಲು ಈ ವಿಶ್ವಾಸವೇ ಜೀವಾಳ.
ಹೋಟೆಲ್ ಉದ್ಯಮಕ್ಕೂ ಪೂರಕವಾಗಿ ನಾನು ಕೇಟರಿಂಗ್ ಶುರುಮಾಡಿದೆ. ಬಹುಶಃ ಆಗಿನ ಕಾಲಕ್ಕೆ ನಗರದಲ್ಲಿ ಸಣ್ಣಮಟ್ಟದ ಕೇಟರಿಂಗ್ ಪೂರೈಕೆ ವ್ಯವಸ್ಥೆ ಮಾತ್ರ ಇತ್ತು. ಬಾಂಬೆ ಹಿನ್ನೆಲೆಯುಳ್ಳ ನಾನು ಅಲ್ಲಿನಂತೆಯೇ ಇಲ್ಲಿಯೂ ದೊಡ್ಡ ಮಟ್ಟದ ಕೇಟರಿಂಗ್ ಪೂರೈಕೆ ಪರಿಚಯಿಸಿದೆ. ಸುಮಾರು 200ಕ್ಕೂ ಅಧಿಕ ಖಾದ್ಯಗಳನ್ನು ಏಕಕಾಲದಲ್ಲಿ ಪೂರೈಕೆ ಮಾಡಿದ್ದು ಅಂದಿನ ಸನ್ನಿವೇಶಕ್ಕೆ ನಾನೇ ಮೊದಲು ಎಂದರೆ ಅತಿಶಯೋಕ್ತಿಯಲ್ಲ.
ನಾನು ಕಣ್ಣಾರೆ ಕಂಡಂತೆ ಹೋಟೆಲ್ ಉದ್ಯಮ ಇಂದು ಇಡೀ ಬೆಂಗಳೂರನ್ನೂ ಆವರಿಸಿದೆ. ನಾನು ಇಲ್ಲಿಗೆ ಬಂದ ಸಮಯದಲ್ಲಿ ಈ ಉದ್ಯಮ ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ. ಆದರೆ, ಇಂದು ಈ ಉದ್ಯಮದ ವ್ಯಾಪ್ತಿಯನ್ನು ನೋಡಿದರೆ ದಂಗಾಗುತ್ತೇವೆ. ಕಾಲ ಬದಲಾದಂತೆ ಉದ್ಯಮದ ವ್ಯಾಪ್ತಿಯೂ ವಿಸ್ತರಿಸಿಕೊಳ್ಳುತ್ತಿದೆ. ತಂತ್ರಜ್ಞಾನದಿಂದ ಮತ್ತೊಂದು ಮಜಲು ತಲುಪಿದೆ ಈ ಉದ್ಯಮ.ಗ್ರಾಹಕರ ಬೇಡಿಕೆ, ಆಲೋಚನೆಯೂ ವಿಭಿನ್ನತೆಯಿಂದ ಕೂಡಿದೆ.
ಬದಲಾವಣೆಗೆ ಒಗ್ಗಿಕೊಳ್ಳುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಸಾಧ್ಯವಾದದ್ದನ್ನು ನಾನೂ ಅನುಕರಿಸಿದ್ದೇನೆ. ಆದರೆ, ಈ ಸ್ವಿಗ್ಗಿ ಮುಂತಾದ ಹೋಮ್ ಡೆಲಿವರಿಗಳ ಬಗ್ಗೆ ನನ್ನ ಆಕ್ಷೇಪವಿದೆ. ಅವು ಹೋಟೆಲ್‌ಗಳ ಅಸ್ಮಿತೆಯನ್ನು ಕಸಿದುಕೊಂಡಿವೆ. ಗ್ರಾಹಕರು ಅಷ್ಟೇ ಅತಿಯಾಗಿ ಅವುಗಳ ಅವಲಂಬನೆ ಆಗದೇ, ಹೋಟೆಲ್‌ಗಳಿಗೆ ಬಂದು ತಾಜಾ, ರುಚಿಕರವಾದ ಬಿಸಿ ಆಹಾರವನ್ನು ಸೇವಿಸಬೇಕು ಎಂಬುದು ನನ್ನ ವಿನಮ್ರ ಮನವಿ.
ನಾನು ಇದುವರೆಗೆ ಯಾವುದೇ ರೀತಿಯ ಪ್ರಚಾರಕ್ಕೆ ಮುಂದಾಗಿಲ್ಲ. ಗ್ರಾಹಕರ ಬಾಯಿಯೇ ನನಗೆ ಪ್ರಚಾರದ ಮಾಧ್ಯಮ. ಹೋಟೆಲ್‌ಗೆ ಬರುವ ಹಾಗೂ ನಾನು ಪೂರೈಸುವ ಕೆಟರಿಂಗ್ ಆಹಾರ ಸೇವಿಸುವವರು ನಮ್ಮ ಆಹಾರ ಹಾಗೂ ರುಚಿಯ ಬಗ್ಗೆ ಇತರಿಗೆ ಹೇಳುತ್ತಾರೆ. ಅವರು ಇನ್ನಷ್ಟು ಮಂದಿಗೆ ತಿಳಿಸುತ್ತಾರೆ. ನಮ್ಮ ಆಹಾರಕ್ಕೆ ಗ್ರಾಹಕರು ಸಂತೃಪ್ತರಾಗುವುದೇನಮ್ಮ ಸಂತೃಪ್ತಿ.
ನಮ್ಮ ಹೋಟೆಲ್‌ಗಳಲ್ಲಿ ಸಿಗುವ ಎಲ್ಲ ಖಾದ್ಯಗಳು ವಿಶೇಷವೇ. ಪಾವ್ ಬಜ್ಜೀ, ಪಂಜಾಬಿ ಶೈಲಿಯ ಖಾದ್ಯಗಳು, ಚೈನೀಸ್ ಖಾದ್ಯಗಳು, ಚಾಟ್ಸ್, ಜ್ಯೂಸ್‌ಗೆ ಹೆಚ್ಚಿನ ಬೇಡಿಕೆಯಿದೆ.
ಪಾವ್ ಭಾಜೀ ಪರಿಚಯಿಸಿದವರಲ್ಲಿ ನಾನೂ ಒಬ್ಬ
ಅಂದಿನ ಕಾಲಕ್ಕೆಪಾವ್ ಭಾಜೀ ಬಾಂಬೆಯಲ್ಲಿ ಸಿಕ್ಕಾಪಟ್ಟೆ ಫೇಮಸ್. ಇಲ್ಲಿನ ಬಹುತೇಕರಿಗೆ ಅದರ ಬಗ್ಗೆ ಗೊತ್ತಿರಲಿಲ್ಲ. ಹೀಗಾಗಿ, ಇಲ್ಲಿಯೂ ಬಾಂಬೆ ಶೈಲಿಯ ಪಾವ್ ಭಾಜೀ ಪರಿಚಯಿಸಿದೆ. ಗ್ರಾಹಕರಿಂದ ಅದಕ್ಕೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿತು. ಕ್ರಮೇಣ, ಬಾಂಬೆ ಶೈಲಿಯ ಶುದ್ಧ ಸಸ್ಯಾಹಾರ ಖಾದ್ಯಗಳನ್ನು ಇಲ್ಲಿ ಪರಿಚಯಿಸತೊಡಗಿದೆ.
ಗಾಯಿತ್ರಿ ವಿಹಾರ
ಮೈಸೂರು ಮಹಾರಾಜರ ಕಡೆಯಿಂದ ಲೀಸ್‌ಗೆ ಅರಮನೆ ಮೈದಾನದಲ್ಲಿ ಜಾಗ ಪಡೆದು ಗಾಯಿತ್ರಿ ವಿಹಾರ ಸ್ಥಾಪಿಸಿದೆ. ಈ ಜಾಗವನ್ನು ಪ್ರಾರಂಭದಲ್ಲಿ ಮದುವೆಗೆ ಬಾಡಿಗೆಗಷ್ಟೇ ಕೊಡುತ್ತಿದ್ದೆ. ಈಗ ಇಡೀ ಮದುವೆ ಉಸ್ತುವಾರಿಯ ಸಂಪೂರ್ಣ ಪ್ಯಾಕೇಜ್ ಅನ್ನು ನಿರ್ವಹಿಸುತ್ತಿದ್ದೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.